ಅಂತರಾಷ್ಟ್ರೀಯ

ರೂಬಿಕ್ಸ್ ಕ್ಯೂಬ್‌ಗಳಲ್ಲಿ 2 ಗಿನ್ನಿಸ್ ದಾಖಲೆ ಮಾಡಿದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ

Pinterest LinkedIn Tumblr

(ವರದಿ: ಯೋಗೀಶ್ ಕುಂಭಾಸಿ)

ಕುಂದಾಪುರ: ಖಾಸಗಿ ವಸತಿ ಶಾಲೆಯ ವಿದ್ಯಾರ್ಥಿಗಳು ಎರಡು ವಿಶ್ವ ದಾಖಲೆ ಪುಡಿಗಟ್ಟಿ ಇತಿಹಾಸ ಸೃಷ್ಟಿಸಿ ಸಂಚಲನ ಮೂಡಿಸಿದ್ದಾರೆ. 25 ವರ್ಷಗಳಿಂದ ಶೈಕ್ಷಣಿಕವಾಗಿ ಗುರುತಿಸಿಕೊಂಡು ರಜತ ಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ಶಾಲೆಯ ಪ್ರಸ್ತುತ ಸಾಲಿನ ವಿದ್ಯಾರ್ಥಿಗಳ ಸಾಧನೆಯಿದು.

ಜಗತ್ತಿನ ಅತಿದೊಡ್ಡ ಡ್ಯುಯಲ್-ಸೈಡೆಡ್ ರೊಟೇಟಿಂಗ್ ಫಸಲ್ ಕ್ಯೂಬ್ ಮೊಸಾಯಿಕ್ ಹಾಗೂ ರೊಟೆಟಿಂಗ್ ಫಸಲ್ ಕ್ಯೂಬ್ ಮೊಸಾಯಿಕ್ ಚಿತ್ರವನ್ನು ಪೂರ್ಣ ಮಾಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿ ದೇಶದಲ್ಲೇ ಎರಡು ವಿಶ್ವದಾಖಲೆ ಮಾಡಿದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮೊದಲ ದಾಖಲೆ: ನ.30 ರಿಂದ ಆರಂಭಿಸಿದ 50 ವಿದ್ಯಾರ್ಥಿಗಳು 6 ಸಾವಿರ ರೂಬಿಕ್ ಕ್ಯೂಬ್‌ನಿಂದ 19.198 ಚ.ಮೀ ವಿಸ್ತಿರ್ಣದಲ್ಲಿ ಒಂದು ಬದಿಯಲ್ಲಿ ದೇಶದ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಹಾಗೂ ಇನ್ನೊಂದು ಬದಿಯಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರ ಭಾವಚಿತ್ರವನ್ನು ಅನಾವರಣಗೊಳಿಸುವ ಮೂಲಕ ಈ ಹಿಂದಿನ ಕಝಾಕಿಸ್ತಾನದ ಝಿಂಗಿಸ್ ಐಟ್ಜಾನೋವ್ 5100 ಕ್ಯೂಬ್ ಗಳೊಂದಿಗೆ ನಿರ್ಮಿಸಿದ್ದ 15.878 ಚ. ಮೀಟರ್ ವಿಸ್ತಿರ್ಣದ ದಾಖಲೆಯನ್ನು ಮುರಿದು ಡ್ಯುಯಲ್ ಸೈಡ್ ರೊಟೇಟಿಂಗ್’ನಲ್ಲಿ ನೂತನ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಇಲ್ಲಿ ಚಿತ್ರದ ಅಳತೆ ಮಾತ್ರ ಪರಿಗಣನೆಯಾಗುತ್ತದೆ. ತೆಗೆದುಕೊಂಡ ಸಮಯ, ಎಷ್ಟು ಮಂದಿ ಇದ್ದರು ಎಂಬುದು ಗಣನೆಯಾಗಿಲ್ಲ.

ಎರಡನೇ ದಾಖಲೆ: ಒಂದನೇ ದಾಖಲೆ ಮುರಿದ ಬೆನ್ನಿಗೆ ವಿದ್ಯಾರ್ಥಿಗಳು ಮತ್ತೊಂದು ಯತ್ನ ಆರಂಭವಾಗಿತ್ತು.
ಪ್ರಸ್ತುತ ಗಿನ್ನಿಸ್ ದಾಖಲೆಯಲ್ಲಿ ಇರುವ ಅತೀ ಹೆಚ್ಚು ಜನರ ಪಾಲ್ಗೊಳ್ಳುವಿಕೆಯ ತಿರುಗುವ (ರೊಟೇಟಿಂಗ್) ಪಜಲ್ ಕ್ಯೂಬ್ ಮೊಸಾಯಿಕ್ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಮಾಡುವ ಯತ್ನ ಭಾನುವಾರ ಮಧ್ಯಾಹ್ನದ ವೇಳೆ ಸುಖಾಂತ್ಯವಾಗಿತ್ತು. ನಿರೀಕ್ಷೆಗೂ ಅಧಿಕ ವಿದ್ಯಾರ್ಥಿಗಳು ಛಲ ಸಾಧಿಸಿ ಮತ್ತೊಂದು ವಿಶ್ವ ದಾಖಲೆಗೆ ಮುನ್ನುಡಿ ಬರೆದರು. ಸದ್ಯ ಇರುವ ಗಿನ್ನೆಸ್ ದಾಖಲೆ ಬ್ರಿಟನ್‌ನ ಲಂಡನ್‌ನಲ್ಲಿ ರೂಬಿಕ್ಸ್ ಬ್ರಾಂಡ್ ಲಿಮಿಟೆಡ್ 308 ಜನರ ಪಾಲ್ಗೊಳ್ಳುವಿಕೆಯಲ್ಲಿ ರಚಿಸಿದ ಚಿತ್ರವಿದ್ದು 1228 ಪಾಲ್ಗೊಳ್ಳುವಿಕೆಯಲ್ಲಿ ರೊಟೇಟಿಂಗ್ ಫಸಲ್ ಕ್ಯೂಬ್ ಮೊಸಾಯಿಕ್‌ನಲ್ಲಿ ಸಿದ್ದಿವಿನಾಯಕ ವಸತಿ ಶಾಲೆಯ ಸಂಸ್ಥಾಪಕರಾದ ವೇದಮೂರ್ತಿ ಎಚ್.ರಾಮಚಂದ್ರ ಭಟ್ ಅವರ ಚಿತ್ರವನ್ನು ರಚಿಸಲಾಗಿದ್ದು ನಾಲ್ಕು ಪಟ್ಟು ಅಂತರದಲ್ಲಿ ಹಳೆ ದಾಖಲೆ ಮುರಿಯಲಾಗಿದೆ.

ರೂಬಿಕ್ ಕ್ಯೂಬ್‌ನಲ್ಲಿ ಹೊಸ ದಾಖಲೆ ಮೂಡಿಸುವ ವೇಳೆ ಅದರ ತೀರ್ಪುಗಾರರು, 16 ಸರಕಾರಿ ಅಧಿಕಾರಿಗಳು (ಗಜೇಟೆಡ್ ಆಫೀಸರ್ಸ್), 16 ವೀಕ್ಷಕರು (ಸ್ಟೀವರ್ಡ್), ಐದಕ್ಕೂ ಅಧಿಕ ವಿಡಿಯೋ ಕ್ಯಾಮೆರಾಗಳು ಪ್ರತಿ ಹಂತವನ್ನು ನ.30ರಿಂದ ಡಿ.3ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಪರಿಶೀಲಿಸಿದ್ದರು. ನ.1 ರಿಂದ ನ.3 ತನಕ ಗಿನ್ನಿಸ್ ಸಂಸ್ಥೆಯ ಅಜ್ಯೂರಿಕೇಟರ್ ರಿಷಿನಾಥ್ ಉಪಸ್ಥಿತರಿದ್ದು ಎರಡು ಹಳೆ ದಾಖಲೆಗಳನ್ನು ಮುರಿದು ನೂತನ ಗಿನ್ನಿಸ್ ದಾಖಲೆ ಮಾಡಿದ ಬಗ್ಗೆ ಅಧೀಕೃತವಾಗಿ ಪ್ರಮಾಣೀಕರಿಸಿ ಶಾಲಾ ಪ್ರಾಂಶುಪಾಲ ಎಚ್.ಶರಣ್‌ಕುಮಾರ ಅವರಿಗೆ ಪ್ರಮಾಣಪತ್ರ‌ ನೀಡಿದರು.

ತರಬೇತಿ ಹೇಗಿತ್ತು…
ಕಳೆದ ವರ್ಷ (2022) ಬೇಸಿಗೆ ವೇಳೆ ಮನೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ರೂಬಿಕ್ಸ್ ಕ್ಯೂಬ್ ಶಾಲೆ ವತಿಯಿಂದ ನೀಡಿ ಮಕ್ಕಳಿಗೆ ಅದರ ಬಗ್ಗೆ ಆಸಕ್ತಿ ಮೂಡಿಸಲಾಗಿತ್ತು. ಎರಡು ಬಾರಿ ಗಿನ್ನೆಸ್ ದಾಖಲೆ ಮಾಡಿದ ಪೃಥ್ವೀಶ್ ಕೆ. ಮೂಲಕ ಶಾಲೆಗೆ ವಾಪಾಸಾದ ವಿದ್ಯಾರ್ಥಿಗಳು ಕಳೆದ ನವೆಂಬರ್ ತಿಂಗಳಿನಿಂದ ರೂಬಿಕ್ಸ್ ಕ್ಯೂಬ್ ಸವಾಲು ಪರಿಹರಿಸುವ ತರಬೇತಿ ಪಡೆದಿದ್ದರು. ಜೂನ್‌ ತಿಂಗಳಿನಿಂದ ಕ್ಯೂಬ್ ಬಳಸಿ ಚಿತ್ರ ರಚನೆ ತರಬೇತಿ ನೀಡಲಾಗುತ್ತಿತ್ತು. ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಮಕ್ಕಳ ಬಿಡುವಿನ ವೇಳೆ ಈ ಆಸಕ್ತಿ ಮೂಡಿಸಲಾಗಿದೆ ಎಂದು ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ ತಿಳಿಸಿದರು.

ಎರಡು ಗಿನ್ನಿಸ್ ವಿಶ್ವ ದಾಖಲೆ ಪಡೆದ ಪ್ರಥಮ ವಿದ್ಯಾಸಂಸ್ಥೆಯೆಂಬ ಹೆಗ್ಗಳಿಕೆಗೆ ನಾವು ಪಾತ್ರವಾಗಿದ್ದು ಸಂತಸವಾಗಿದೆ‌. ಕೊರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಲೋಕಕ್ಕೆ ಹೋಗಿದ್ದು ಅದರಿಂದ ಹೊರಬಂದು ಸಾಧನೆಗೈಯಲು ಅವಕಾಶಗಳು ಬಹಳಷ್ಟಿದೆ ಎಂಬುದನ್ನು ತೋರಿಸಲು ಸಂಸ್ಥೆಯ ರಜತ ಮಹೋತ್ಸವ ಆಚರಣೆ ಸಂದರ್ಭ ವಿದ್ಯಾರ್ಥಿಗಳಿಂದ ಈ ಕಾರ್ಯ ನಡೆದಿದೆ. ಈ ಸಾಧನೆಯನ್ನು ದೇಶದ ಎಲ್ಲಾ ವಿದ್ಯಾರ್ಥಿ ಸಮುದಾಯಕ್ಕೆ ಸಮರ್ಪಣೆ ಮಾಡುತ್ತಿದ್ದೇವೆ. ರೂಬಿಕ್ ಕ್ಯೂಬ್‌ಗಳನ್ನು ಸ್ಥಳೀಯ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಿಬಬಳಸುವ ಬಗ್ಗೆ ನಮ್ಮ ಶಾಲೆ ವಿದ್ಯಾರ್ಥಿಗಳು ತರಬೇತಿ ನೀಡಲಿದ್ದಾರೆ.
– ಹೆಚ್‌. ಶರಣ್‌ಕುಮಾರ್, ಪ್ರಾಂಶುಪಾಲರು, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ.

ರೂಬಿಕ್ಸ್ ಕ್ಯೂಬ್ ಮೂಲಕ ದೇಶದಲ್ಲಿ ಮಾಡದ ಹೊಸ ದಾಖಲೆ ಮಾಡಿದ್ದು ಎಲ್ಲರಿಗೂ ಇದು ಪ್ರೇರಣೆಯಾಗಲಿ. ನಮ್ಮ ಶಾಲೆಯಲ್ಲಿ ಕಳೆದೊಂದು ವರ್ಷದಿಂದ ಬಿಡುವಲ್ಲಿ ಪ್ರಯತ್ನಿಸಿದ್ದೇವೆ. ಪಠ್ಯ ಚಟುವಟಿಕೆಗೆ ಇದರಿಂದ ಸಮಸ್ಯೆಯಾಗುವುದಿಲ್ಲ. ಕ್ಯೂಬ್ ಬಗೆಹರಿಸುವ ಚಾಕಚಕ್ಯತೆ ಮೂಲಕ ಏಕಾಗೃತೆ ಹೆಚ್ಚುತ್ತದೆ.

Comments are closed.