Karavali

ಪೊಲೀಸರು‌ ಅಮಾಯಕರನ್ನು ಹೊಡೆದು ಸಿಂಗಂ ಆಗಬೇಡಿ; ದರೋಡೆಕೋರರನ್ನು ಹಿಡಿಯಿರಿ: ಕುಂದಾಪುರ ಶಾಸಕ ಹಾಲಾಡಿ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ದರೋಡೆಕೋರರು, ಕಳ್ಳಕಾಕರನ್ನು ಹಿಡಿದು ಸಿಂಗಂ ಆಗಬೇಕು, ಅಮಾಯಕರನ್ನು ಹೊಡೆದು‌ ಸಿಂಗಂ ಆಗಬೇಡಿ ಎಂದು‌ ಕುಂದಾಪುರ ಶಾಸಕ‌ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಪೊಲೀಸರಿಗೆ ತಿಳಿಹೇಳಿದ್ದಾರೆ.

ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಸೋಮವಾರ ರಾತ್ರಿ‌ ನಡೆಯುತ್ತಿದ್ದ‌ ಮೆಹೆಂದಿ‌ ಕಾರ್ಯಕ್ರಮದ ವೇಳೆ ಆಗಮಿಸಿ ಏಕಾಏಕಿ‌ಕೊರಗ ಸಮುದಾಯದವರ ಮೇಲೆ ಹಲ್ಲೆ ನಡೆಸಿದ ಕೋಟ ಪಿಎಸ್ಐ ಹಾಗೂ ಸಿಬ್ಬಂದಿಗಳ ಮೇಲೆ ಶಾಸಕ ಹಾಲಾಡಿ‌ ಅಸಮಾಧಾನ ವ್ಯಕ್ತಪಡಿಸಿದರು. ಕೊರಗ ನಿವಾಸಿಗಳ ನೋವನ್ನು ಆಲಿಸಿದ ಅವರು ಸೂಕ್ತ ಕ್ರಮದ ಭರವಸೆ ನೀಡಿದರು.

ಕೊರಗ ನಿವಾಸಿಗಳ‌ ಮೇಲೆ ಕೋಟ ಪಿಎಸ್ಐ ಹಲ್ಲೆ ಮಾಡಿದ್ದು ದುರ್ಘಟನೆ, ಹೀಗಾಗಬಾರದಿತ್ತು. ಈ ಪಿಎಸ್ಐ ಬಗ್ಗೆ ಹಲವು ದೂರುಗಳಿದೆ. ಈ ಬಗ್ಗೆ ಮೇಲಾಧಿಕಾರಿಗಳ ಬಳಿ‌ ಮಾತನಾಡಿದ್ದು ಸದ್ಯ ಆರೋಪಿ‌ ಪಿಎಸ್ಐ ಅವರನ್ನು ಬದಲಾಯಿಸಿ ಬೇರೊಬ್ಬರನ್ನು ನಿಯೋಜಿಸಲಾಗಿದೆ. ಇಲಾಖೆ ತನಿಖೆ ವರದಿ ಆಧರಿಸಿ ಶೀಘ್ರವೇ ಅವರನ್ನು ಅಮಾನತು‌ ಮಾಡಲಾಗುತ್ತದೆ ಎಂದು‌ ಅಧಿಕಾರಿಗಳು‌ ತಿಳಿಸಿದ್ದಾರೆಂದು ಶಾಸಕರು‌ ಮಾಹಿತಿ ನೀಡಿದರು.

ಕೊರಗ ಸಮುದಾಯದವರು ಅತ್ಯಂತ‌ ಮುಗ್ಧರು. ಅವರು ಯಾವುದೇ ಸುಳ್ಳು ಕೇಸು ಹಾಕುವ ಜನರಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವ ಮಂದಿ. ಅಂತವರ ಮೇಲೆ ಇಲಾಖೆಯವರು ಹಲ್ಲೆ ನಡೆಸಿದ್ದು ನಿಜಕ್ಕೂ ನೋವುಂಟು ಮಾಡಿದ್ದು ವ್ಯವಸ್ಥೆ ಬಗ್ಗೆ ಕ್ಷಮೆ ಕೇಳುವೆ. ಈ ಪಿಎಸ್ಐ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿದೆ. ಅಂತವರು ಇಲ್ಲಿರಲು ಸಾಧ್ಯವಿಲ್ಲ. . ಒಂದೊಮ್ಮೆ ಪಿಎಸ್ಐ ಮೆಹೆಂದಿ‌ ಕಾರ್ಯಕ್ರಮಕ್ಕೆ ಬರುವಾಗ ಇಲ್ಲೇನಾದರೂ ತಪ್ಪು‌ಕಂಡುಬಂದಿದ್ದರೆ ತಿಳಿಹೇಳಬಹುದಿತ್ತು ಅಥವಾ ನೋಟಿಸ್ ಮಾಡಬಹುದಿತ್ತು. ಅದೆಲ್ಲವನ್ನೂ‌ ಬಿಟ್ಟು ಒಬ್ಬ ಸರಕಾರಿ ಅಧಿಕಾರಿಯಾಗಿ ದುರ್ವರ್ತನೆ ತೋರಿರುವುದು ಸರಿಯಲ್ಲ. ಆಗಿರುವ ಪ್ರಮಾದ ಸಣ್ಣದಲ್ಲ ಎಂದರು.

ಈ ಸಂದರ್ಭ ಕೊರಗ ಮುಖಂಡರಾದ ಗಣೇಶ್ ಕುಂದಾಪುರ, ಗಣೇಶ್ ಬಾರ್ಕೂರು, ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರ್ ಮೂರ್ತಿ, ಕುಂದಾಪುರ ಬಿಜೆಪಿ‌ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ನ್ಯಾಯವಾದಿ ಪ್ರಮೋದ್ ಹಂದೆ, ಸ್ಥಳೀಯ ಪ್ರಮುಖರಾದ ರಂಜಿತ್ ಕುಮಾರ್ ಕೋಟ, ರತ್ನಾಕರ ಬಾರಿಕೆರೆ, ಶಂಕರ್ ಕೋಟ, ರವೀಂದ್ರ ತಿಂಗಳಾಯ, ನಾಗರಾಜ್ ಮೊದಲಾದವರಿದ್ದರು.

ಇದನ್ನೂ ಓದಿರಿ: 

ಮೆಹೆಂದಿ ಮಾಡ್ತಿದ್ದ ಕೊರಗ ಸಮುದಾಯದವರಿಗೆ ಥಳಿಸಿದ ಕೋಟ ಪೊಲೀಸರು: ಸಮಾಜ ಕಲ್ಯಾಣ ಇಲಾಖೆ ಸಚಿವರ ಹುಟ್ಟೂರಲ್ಲೇ ಖಾಕಿ ದುರ್ವರ್ತನೆ..! (Video)

Comments are closed.