ಕರಾವಳಿ

ಬ್ರಹ್ಮಾವರ ಸಕ್ಕರೆ ಕಾರ್ಕಾನೆ ಪುನಶ್ಚೇತನ-ಕಬ್ಬು ಬೆಳೆಯುವ ರೈತರಿಗೆ ಕಾರ್ಖಾನೆಯಿಂದ ಕಬ್ಬಿನ ಬೀಜ ಪೂರೈಕೆ

Pinterest LinkedIn Tumblr

ಉಡುಪಿ: ವಾರಾಹಿ ನೀರಾವರಿ ಯೋಜನೆಯ ವತಿಯಿಂದ ಈಗಾಗಲೇ ಸಾಕಷ್ಟು ರೈತರ ಕೃಷಿ ಜಮೀನಿಗೆ ಕಾಲುವೆ ಮೂಲಕ ನೀರು ಹರಿಯಲಾರಂಭವಾದುದರಿಂದ ಮತ್ತು ಇನ್ನಿತರ ಮೂಲಗಳಿಂದ ನೀರಾವರಿ ಸೌಲಭ್ಯವಿರುವ ರೈತರು ಕಬ್ಬು ಬೆಳೆಯಲು ಆಸಕ್ತರಾಗಿರುವುದರಿಂದ, ಬ್ರಹ್ಮಾವರದಲ್ಲಿರುವ ಸ್ಥಗಿತಗೊಂಡ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಅಂಗವಾಗಿ ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಕಬ್ಬು ಅಭಿವೃದ್ಧಿ ಪಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


(ಸಾಂದರ್ಭಿಕ ಚಿತ್ರ)

ಕಬ್ಬಿನ ಬೀಜೋತ್ಪಾದನೆ ಮಾಡಲು ಆಸಕ್ತರಿದ್ದ ರೈತರುಗಳಿಗೆ ಈಗಾಗಲೇ ಮಂಡ್ಯ ಜಿಲ್ಲೆಯಿಂದ ಅಧಿಕ ಇಳುವರಿಯ ಹಾಗೂ ಉತ್ತಮ ತಳಿಯ ಕಬ್ಬಿನ ಬೀಜದ ಸಸಿಗಳನ್ನು ತರಿಸಿ ನೀಡಲಾಗಿದ್ದು, ಸದ್ರಿ ರೈತರು ತಮ್ಮ ಹೊಲದಲ್ಲಿ ಕಬ್ಬಿನ ಬೀಜೋತ್ಪಾದನೆಗಾಗಿ ಕಬ್ಬು ಬೆಳೆದಿರುತ್ತಾರೆ.
ಪ್ರಸ್ತುತ ಸುಮಾರು 2000 ಟನ್ಗಳಷ್ಟು ಕಬ್ಬಿನ ಬೀಜವು ಲಭ್ಯವಿದ್ದು, ಕಬ್ಬು ಬೆಳೆಯಲು ತಯಾರಿರುವ ರೈತರಿಗೆ ಆಧ್ಯತೆಯಲ್ಲಿ ವಿತರಣೆ ಮಾಡಲಾಗುವುದು. ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಕಬ್ಬು ಬೆಳೆಯಲು ಆಸಕ್ತರಿರುವ ರೈತರು ತಮ್ಮ ವಿಳಾಸ, ಜಮೀನಿನ ಸರ್ವೆ ನಂಬ್ರ ಹಾಗೂ ಎಷ್ಟು ಎಕ್ರೆ ವಿಸ್ತೀರ್ಣದಲ್ಲಿ ಕಬ್ಬು ಬೆಳೆಯ ಬಹುದು ಎಂಬ ಬಗ್ಗೆ ಲಿಖಿತ ಮಾಹಿತಿಯನ್ನು ಅಕ್ಟೋಬರ್ 31 ರ ಒಳಗೆ ಕಾರ್ಖಾನೆಗೆ ತಲುಪಿಸಬೇಕು. ಮೊದಲು ಬಂದ ಅರ್ಜಿಗಳಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಕಬ್ಬಿನ ಬೀಜ ವಿತರಣೆ ಮಾಡಲಾಗುವುದು.

ಕಾರ್ಖಾನೆಯು ಹೊಂದಿರುವ ಒಟ್ಟು ಪಾಲು ಬಂಡವಾಳದಲ್ಲಿ ರೈತರು ಮತ್ತು ಸಹಕಾರಿ ಸಂಸ್ಥೆಗಳ ಪಾಲು ಬಂಡವಾಳವು ತೀರಾ ಕಡಿಮೆ ಇರುವುದರಿಂದ ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿರುವ ರೈತರು, ಸಹಕಾರಿ ಸಂಸ್ಥೆಗಳು ಮತ್ತು ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲುಬಂಡವಾಳವನ್ನು ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯಲ್ಲಿ ತೊಡಗಿಸುವ ಮೂಲಕ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉಳಿಸುವಂತೆ ಕಾರ್ಖಾನೆಯ ಅಧ್ಯಕ್ಷ ಎಚ್. ಜಯಶೀಲ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments are closed.