ಮಂಗಳೂರು: ಮಂಗಳೂರು ಮೂಲದವರಾದ ಖ್ಯಾತ ಉದ್ಯಮಿ, ದಾನಿ, ಕಲಾರಾಧಕರು ಆಗಿರುವ ದುಬೈನಲ್ಲಿರುವ ‘ಆಕ್ಮೆ’ ಬಿಲ್ಡಿಂಗ್ ಮೆಟಿರಿಯಲ್ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್ ಅವರಿಗೆ ಈ ಬಾರಿಯ ಪ್ರತಿಷ್ಠಿತ “ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಕಲಾಪೋಷಕ ಪ್ರಶಸ್ತಿ” ಪ್ರದಾನಿಸಲಾಗುತ್ತದೆ ಎಂದು ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣಾ ಸಮಿತಿ ಮುಂಬೈ, (ಯುಎಇ) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 8 ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ‘ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಕಲಾಪೋಷಕ ಪ್ರಶಸ್ತಿ’ಯನ್ನು ಹರೀಶ್ ಶೇರಿಗಾರ್ ಅವರಿಗೆ ಪ್ರದಾನಿಸಲಾಗುತ್ತದೆ. ಶ್ರೀ ಕ್ಷೇತ್ರ ಕಟೀಲಿನ ಭ್ರಾಮರೀ ಬಿಂಬವನ್ನು ಅತಿವೃಷ್ಟಿ ಪ್ರವಾಹ ಸಂದರ್ಭದಲ್ಲಿ ಭಕ್ತಿ ನಿರ್ಭೀತಿಯಿಂದ ಅಂತುಕೊಂಡು ಶ್ರೀ ಭ್ರಾಮರಿಯನ್ನು ಸಾಕ್ಷಾತ್ಕಾರಗೊಳಿಸಿದ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಅಸ್ರಣ್ಣರ ದೈವೀ ಆರಾಧನೆಯ 82ನೇ ವರ್ಷದ ಸಂಭ್ರಮದ ಸಂಸ್ಮರಣೆ ಪ್ರಯುಕ್ತ ಈ ಕಾರ್ಯಕ್ರಮ ಜರುಗಲಿದೆ.
ಕಲೆಯು ಉಳಿಯಬೇಕಾದರೆ ಕಲಾವಿದರಷ್ಟೇ ಅಲ್ಲ. ಕಲಾಪೋಷಕರ ಹೃದಯವೂ ವಿಶಾಲವಾಗಿರಬೇಕು ಎಂಬ ಸತ್ಯಕ್ಕೆ ಜೀವಂತ ಸಾಕ್ಷಿಯಾಗಿರುವ ಹರೀಶ್ ಶೇರಿಗಾರ್ ಅವರ ಸೇವೆ, ಯಕ್ಷಗಾನದ ಭವಿಷ್ಯಕ್ಕೆ ಬಲವಾದ ಆಸರೆಯಾಗಿದೆ. ಅವರ ಉದಾರತೆ ಅನೇಕ ಕಲಾವಿದರ ಬದುಕಿಗೆ ಬೆಳಕಾಗಿದ್ದು, ಯಕ್ಷಗಾನ ಪರಂಪರೆಗೆ ಜೀವಧಾರೆಯಾಗಿದೆ. ಯಕ್ಷಗಾನವೆಂಬ ಯಕ್ಷಲೋಕದ ಯಜ್ಞಕ್ಕೆ ಉದಾರ ಹಸ್ತದಿಂದ ಹವಿಸ್ಸನ್ನರ್ಪಿಸುತ್ತಾ, ಉದಾರತೆಯಿಂದ ಕಲಾಪೋಷಣೆಯನ್ನೇ ಜೀವನದ ಧರ್ಮವನ್ನಾಗಿಸಿಕೊಂಡಿರುವ ಹರೀಶ್ ಶೇರಿಗಾರ್ ಅವರಿಗೆ ಈ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಅಂದು (ಆಗಸ್ಟ್ 8) ಶ್ರೀ ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆಯ ಅಂಗವಾಗಿ ಪದ್ಮನಾಭ ಕಟೀಲು ಅವರ ಸಂಘಟನೆಯಲ್ಲಿ ‘ದೇವಸಂಕಲ್ಪ’ ಯಕ್ಷಗಾನ ಮಹಾಪ್ರದರ್ಶನವೂ ನಡೆಯಲಿದೆ.
Comments are closed.