ಕರಾವಳಿ

1 ಸಾವಿರ ಎಕ್ರೆ ಪ್ರದೇಶದಲ್ಲಿರುವ ಭತ್ತದ ಚಾಪೆ ನೇಜಿ ತಾಕಿಗೆ ಕೃಷಿ ವಿಜ್ಞಾನಿಗಳ ಭೇಟಿ

Pinterest LinkedIn Tumblr

ಉಡುಪಿ: ಭತ್ತದ ಚಾಪೆ ನೇಜಿ ತಾಕಿಗೆ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದ ವಿಜ್ಞಾನಿಗಳ ತಂಡವು ಸುರೇಶ್ ನಾಯಕ್, ಬೊಮ್ಮರಬೆಟ್ಟು , ಹಿರಿಯಡ್ಕ ರವರ ತಾಕಿಗೆ ಭೇಟಿ ನೀಡಿದರು.

ಇವರು ಕಳೆದ 13 ವರ್ಷದಿಂದ ಕೃಷಿ ವಿಜ್ಞಾನ ಕೇಂದ್ರದ ನಿಕಟ ಸಂಪರ್ಕ ಹೊಂದಿದ್ದು ಪ್ರಸ್ತುತ ವರ್ಷದಲ್ಲಿ ಸುಮಾರು 1000 ಎಕರೆ ಪ್ರದೇಶದಲ್ಲಿ ಬೇಕಾಗುವ ಚಾಪೆ ನೇಜಿಯನ್ನು ತಯಾರಿಸಿ ರೈತರ ಬೇಡಿಕೆ ಆದಾರದ ಮೇಲೆ ಸರಬರಾಜು ಮಾಡುತ್ತಿದ್ದಾರೆ.

2007ರಲ್ಲಿ ಪಾಂಡುರಂಗ ಕಿಣಿ, ಗಾವಳಿ ಗ್ರಾಮ ರವರ ಗದ್ದೆಯಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಪೊನ್ನುರಾಜ್ ರವರ ಅಮೃತ ಹಸ್ತದಿಂದ ನಾಟಿ ಯಂತ್ರ ಉದ್ಘಾಟಿಸಿದರು. ಅಂದು ಗಾವಳಿ ಗ್ರಾಮದ ಪಾಂಡುರಂಗ ಕಿಣಿ ಯವರ ಗದ್ದೆಯಲ್ಲಿ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲು ಸುರೇಶ್ ನಾಯಕ್ ಹಿರಿಯಡ್ಕರವರು ಭಾಗವಹಿಸಿ ಆ ಸಂದರ್ಭದಲ್ಲಿ ಚಾಪೆ ನೇಜಿಯ ಬಗ್ಗೆ ಅವರು ತದ್ವಿರುದ್ದವಾಗಿ ಮಾತನಾಡುತ್ತ, ಈ ನೇಜಿ ನಮ್ಮ ರೈತರು ಮಾಡಲಿಕ್ಕೆ ಸಾದ್ಯವೇ ಇಲ್ಲ, ಈ ನಾಟಿ ಯಂತ್ರಗಳನ್ನು ನಮ್ಮ ಪ್ರದೇಶದ ಗದ್ದೆಗಳಿಗೆ ಹೊಂದಿಕೆಯಾಗುವುದಿಲ್ಲವೆಂದು ಅವರೇ ಸ್ವತಃ ವಿಜ್ಞಾನಿಗಳ ಹತ್ತಿರ ಚರ್ಚಿಸಿ ತಮ್ಮ ಸ್ವಂತ ಅಭಿಪ್ರಾಯವನ್ನು ಕೊಟ್ಟಿದ್ದರು.

ಮಾರನೇ ವರ್ಷ ಪಾಂಡುರಂಗ ಕಿಣಿಯವರು 2 ನಾಟಿ ಯಂತ್ರಗಳನ್ನು ಖರೀದಿಸಿ ರೈತರ ಗದ್ದೆಗಳನ್ನು ಬಾಡಿಕೆ ಆದಾರದಲ್ಲಿ ನಾಟಿ ಮಾಡಲು ಪ್ರಾರಂಭಿಸಿದರು. ತದನಂತರ ಸುರೇಶ್ ನಾಯಕ್ ರವರು ಯಂತ್ರನಾಟಿ ಮತ್ತು ಚಾಪೆ ನೇಜಿ ತಯಾರಿಸಲು ಮುಂದಾದರು. ಆ ಸಂದರ್ಭಕ್ಕೆ ನೇಜಿ ತಯಾರಿಗೆ ಬೇಕಾದ ಸಲಕರಣೆ ಮತ್ತು ಮಾಡುವ ವಿಧಾನವನ್ನು ಕೆ.ವಿ.ಕೆ, ಬ್ರಹ್ಮಾವರ ವಿಜ್ಞಾನಿಗಳು ಮಾಡಿ ತೋರಿಸಿದ ಪರಿಣಾಮ ಪ್ರಸ್ತುತ ವರ್ಷದಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಯಂತ್ರದಿಂದ ನಾಟಿಮಾಡಲು ಮುಂದಾಗಿದ್ದಾರೆ.

ಇವರು ಸುಮಾರು 2.2 ಎಕರೆ ಖಾಲಿ ಜಾಗದಲ್ಲಿ ಟ್ರೇ ವಿಧಾನದಲ್ಲಿ ಚಾಪೆ ನೇಜಿ ತಯಾರಿಸಿದ್ದಾರೆ ಮತ್ತು ರೈತರಿಗೆ ನಾಟಿಯನ್ನು ಬಾಡಿಗೆ ಆಧಾರದಲ್ಲಿ ಮಾಡಿಕೊಡುತ್ತಿದ್ದಾರೆ. 2001 ರಲ್ಲಿ ನಾಟಿ ಯಂತ್ರ, ಕಟಾವು ಯಂತ್ರಗಳನ್ನು ಬೇರೆ ರಾಜ್ಯಗಳಿಂದ ತರಿಸಿ ಉಡುಪಿ ಜಿಲ್ಲೆಯ ರೈತರಿಗೆ ಭತ್ತ ನಾಟಿಯಿಂದ ಹಿಡಿದು ಕಟಾವಿನವರೆಗೆ ಬೇಕಾದ ಎಲ್ಲಾ ಯಂತ್ರೋಪಕರಣಗಳನ್ನು ಮಾಡಲು ಮುಂದಾಗಿದ್ದಾರೆ. ಇವರ ಈ ಒಂದು ಉದ್ಯಮಶೀಲತೆ ಇತರೆ ಯುವಕರಿಗೆ ಮತ್ತು ರೈತರಿಗೆ ಮಾದರಿಯಾಗಿರುತ್ತದೆ.

ಇವರು ಪ್ರಸ್ತುತ ಹಿರಿಯಡ್ಕದ ಹತ್ತಿರ ಇರುವ ಬೊಮ್ಮರಬೆಟ್ಟು ಪ್ರದೇಶದಲ್ಲಿ ಪ್ರತಿ ಚಾಪೆ ನೇಜಿ ಮ್ಯಾಟ್ ಗೆ ರೂ.40 ರಂತೆ ಮುಂಗಡ ನೊಂದಣಿ ಆಧಾರದ ಮೇಲೆ ಮಾರಾಟ ಮಾಡುತ್ತಿದ್ದಾರೆ. ಯಂತ್ರ ನಾಟಿ ಚಾಪೆ ನೇಜಿಯು ಸೇರಿ ಪ್ರತಿ ಎಕರೆಗೆ ರೂ 6000 ಇದರಲ್ಲಿ ನೇಜಿ ಸಾಗಾಟ ವೆಚ್ಚ ಆಯಾ ರೈತರೇ ಭರಿಸಬೇಕಾಗುತ್ತದೆ ಎಂದು ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಸುರೇಶ್ ನಾಯಕ್ ರವರು ತಿಳಿಸಿರುತ್ತಾರೆ.

ಸುರೇಶ್ ನಾಯಕ್ ರವರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ಮಂಜುನಾಥ್ ನಾಯಕ್ ಮತ್ತು ಡಾ. ಶಶಿಧರ್, ವಿಸ್ತರಣಾ ನಿರ್ದೇಶಕರು , ಇವರ ನಿಕಟ ಸಂಪರ್ಕದಲ್ಲಿದ್ದು ಇವರಿಂದಲೂ ಯಾಂತ್ರಿಕೃತ ಭತ್ತದ ಬೇಸಾಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದ ವಿಜ್ಞಾನಿಗಳಾದ ಡಾ. ಬಿ. ಧನಂಜಯ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಹೆಚ್.ಎಸ್ ಚೈತನ್ಯ , ತೋಟಗಾರಿಕೆ ವಿಜ್ಞಾನಿಗಳು ಮತ್ತು ಡಾ. ಎನ್.ಇ ನವೀನ್, ಬೇಸಾಯಶಾಸ್ತ್ರ ತಜ್ಞರು ಚಾಪೆ ನೇಜಿ ಕ್ಷೇತ್ರ ಬೇಟಿಯನ್ನು ನೀಡಿ ಸೂಕ್ತ ಮಾಹಿತಿ ಮತ್ತ ಮಾರ್ಗದರ್ಶನವನ್ನು ಕೊಟ್ಟಿರುತ್ತಾರೆ.

Comments are closed.