ಕರ್ನಾಟಕ

ನ್ಯಾಯ ಸಿಗದಿದ್ದರೆ ಸಂತ್ರಸ್ತರು ಏನು ಮಾಡಬೇಕು: ದಲಿತರ ಮೇಲಿನ ದೌರ್ಜನ್ಯ ಸಂವಾದದಲ್ಲಿ ತಾರಕಂ ಪ್ರಶ್ನೆ

Pinterest LinkedIn Tumblr

tarakam

ಬೆಂಗಳೂರು: ದೌರ್ಜನ್ಯದ ದಾಳಿ ವಿರುದ್ಧ ಪ್ರತಿ ದಾಳಿ ಮಾಡಿದರೆ ಅನಾಗರಿಕ ವರ್ತನೆ ಎನ್ನುವುದಾದರೆ, ಕಾನೂನು ಮೂಲಕ ಹೋರಾಡಿದರೂ ನ್ಯಾಯ ಸಿಗದಿದ್ದರೆ ಶೋಷಣೆಗೊಳಗಾದ ಜನ ಏನು ಮಾಡಬೇಕು ಎಂದು ಹೈದರಾಬಾದ್‌ನ ಹಿರಿಯ ನ್ಯಾಯವಾದಿ ಬೊಜ್ಜಾ ತಾರಕಂ ಸರಕಾರವನ್ನು ಪ್ರಶ್ನಿಸಿದ್ದಾರೆ.

‘ದೌರ್ಜನ್ಯ ಪ್ರಕರಣಗಳಲ್ಲಿ ದಲಿತರಿಗೆಟುಕದ ನ್ಯಾಯ; ಸವಾಲುಗಳು ಹಾಗೂ ಸಾಧ್ಯತೆಗಳು’ ವಿಷಯವಾಗಿ ಕರ್ನಾಟಕ ಜನಶಕ್ತಿ ಹಾಗೂ ಕಂಬಾಲಪಲ್ಲಿ ಹೋರಾಟ ಸಮಿತಿ ಸಂಯುಕ್ತವಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಮಂಥನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

”ನ್ಯಾಯಾಂಗದಲ್ಲೂ ನ್ಯಾಯ ಸಿಗದ ಶೋಷಿತರು ಯಾವ ನಿಲುವು ತಳೆಯಬೇಕು ಎಂಬುದನ್ನು ತಿಳಿಯುವ ಹಕ್ಕು ಪ್ರಜೆಗಳಿಗೆ ಇದೆ. ಹೀಗಾಗಿ ಸಂಸತ್ ಹಾಗೂ ನ್ಯಾಯಾಂಗ ಈ ವಿಚಾರದಲ್ಲಿ ಜಂಟಿಯಾಗಿ ತಿಳಿಸಬೇಕು,” ಎಂದು ಅಭಿಪ್ರಾಯಪಟ್ಟರು.

”ದಲಿತರನ್ನು ಜೀವಂತವಾಗಿ ಸುಟ್ಟ ಕಂಬಾಲಪಲ್ಲಿ ಪ್ರಕರಣದ ಎಲ್ಲ 32 ಆರೋಪಿಗಳ ಖುಲಾಸೆ, ತಮಿಳುನಾಡಿನ ಕೀಲ್ವೇಣ್ಮಣಿಯಲ್ಲಿ 41 ದಲಿತರ ಹತ್ಯೆ ಪ್ರಕರಣ, ಬಿಹಾರದ ಲಕ್ಷ್ಮಣಪುರಬಾತೆ ಹಾಗೂ ಬತಾನಿತೋಲ ಗ್ರಾಮಗಳ 21 ದಲಿತರನ್ನು ಕೊಚ್ಚಿದ ಪ್ರಕರಣ, ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ನಾಲ್ವರನ್ನು ಕೊಂದು, ತಾಯಿ ಮಗಳನ್ನು ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣಗಳಲ್ಲಿ ಎಲ್ಲರೂ ನಿರ್ದೋಷಿಗಳಾಗಿದ್ದಾರೆ. ಕಾನೂನಿನ ಮೇಲೆ ನಂಬಿಕೆ ಇಟ್ಟು ದಲಿತರು ನ್ಯಾಯಾಂಗಕ್ಕೆ ಬಂದರೆ ಅಲ್ಲಿಯೂ ನ್ಯಾಯ ಸಿಗುತ್ತಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್‌ನ ಗಮನ ಸೆಳೆಯಲಾಗುವುದು,” ಎಂದು ಹೇಳಿದರು.

ಪ್ರಶ್ನಿಸಬಾರದೇಕೆ?
”ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಅರಸರು. ಒಂದು ಕೋರ್ಟ್ ಸಾಕ್ಷಿ ಆಧರಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದರೆ ಮೇಲಿನ ಕೋರ್ಟ್ ಅದೇ ಸಾಕ್ಷಿಗಳನ್ನು ತಿರಸ್ಕರಿಸಿ ತನಗೆ ಇಷ್ಟ ಬಂದ ಹಾಗೆ ತೀರ್ಪು ನೀಡುತ್ತದೆ. ಸತ್ಯ ಎಂಬುದು ಕೋರ್ಟ್‌ನಿಂದ ಕೋರ್ಟ್‌ಗೆ ಬೇರೆ ಬೇರೆಯಾಗಿರುವುದಿಲ್ಲ. ಈ ವೈರುಧ್ಯಗಳನ್ನು ಪ್ರಶ್ನಿಸಿದರೆ ನ್ಯಾಯಾಂಗ ನಿಂದನೆ ಎಂಬ ಕತ್ತಿ ತೋರಿಸಲಾಗುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

”ನ್ಯಾಯಾಧೀಶರು ದೇವರಲ್ಲ, ಅವರು ಕಾನೂನಿಗಿಂತ ಮೇಲಿನವರಲ್ಲ. ಸಂವಿಧಾನದ ಮುಂದೆ ಎಲ್ಲರೂ ಸಮಾನರು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದಾದರೆ ತಪ್ಪು ತೀರ್ಪು ನೀಡುವ ನ್ಯಾಯಾಧೀಶರನ್ನು ಪ್ರಜೆಗಳು ಪ್ರಶ್ನಿಸಬಾರದೇಕೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾತಿ-ಹಣದ ಮೇಲೆ ತೀರ್ಪು
”ಅತ್ಯಾಚಾರ, ದೌರ್ಜನ್ಯದಂತಹ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಸಾಕ್ಷಿಗಳ ಕೊರತೆ ಎಂಬ ಕಾರಣಕ್ಕೆ ಕೇಸ್‌ಗಳನ್ನು ಮುಕ್ತಾಯಗೊಳಿಸಲಾಗುತ್ತಿದೆ. ಜಾತಿ-ಹಣ ಆಧರಿಸಿ ಉಳ್ಳವರ ಪರವಾಗಿ ತೀರ್ಪು ಬರುತ್ತದೆ ಎಂಬ ಭಾವನೆ ಜನಮನದಲ್ಲಿ ಬೇರೂರಿದೆ. ಅತ್ಯಾಚಾರದ ಪ್ರಕರಣದಲ್ಲಿ ಗಂಡು ಹಾಗೂ ಹೆಣ್ಣು ಮಾತ್ರ ಇರುತ್ತಾರೆ. ಈ ಪ್ರಕರಣದಲ್ಲಿ ಬೇರೆ ಸಾಕ್ಷಿ ಬೇಕಿಲ್ಲ. ಬಲಿಪಶುವಾದವರ ಹೇಳಿಕೆ ಆಧರಿಸಿ ತೀರ್ಪು ನೀಡಬಹುದು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದ್ದರೂ ಅತ್ಯಾಚಾರಿಗಳು ನಿರ್ದೋಷಿಗಳಾಗುತ್ತಿರುವುದು ಹೇಗೆ ಎಂಬುದನ್ನು ಸರಕಾರ ಮತ್ತು ನ್ಯಾಯಾಂಗ ಅಧಿಕಾರಿಗಳು ಜನರಿಗೆ ಉತ್ತರಿಸಬೇಕಿದೆ,” ಎಂದರು.

”ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ದೌರ್ಜನ್ಯಕ್ಕೆ ಒಳಗಾದವರನ್ನೇ ತಪ್ಪಿತಸ್ಥರು ಎಂದು ತೀರ್ಪು ನೀಡುವುದಾದರೆ ನ್ಯಾಯಾಂಗ ವ್ಯವಸ್ಥೆ ಮೇಲೆ ವಿಶ್ವಾಸ ಹೊರಟು ಹೋಗುತ್ತದೆ,” ಎಂದು ಎಚ್ಚರಿಸಿದರು.

ಕರ್ನಾಟಕ ಜನಶಕ್ತಿ ಪ್ರಧಾನ ಸಂಚಾಲಕಿ ಗೌರಿ ”ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಪ್ರತಿ ವರ್ಷ 35 ಸಾವಿರ ಪ್ರಕರಣಗಳು ಹಾಗೂ ದಲಿತ ಮಹಿಳೆಯರ ಮೇಲೆ 1500 ಪ್ರಕರಣಗಳು ದಾಖಲಾಗುತ್ತಿದ್ದರೂ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಹೀಗಿದ್ದೂ, ಮೌನ ವಹಿಸುವ ಯಾವುದೇ ವರ್ತನೆಯು ಅನ್ಯಾಯವನ್ನು ಸಮರ್ಥಿಸಿಕೊಂಡಂತೆ,” ಎಂದು ಎಚ್ಚರಿಸಿದರು.

ಬಿಹಾರದ ಬೇಲಾ ಭಾಟಿಯಾ (ಲಕ್ಷ್ಮಣಪುರ ಬಾತೆ ಪ್ರಕರಣ), ಶಿವನಾಗೇಶ್ವರ ರಾವ್ ಹಾಗೂ ಮೋಸಸ್ (ಚುಂಡೂರು ಪ್ರಕರಣ), ಉಮಾಶಂಕರ್ (ಕಂಬಾಲಪಲ್ಲಿ ಪ್ರಕರಣ) ತಮ್ಮ ಅನುಭವಗಳನ್ನು ಹಂಚಿಕೊಂಡರು. ದಲಿತ ಸಂಘರ್ಷ ಸಮಿತಿಯ ಎನ್. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ತಮಿಳುನಾಡಿನ ಜಾತಿ ನಿರ್ಮೂಲನಾ ಒಕ್ಕೂಟದ ಕಾರ್ಯದರ್ಶಿ ಟಿ.ಶಿವರಾಮನ್ ಸೇರಿದಂತೆ ಇತರೆ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Write A Comment