ಕರ್ನಾಟಕ

ಮೂಢ ನಂಬಿಕೆ ನಿಷೇಧ ಕಾನೂನು ಜಾರಿಗೆ ಆಗ್ರಹ: ಮಠಾಧೀಶರಿಂದ ಉಪವಾಸ

Pinterest LinkedIn Tumblr

Swamiji_

ಬೆಂಗಳೂರು, ನ.17: ರಾಜ್ಯದಲ್ಲಿ ಮೂಢ ನಂಬಿಕೆಗಳನ್ನು ನಿಷೇಧಿಸುವ ಕಾನೂನು ಜಾರಿಗೊಳಿಸಿ, ಸಾಮಾಜಿಕ ತಾರತಮ್ಯವನ್ನು ನಿವಾರಣೆ ಮಾಡಬೇಕೆಂದು ಒತ್ತಾಯಿಸಿ ಪ್ರಗತಿಪರ ಮಠಾಧೀಶರ ವೇದಿಕೆಯು ಮೂರು ದಿನಗಳ ಉಪವಾಸ ಮುಷ್ಕರ ಆರಂಭಿಸಿದೆ.

ಸೋಮವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿ ನೇತೃತ್ವದಲ್ಲಿ 13 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಮ್ಮಿಕೊಂಡಿರುವ ಉಪವಾಸ ಮುಷ್ಕರದಲ್ಲಿ ನೂರಾರು ಮಠಾಧೀಶರು, ಸಾಹಿತಿಗಳು, ಹೋರಾಟಗಾರರು, ಚಿಂತಕರು ಪಾಲ್ಗೊಂಡಿದ್ದಾರೆ.

ಮಡೆಸ್ನಾನ, ಎಡೆಸ್ನಾನವನ್ನು ನಿಷೇಧಿಸಬೇಕು. ಅತ್ಯಂತ ಹಿಂದುಳಿದ ಮಲೆಕುಡಿಯರ ಏಳಿಗೆಗೆ ಸರಕಾರ ವಿಶೇಷ ಆರ್ಥಿಕ ಯೋಜನೆ ರೂಪಿಸಬೇಕು. ಇದೇ 25, 29 ಹಾಗೂ 30ರಂದು ಮಡೆಸ್ನಾನ ನಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅನಿಷ್ಟ ಕಂದಾಚಾರಗಳನ್ನು ನಿಷೇಧಿಸುವಂತೆ ಸರಕಾರದ ಗಮನ ಸೆಳೆಯಲು ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮೂಢ ನಂಬಿಕೆಗಳ ನಿಷೇಧ ಕಾಯಿದೆಗಾಗಿ ಈಗಾಗಲೇ ಸರಕಾರದ ಎದುರು ಎರಡು ಕರಡು ಮಸೂದೆಗಳಿದ್ದು, ಅವುಗಳನ್ನು ಪರಿಷ್ಕರಿಸಿ ಶಿಫಾರಸು ಮಾಡಲು ಸದನ ಸಮಿತಿ ರಚಿಸಬೇಕು. ಅಲ್ಲದೆ, ನಾಡಿನ ಪ್ರಮುಖ ಮಠಾಧೀಶರ ಸಭೆ ಕರೆದು ಈ ಕಾಯ್ದೆಯ ಬಗ್ಗೆ ಒಮ್ಮತಾಭಿಪ್ರಾಯ ಮೂಡಿಸಲು ಸರಕಾರ ಮುಂದಾಗಬೇಕು ಎಂದು ಮುಷ್ಕರ ನಿರತರು ಆಗ್ರಹಿಸಿದರು.

ಖಾಯಂ ಆಗಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರರನ್ನು ‘ಡಿ’ದರ್ಜೆ ನೌಕರರೆಂದು ಪರಿಗಣಿಸಬೇಕು. ಗುತ್ತಿಗೆ ಪೌರಕಾರ್ಮಿಕರ ಪದ್ಧತಿಯನ್ನು ರದ್ದುಗೊಳಿಸಿ, ಅಂತಹವರನ್ನು ಖಾಯಂಗೊಳಿಸಬೇಕು. ರಾಜ್ಯದ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ‘ಕರ್ನಾಟಕ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಪ್ರಾಧಿಕಾರ’ವನ್ನು ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.

ನಿರ್ಲಕ್ಷಕ್ಕೆ ಒಳಗಾಗಿರುವ ಸಮುದಾಯಗಳ ಸಂಸ್ಕೃತಿಗಳ ಸಂಶೋಧನೆಗಾಗಿ ವಿಶ್ವವಿದ್ಯಾನಿಲಯಗಳ ಅಧ್ಯಯನಕ್ಕಿಂತ ಭಿನ್ನವಾದ ಒಂದು ಸ್ವತಂತ್ರವಾದ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು. ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ಬೆತ್ತಲೆ ಸೇವೆ, ಜೀತ ಪದ್ಧತಿ, ಬಾಲ ಕಾರ್ಮಿಕರ ಶೋಷಣೆ, ಮಲವನ್ನು ಹೊರುವ ಮತ್ತು ಸ್ವಚ್ಛ ಗೊಳಿಸುವ ಕಾರ್ಮಿಕರನ್ನು ನಿಯುಕ್ತಿಗೊಳಿಸುವ ಪದ್ಧತಿಯನ್ನು ನಿಷೇಧಿಸುವ ಕಾನೂನುಗಳು ಜಾರಿಯಲ್ಲಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಗೊಲ್ಲರ ಹಟ್ಟಿಗಳಲ್ಲಿ ಋತುಚಕ್ರದ ವೇಳೆ ಹುಡುಗಿಯರನ್ನು, ಬಾಣಂತಿ ಮಹಿಳೆಯರನ್ನು ಗ್ರಾಮದಿಂದ ಹೊರಗಿಡುವಂತಹ ಅಮಾನವೀಯ ಪದ್ಧತಿಯನ್ನು ನಿಷೇಧಿಸಬೇಕು. ಗೊಲ್ಲರ ಹಟ್ಟಿಗಳನ್ನು ಅಭಿವೃದ್ಧಿಪಡಿಸಲು ಗೊಲ್ಲರ ಹಟ್ಟಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ವೇಶ್ಯಾ ವೃತಿಯನ್ನು ಕಾನೂನುಬದ್ಧಗೊಳಿಸಬೇಕು ಎಂದು ಕೆಲವು ಚಿಂತಕರು ಒತ್ತಾಯಿಸುತ್ತಿದ್ದಾರೆ. ಆದರೆ, ಸರಕಾರ ಈ ವೃತ್ತಿಯಲ್ಲಿರುವ ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಈ ಕೂಪದಿಂದ ಹೊರಗೆ ತಂದು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಅಗತ್ಯ ನೆರವು ನೀಡಬೇಕು. ವೇಶ್ಯಾ ವೃತ್ತಿ ಪುರುಷರ ಸ್ವಾರ್ಥಕ್ಕಾಗಿ ಸೃಷ್ಟಿಯಾಗಿದ್ದು, ಇದರಲ್ಲಿ ಮಹಿಳೆಯರ ಆತ್ಮಗೌರವ ಕಾಪಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ತಾರತಮ್ಯವಿಲ್ಲದೆ, ಸಮಗ್ರ ಕರ್ನಾಟಕವನ್ನು ಅಭಿವೃದ್ಧಿಗೊಳಿಸಬೇಕು. ‘ಹೈ-ಕ’ಭಾಗದ ಅಭಿವೃದ್ಧಿಗಾಗಿ ಜಾರಿಗೊಳಿಸಲಾಗಿರುವ 371(ಜೆ) ಹಾಗೂ ಹಿಂದುಳಿದ ತಾಲೂಕುಗಳನ್ನು ನಂಜುಂಡಪ್ಪ ವರದಿ ಆಧಾರದಲ್ಲಿ ಅಭಿವೃದ್ಧಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಮಾನವ ಹಕ್ಕುಗಳ ಆಯೋಗಕ್ಕೆ ಕೂಡಲೇ ಅರ್ಹ ಮತ್ತು ಯೋಗ್ಯರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಹಂಪಿ ಹಾಗೂ ಚಾಮರಾಜನಗರಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢ ನಂಬಿಕೆಯನ್ನು ವ್ಯವಸ್ಥಿತವಾದ ಕುತಂತ್ರದ ಮೂಲಕ ಹರಡಲಾಗುತ್ತಿದೆ. ಇವೆರಡು ಶೈವ ಕ್ಷೇತ್ರಗಳಾಗಿದ್ದು, ಅವುಗಳಿಗೆ ಮಹತ್ತ್ವ ಲಭ್ಯವಾಗಬಾರದು ಎಂದು ವೈದಿಕ ಬ್ರಾಹ್ಮಣ್ಯ ಈ ರೀತಿ ಮಾಡುತ್ತಿದೆ ಎಂದು ಸ್ವಾಮೀಜಿಗಳು ಕಿಡಿಗಾರಿದರು.

ಚಿಕ್ಕ ಮಕ್ಕಳು, ಬಾಲಕಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಮಾಜ ಎಚ್ಚೆತ್ತುಕೊಳ್ಳಬೇಕು. ಸರಕಾರವು ಇಂತಹ ಪ್ರಕರಣಗಳನ್ನು ಆರು ತಿಂಗಳಲ್ಲಿ ವಿಲೇವಾರಿ ಮಾಡಿ, ಅಪರಾಧಿಗಳಿಗೆ ಶಿಕ್ಷೆ ನೀಡಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಬೇಕು. ಅಲ್ಲದೆ, ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಸುಸಜ್ಜಿತವಾದ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದರು.

ಉಪವಾಸ ಮುಷ್ಕರದಲ್ಲಿ ಸಾಣೇಹಳ್ಳಿಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ, ಬೇಲಿಮಠದ ಶಿವರುದ್ರಸ್ವಾಮಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮಿ, ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಜಾನಪದ ಗಾಯಕ ಬಾನಂದೂರು ಕೆಂಪಯ್ಯ, ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್, ಶಾಸಕ ಬಿ.ಆರ್.ಪಾಟೀಲ್, ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂ.ಪಿ.ನಾಡಗೌಡ, ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮತ್ತಿತರರು ಉಪಸ್ಥಿತರಿದ್ದರು.

http://vbnewsonline.com

Write A Comment