ಪ್ರಮುಖ ವರದಿಗಳು

ಸಿಂಹಳೀಯರಿಗೆ ಸೋಲು, ಭಾರತಕ್ಕೆ ಸರಣಿ

Pinterest LinkedIn Tumblr

umesh-yadvaಹೈದರಾಬಾದ್, ನ.9: ಏಕಪಕ್ಷೀಯವಾಗಿ ಸಾಗಿದ ಮೂರನೆ ಏಕದಿನ ಪಂದ್ಯದಲ್ಲಿ ಇಂದು ಆತಿಥೇಯ ಭಾರತ ತಂಡ ಶ್ರೀಲಂಕಾ ತಂಡವನ್ನು 6 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿದೆ.

ಈ ಗೆಲುವಿನೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಇಂದು ಗೆಲ್ಲಲು 243 ರನ್ ಗುರಿ ಪಡೆದಿದ್ದ ಭಾರತ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್(91 ರನ್, 79 ಎಸೆತ, 8 ಬೌಂಡರಿ, 1 ಸಿಕ್ಸರ್), ನಾಯಕ ವಿರಾಟ್ ಕೊಹ್ಲಿ(53) ಅವರ ಅರ್ಧಶತಕ, ಅಜಿಂಕ್ಯ ರಹಾನೆ(31) ಹಾಗೂ ಅಂಬಟಿ ರಾಯುಡು(35) ಅವರ ಉಪಯುಕ್ತ ಕಾಣಿಕೆ ನೆರವಿನಿಂದ 44.1 ಓವರ್‌ಗಳಲ್ಲಿ 245 ರನ್ ಗಳಿಸಿ ಗೆಲುವಿನ ದಡ ಸೇರಿತು. ಮೊದಲ ವಿಕೆಟ್‌ಗೆ ರಹಾನೆಯೊಂದಿಗೆ 62 ರನ್ ಜೊತೆಯಾಟ ನಡೆಸಿದ ಧವನ್ ಅವರು ರಾಯುಡು ಹಾಗೂ ಕೊಹ್ಲಿ ಅವರೊಂದಿಗೆ ಕ್ರಮವಾಗಿ 69 ಹಾಗೂ 70 ರನ್ ಜೊತೆಯಾಟವನ್ನು ನಡೆಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

ಅರ್ಧಶತಕ ಸಿಡಿಸಿದ ಕೊಹ್ಲಿ ಅತ್ಯಂತ ವೇಗವಾಗಿ 6,000 ರನ್ ಪೂರೈಸಿದ ಸಾಧನೆ ಮಾಡಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವಿಫಲವಾದ ಶ್ರೀಲಂಕಾ ತಂಡ ಭಾರತಕ್ಕೆ ಒತ್ತಡ ಹೇರಲು ವಿಫಲವಾಯಿತು. ಆದರೆ, ಶತಕ ಸಿಡಿಸಿ ಮಿಂಚಿದ ಹಿರಿಯ ಬ್ಯಾಟ್ಸ್‌ಮನ್ ಮಹೇಲ ಜಯವರ್ಧನೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಮಹೇಲ ಜಯವರ್ಧನೆ ಅವರ ಏಕಾಂಗಿ ಹೋರಾಟದ ನಡುವೆಯೂ ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ 48.2 ಓವರ್‌ಗಳಲ್ಲಿ 242 ರನ್‌ಗೆ ಸರ್ವಪತನಗೊಂಡಿತು. ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತು. ಮೋಡ ಕವಿದ ವಾತಾವರಣದ ಲಾಭವೆತ್ತಿದ ಉಮೇಶ್ ಯಾದವ್(4-53) ಹಾಗೂ ಅಕ್ಷರ್ ಪಟೇಲ್(3-40) ಲಂಕಾವನ್ನು 250ರೊಳಗೆ ಕಟ್ಟಿಹಾಕಲು ಯಶಸ್ವಿಯಾದರು.

ಶ್ರೀಲಂಕಾ ಇನಿಂಗ್ಸ್‌ನಲ್ಲಿ 17ನೆ ಶತಕ ಸಿಡಿಸಿದ ಮಹೇಲ ಜಯರ್ಧನೆ (118ರನ್, 124 ಎಸೆತ, 12 ಬೌಂಡರಿ, 1 ಸಿಕ್ಸರ್) ಹಾಗೂ ತಿಲಕರತ್ನೆ ದಿಲ್ಶನ್ ಹೊರತುಪಡಿಸಿ ಉಳಿದವರೆಲ್ಲರೂ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಮೊದಲ ಓವರ್‌ನ ಅಂತಿಮ ಎಸೆತದಲ್ಲಿ ಲಂಕಾದ ಆರಂಭಿಕ ಆಟಗಾರ ಕುಶಾಲ್ ಪೆರೆರಾ ವಿಕೆಟನ್ನು ಕಬಳಿಸಿದ ಯಾದವ್ ಭಾರತಕ್ಕೆ ಮೇಲುಗೈ ಒದಗಿಸಿದರು. ತನ್ನ ಎರಡನೆ ಓವರ್‌ನ ಮೊದಲ ಎಸೆತದಲ್ಲಿ ಅಪಾಯಕಾರಿ ಕುಮಾರ ಸಂಗಕ್ಕರ ಖಾತೆ ತೆರೆಯದಂತೆ ನೋಡಿಕೊಂಡ ಯಾದವ್ ಹ್ಯಾಟ್ರಿಕ್ ಹಾದಿಯಲ್ಲಿದ್ದರು. ಆದರೆ, ಜಯವರ್ಧನೆ ಹ್ಯಾಟ್ರಿಕ್ ನಿರಾಕರಿಸಿದರು. ಈ ಹಂತದಲ್ಲಿ ಲಂಕಾ 7 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗ ಜೊತೆಯಾದ ಜಯವರ್ಧನೆ ಹಾಗೂ ದಿಲ್ಶನ್ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿ 3ನೆ ವಿಕೆಟ್‌ಗೆ 105 ರನ್ ಸೇರಿಸಿದರು. ಅಶ್ವಿನ್ ಎಸೆತವನ್ನು ಬೌಂಡರಿಗೆ ಅಟ್ಟಿದ ದಿಲ್ಶನ್ 39ನೆ ಅರ್ಧಶತಕ ತಲುಪಿದರು. 23ನೆ ಓವರ್‌ಗೆ ಲಂಕಾ ಸ್ಕೋರ್ 100 ದಾಟಿತು. ಜಯವರ್ಧನೆ 75ನೆ ಅರ್ಧಶತಕವನ್ನು ತಲುಪಿದರು.

ದಿಲ್ಶನ್-ಜಯವರ್ಧನೆ ಜೋಡಿ ಕ್ರೀಸ್‌ನಲ್ಲಿ ತಳವೂರಿದಾಗ ನಾಯಕ ವಿರಾಟ್ ಕೊಹ್ಲಿ ಪಾರ್ಟ್‌ಟೈಮ್ ಬೌಲರ್ ರಾಯುಡು(1-16) ಅವರನ್ನು ದಾಳಿಗೆ ಇಳಿಸಿದರು. ದಿಲ್ಶನ್ ವಿಕೆಟನ್ನು ಕಬಳಿಸಿದ ರಾಯುಡು ನಾಯಕನ ವಿಶ್ವಾಸವನ್ನು ಉಳಿಸಿಕೊಂಡರು. ಶ್ರೀಲಂಕಾ 30 ಹಾಗೂ 35ನೆ ಓವರ್‌ನ ನಡುವೆ ಬ್ಯಾಟಿಂಗ್ ಪವರ್‌ಪ್ಲೇ ಆಯ್ದುಕೊಂಡು ಕೈಸುಟ್ಟುಕೊಂಡಿತು. ಪವರ್‌ಪ್ಲೇ ವೇಳೆ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್(10), ಅಶಾನ್ ಪ್ರಿಯಾಂಜನ್(2) ಚತುರಂಗ ಡಿಸಿಲ್ವಾ(2) ಅವರನ್ನು ಕೇವಲ 16 ರನ್ ಸೇರಿಸುವಷ್ಟರಲ್ಲಿ ಕಳೆದುಕೊಂಡಿತು. ಆಲ್‌ರೌಂಡರ್ ತಿಸ್ಸಾರ ಪೆರೆರ(1) ವಿಕೆಟನ್ನು ಕಬಳಿಸಿದ ಯಾದವ್ ಲಂಕಾದ ಸಂಕಷ್ಟವನ್ನು ಹೆಚ್ಚಿಸಿದರು. 40ನೆ ಓವರ್‌ನಲ್ಲಿ ಅಕ್ಷರ್ ಪಟೇಲ್ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ಜಯವರ್ಧನೆ 109 ಎಸೆತಗಳಲ್ಲಿ ಶತಕ ತಲುಪಿದರು. ಏಕದಿನ ಪಂದ್ಯದಲ್ಲಿ 12,000 ರನ್ ತಲುಪಿದರು. 158 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಸೀಕುಗೆ ಪ್ರಸನ್ನ(23) ಅವರೊಂದಿಗೆ 8ನೆ ವಿಕೆಟ್‌ಗೆ 67 ರನ್ ಜೊತೆಯಾಟ ನಡೆಸಿದ ಮಾಜಿ ನಾಯಕ ಜಯವರ್ಧನೆ ಶ್ರೀಲಂಕಾ ಗೌರವಾರ್ಹ ಮೊತ್ತ ತಲುಪಲು ನೆರವಾದರು. 44.3ನೆ ಓವರ್‌ನಲ್ಲಿ ಜಯವರ್ಧನೆ ಅವರನ್ನು ಔಟ್ ಮಾಡಿದ ಅಶ್ವಿನ್ ಲಂಕಾದ ಇನಿಂಗ್ಸ್‌ಗೆ ಕಡಿವಾಣ ಹಾಕಿದರು.

ಸ್ಕೋರ್ ವಿವರ
ಶ್ರೀಲಂಕಾ: 48.2 ಓವರ್‌ಗಳಲ್ಲಿ 242 ರನ್‌ಗೆ ಆಲೌಟ್
ಕುಶಾಲ್ ಪೆರೇರ ಸಿ ಸಹಾ ಬಿ ಉಮೇಶ್ ಯಾದವ್ 4, ತಿಲಕರತ್ನೆ ದಿಲ್ಶನ್ ಸಿ ರಹಾನೆ ಬಿ ರಾಯುಡು 53, ಕುಮಾರ ಸಂಗಕ್ಕರ ಸಿ ಅಶ್ವಿನ್ ಬಿ ಉಮೇಶ್ ಯಾದವ್ 0, ಮಹೇಲ ಜಯವರ್ಧನೆ ಸ್ಟಂಪ್ ಸಹಾ ಬಿ ಅಶ್ವಿನ್ 118, ಆ್ಯಂಜೆಲೊ ಮ್ಯಾಥ್ಯೂಸ್ ಸಿ ಕೊಹ್ಲಿ ಬಿ ಅಕ್ಷರ್ ಪಟೇಲ್ 10, ಪ್ರಿಯಾಂಜನ್ ಸಿ ಯಾದವ್ ಬಿ ಅಕ್ಷರ್ ಪಟೇಲ್ 2, ಚತುರಂಗ ಡಿ’ ಸಿಲ್ವಾ ಸಿ ಧವನ್ ಬಿ ಅಕ್ಷರ್ ಪಟೇಲ್ 2, ತಿಸ್ಸಾರ ಪೆರೇರಾ ಸಿ ಸಬ್ ಬಿ ಯಾದವ್ 1, ಪ್ರಸನ್ನ ಬಿ ಯಾದವ್ 29, ಕುಲಸೇಕರ ಸಿ ರಹಾನೆ ಬಿ ಕುಲಕರ್ಣಿ 7, ಗಾಮಗೆ ಅಜೇಯ 0, ಇತರ 16,

ವಿಕೆಟ್ ಪತನ: 1-5, 2-7, 3-112, 4-144, 5-148, 6-154, 7-158, 8-225, 9-238, 10-242.
ಬೌಲಿಂಗ್: ಉಮೇಶ್ ಯಾದವ್ 9-0-53-4, ಧವಳ್ ಕುಲಕರ್ಣಿ 9.2-0-58-1, ಇಶಾಂತ್ ಶರ್ಮ 4-1-14-0, ಅಕ್ಷರ್ ಪಟೇಲ್ 10-1-40-3, ಆರ್. ಅಶ್ವಿನ್ 10-0-43-1, ಸುರೇಶ್ ರೈನಾ 3-0-15-0, ಅಂಬಟಿ ರಾಯುಡು 3-0-16-1.

ಭಾರತ: 44.1 ಓವರ್‌ಗಳಲ್ಲಿ 245/4
ಅಜಿಂಕ್ಯ ರಹಾನೆ ಸಿ ಜಯವರ್ಧನೆ ಬಿ ಪೆರೆರಾ 31, ಶಿಖರ್ ಧವನ್ ಸಿ ಸಂಗಕ್ಕರ ಬಿ ಕುಲಸೇಕರ 91, ಅಂಬಟಿ ರಾಯುಡು ರನೌಟ್ 35, ವಿರಾಟ್ ಕೊಹ್ಲಿ ಸಿ ಗಾಮಗೆ ಬಿ ದಿಲ್ಶನ್ 53, ಸುರೇಶ್ ರೈನಾ ಅಜೇಯ 18, ಸಹಾ ಅಜೇಯ 6, ಇತರ 11

ವಿಕೆಟ್‌ಪತನ: 1-62, 2-131, 3-201, 4-236.
ಬೌಲಿಂಗ್: ಕುಲಸೇಕರ 8-0-37-1, ಗಾಮಗೆ 6-0-50-0, ಪ್ರಸನ್ನ 9-0-43-0, ಪೆರೇರಾ 7-0-33-1, ಚತುರಂಗ ಡಿ ಸಿಲ್ವಾ 5-0-45-0, ಮ್ಯಾಥ್ಯೂಸ್ 3-0-17-0, ದಿಲ್ಶನ್ 4-0-10-1, ಪ್ರಿಯಾಂಜನ್ 2.1-1-8-0.

-http://vbnewsonline.com

Write A Comment