ಕರ್ನಾಟಕ

ತಂಗಿದ್ದ ಶಂಕಿತ ಉಗ್ರರ ಸಹಾಯಕರು ಮತ್ತು ಕರಾಳ ದಿನದ ದುಃಸ್ವಪ್ನದಲ್ಲಿ ಶಿವಾಜಿ

Pinterest LinkedIn Tumblr

pvec24Nov14dwd3

ಧಾರವಾಡ: ‘ಶಂಕಿತ ಉಗ್ರರ ಸಹಾಯಕರು ಇಲ್ಲಿ ಇದ್ದರು ಎಂಬ ಒಂದೇ ಕಾರಣಕ್ಕೆ ನಿನ್ನೆ ನಡೆಸಿದ ನನ್ನ ವಿಚಾರಣೆ ಹಾಗೂ ನಂತರ­ದಲ್ಲಿ ನೆರೆಹೊರೆಯವರು ನನ್ನನ್ನು ನೋಡುತ್ತಿರುವ ದೃಷ್ಟಿ ನನಗೆ ತೀವ್ರ ನೋವು ತಂದಿದೆ’ ಎಂದು ಆರೋಗ್ಯ ನಗರದ ಮನೆಯ ಮಾಲೀಕ ಶಿವಾಜಿ ಕುಲಕರ್ಣಿ ನುಡಿದರು.

‘ನನ್ನ ಪರಿಸ್ಥಿತಿ ಯಾರಿಗೂ ಬರ­ಬಾರದು. ಈವರೆಗೂ ಬೇರೆ ಬೇರೆ ರಾಜ್ಯಗಳ ಪೊಲೀಸರು ನಮ್ಮ ಮನೆಗೆ ಬಂದಿದ್ದರೂ ಯಾರಿಗೂ ತಿಳಿದಿರಲಿಲ್ಲ. ಆದರೆ ನಿನ್ನೆಯ ಆ ಒಂದು ಘಟನೆ ನನ್ನ ನೆಮ್ಮದಿಯನ್ನು ಹಾಳು ಮಾಡುವುದರ ಜತೆಗೆ ನನ್ನ ಆದಾಯದ ಮೂಲವನ್ನೇ ಕಸಿದುಕೊಂಡು ನನ್ನನ್ನು ಗಾಸಿಗೊಳಿಸಿದೆ’ ಎಂದು ಹೇಳಿದರು.

ಶಂಕಿತ ಉಗ್ರರು ತಂಗಿದ್ದರು ಎನ್ನುವ ವದಂತಿ ಆಧಾರದಲ್ಲಿ ಮೇಲಿಂದ ಮೇಲೆ ಪೊಲೀಸರು ಭೇಟಿ ನೀಡಿದ್ದರಿಂದ ಕುಲಕರ್ಣಿ ಅವರ ಮನೆಯ ಹೊರಭಾಗ­ದಲ್ಲಿ ಬಾಡಿಗೆಗೆ ಇದ್ದ ಫಾರ್ಮಸಿ ಓದುತ್ತಿದ್ದ ಏಳು ವಿದ್ಯಾರ್ಥಿಗಳು ಭಾನುವಾರ ಬೆಳಿಗ್ಗೆ ಮನೆ ಖಾಲಿ ಮಾಡಿದ್ದಾರೆ.

‘ಮಗ ಕುಮಾರ­ಪಟ್ಟಣ­ದಲ್ಲಿ ಪಿಯುಸಿ ಓದುತ್ತಿ­ದ್ದಾನೆ. ಅವನ ವಿದ್ಯಾ­ಭ್ಯಾಸ ಹಾಗೂ ನಮ್ಮ ಬದುಕಿಗೆ ಈ ಮನೆಯೇ ಆಧಾರವಾಗಿತ್ತು. ಮನೆ­ಯನ್ನು ಒಂದಷ್ಟು ಭಾಗವನ್ನಾಗಿ ಮಾಡಿ ವಿದ್ಯಾರ್ಥಿಗಳಿಗೆ ಬಾಡಿಗೆ ನೀಡಿದ್ದೆ. ತಿಂಗಳಿಗೆ ₨ 8,500 ಬಾಡಿಗೆ ಬರು­ತ್ತಿತ್ತು. ಅದರಿಂದಲೇ ಜೀವನ ನಡೆಯುತ್ತಿತ್ತು. ಆದರೆ ಮಾಧ್ಯಮ­ಗಳಲ್ಲಿ ನಿನ್ನೆ ಈ ಕುರಿತು ಸುದ್ದಿಗಳು ಪ್ರಸಾರವಾಗುತ್ತಿದ್ದಂತೆಯೇ ಎಲ್ಲವೂ ನಿಂತಿದೆ. ಬದುಕಿನ ಚಿಂತೆ ಕಾಡುತ್ತಿದೆ’ ಎಂದರು.

‘ಚೆನ್ನೈ, ಹೈದರಾಬಾದ್‌ ಹಾಗೂ ಮುಂಬೈ ಪೊಲೀಸರು ಮನೆಗೆ ಬರುತ್ತಿದ್ದರು. ಚೆನ್ನೈ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ನನ್ನಿಂದ ಮಾಹಿತಿ ಪಡೆದ ನಂತರ ನನ್ನನ್ನು ತಬ್ಬಿಕೊಂಡು ಕೃತಜ್ಞತೆ ಸಲ್ಲಿಸಿದ್ದರು. ಮುಂಬೈನ ಶರ್ಮಾ ಎಂಬ ಪೊಲೀಸ್‌ ಅಧಿಕಾರಿ ನನ್ನ ಕಾಲಿಗೆ ಒಮ್ಮೆ ನಮಸ್ಕರಿಸಿ ಹೋಗಿ­ದ್ದರು. ಮತ್ತೊಮ್ಮೆ ಬಂದಾಗ ನಮ್ಮ ಮನೆಯಲ್ಲಿದ್ದ ದೇವರಿಗೆ ಹಣ್ಣು ತಂದು ಕೈಮುಗಿದಿದ್ದರು. ಆದರೆ ಯಾರೋ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ನುಡಿದರು.

‘ಶನಿವಾರ ಬೆಳಿಗ್ಗೆಯೇ ಚೆನ್ನೈನಿಂದ ಪೊಲೀಸರು ಫೋನ್‌ ಮಾಡಿದ್ದರು. ಪತ್ರಿಕೆಯಲ್ಲಿ ಬಂದಿರುವ ಮಾಹಿತಿ ತಿಳಿದಿದೆ. ಅಲ್ಲಿಗೆ ಸೋರಿಕೆಯಾದ ಮೂಲ ಯಾವುದೆಂದು ತಿಳಿದಿದ್ದರೆ ಆ ಮಾಹಿತಿ ನಮಗೆ ಕೊಡಿ ಎಂದಿದ್ದಾರೆ. ಒಟ್ಟಿನಲ್ಲಿ ಹಾನಗಲ್‌ ತಾಲ್ಲೂಕಿನವನೇ ಆದ ನನಗೆ ಹಾಗೂ ಪೀಠತ್ಯಾಗ ಮಾಡಿದ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರಿಗೆ ಶನಿವಾರ ಕರಾಳವಾಗಿತ್ತು ಎಂಬುದ­ಷ್ಟೇ ಸತ್ಯ’ ಎಂದು ನೊಂದು ನುಡಿದರು.

Write A Comment