ಕರಾವಳಿ

ಸಿಲಿಕಾನ್‌ ಸಿಟಿಯಲ್ಲಿ ನಡೆಯಲಿದೆ ಕಂಬಳ; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು ಅರಮನೆ ಮೈದಾನ..!

Pinterest LinkedIn Tumblr

ಮಂಗಳೂರು: ಪ್ರಸಿದ್ಧ ಜಾನಪದ ಕ್ರೀಡೆ ‘ಕಂಬಳ’ ಬರುವ ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಬೆಂಗಳೂರು ತುಳುಕೂಟದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಕಂಬಳ ಆಯೋಜನೆಗೆ ನಿರ್ಧರಿಸಲಾಗಿದೆ. ಮೂಲಕ ಕಂಬಳ ಕ್ಷೇತ್ರದಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗಲಿದೆ.

ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರ ನೇತೃತ್ವದಲ್ಲಿ ಪೂರಕ ಸಿದ್ಧತೆಗಳು ನಡೆಯುತ್ತಿವೆ.
ಅರಮನೆ ಮೈದಾನದಲ್ಲಿ ಆಯೋಜನೆಗೆ ಮೈಸೂರು ರಾಜಮನೆತನದ ಅನುಮತಿಯೂ ಲಭಿಸಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ಆಯೋಜಿಸುವ ಚಿಂತನೆ ನಡೆದಿದ್ದು, ಇದಕ್ಕೆ ಪೂರಕ ಸಿದ್ಧತೆಗಳು ಆರಂಭಗೊಂಡಿದೆ. ಕಂಬಳ ಕರೆಗೆ ರಾಜ ಮಹಾರಾಜ ‘ಜಯಚಾಮರಾಜೇಂದ್ರ ಒಡೆಯರ್‌ ಜೋಡುಕರೆ ಕಂಬಳ’ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ಕಂಬಳ ಕ್ರೀಡೆ ಸಾಮಾನ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಂಬಳ ಕ್ರೀಡೆ ಹೊಸ ಹಿರಿಮೆಯನ್ನು ಪಡೆದುಕೊಂಡಿದ್ದು, ಹೊರ ಜಿಲ್ಲೆ, ಹೊರರಾಜ್ಯ, ದೇಶ-ವಿದೇಶಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಸುಮಾರು 3 ವರ್ಷಗಳಿಂದ ಕಂಬಳ ಕ್ರೀಡೆಯನ್ನು ರಾಜ್ಯ ರಾಜ್ಯಧಾನಿಯಲ್ಲಿ ಆಯೋಜಿಸಬೇಕೆಂಬ ಆಗ್ರಹ ವ್ಯಕ್ತವಾಗಿದ್ದು, ಅದಕ್ಕೆ ಈಗ ಕಾಲಕೂಡಿ ಬಂದಿದೆ.

ಬೆಂಗಳೂರು ತುಳು ಕೂಟ ಈ ಬಾರಿ ಸುವರ್ಣ ಸಂಭ್ರಮದಲ್ಲಿದ್ದು, ಇದರ ಸವಿ ನೆನಪಿಗಾಗಿ ಕಂಬಳ ಆಯೋಜನೆಗೆ ನಿರ್ಧರಿಸಲಾಗಿದೆ. ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳದ ರೂವಾರಿ, ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ನೇತೃತ್ವದಲ್ಲಿ ಸಿದ್ಧತೆ ನಡೆಯುತ್ತಿದೆ. ಮೈಸೂರಿನ ಒಡೆಯರ್‌ ಕುಟುಂಬಕ್ಕೆ ಸಂಬಂಧಪಟ್ಟ ಅರಮನೆ ಮೈದಾನದಲ್ಲಿ ಕಂಬಳ ಆಯೋಜನೆಗೆ ಮೈಸೂರು ರಾಜಮನೆತನದಿಂದ ಅನುಮತಿ ಸಿಕ್ಕಿದ್ದು, ಸಮಿತಿಯು ಈಗಾಗಲೇ ಎರಡು ಸುತ್ತಿನ ಸಭೆ ನಡೆದಿದೆ. ಕಂಬಳಕ್ಕೆ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದ್ದು, ಸರಕಾರಿ ಮಟ್ಟದಲ್ಲಿಅನುಮತಿ ಸಿಗಲು ಬಾಕಿಯಿದೆ ಎಂದು ಸಮಿತಿ ತಿಳಿಸಿದೆ.

ಕಂಬಳದ ಎಲ್ಲ ವಿಭಾಗದ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಕಳೆದ ಬಾರಿ ಅಂತಿಮ 8 ಸುತ್ತಿನಲ್ಲಿ ಸ್ಪರ್ಧಿಸಿದ ಕೋಣಗಳಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಕೋಣದ ಯಜಮಾನರು, ಕಂಬಳ ಸಮಿತಿ, ಕಂಬಳ ಸಂಘಟಕರ ಜತೆ ಮಾತನಾಡಿ ಸಹಕಾರ ಕೋರಲಾಗುವುದು. ಕೋಣಗಳನ್ನು ರೈಲಿನಲ್ಲಿ ಸಾಗಾಟ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಶಾಸಕ ಅಶೋಕ್‌ ರೈ ತಿಳಿಸಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಜೋಡುಕರೆ ಕಂಬಳ ಕರೆಗೆ, ಪಾರ್ಕಿಂಗ್‌ ವ್ಯವಸ್ಥೆ, ಏಕಕಾಲಕ್ಕೆ 4 ಲಕ್ಷ ಮಂದಿ ಪ್ರೇಕ್ಷಕರಿಗೆ ಬೇಕಾದಷ್ಟು ಜಾಗದ ವ್ಯವಸ್ಥೆಯಿದೆ. ತುಳುನಾಡಿನಲ್ಲಿ ಕಂಬಳ ಸೀಸನ್‌ ಆರಂಭವಾಗುವ ಮುನ್ನವೇ ಅಂದರೆ ನವೆಂಬರ್‌ನಲ್ಲಿ ಕಂಬಳ ಆಯೋಜನೆಗೆ ಚಿಂತನೆ ನಡೆದಿದೆ. ಅರಮನೆಯ ಮೈದಾನದ ಪಕ್ಕದಲ್ಲೇ ಕೆರೆಯಿದ್ದು, ಅದರ ನೀರನ್ನು ತಪಾಸಣೆಗೆ ಲ್ಯಾಬ್‌ಗೆ ಕಳುಹಿಸಲಾಗಿದೆ. ನಮ್ಮ ಕಂಬಳ ಹಿರಿಮೆಯನ್ನು ರಾಜ್ಯ, ದೇಶಕ್ಕೆ ಪರಿಚಯಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿಆಯೋಜಿಸುವ ಉದ್ದೇಶ ಹೊಂದಿದ್ದು, ನಮ್ಮ ರಾಜ್ಯಕ್ಕೆ ಅನನ್ಯ ಕೊಡುಗೆ ನೀಡಿದ ಮೈಸೂರು ಒಡೆಯರ ಹೆಸರನ್ನೇ ಐತಿಹಾಸಿಕ ಕಂಬಳ ಕರೆಗೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ತುಳುನಾಡಿನ ಆಹಾರ, ಸಂಸ್ಕೃತಿ-ಆಚಾರ ವಿಚಾರವನ್ನು ಪರಿಚಯಿಸುವ ಕೆಲಸವೂ ಆಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

 

Comments are closed.