ಕರಾವಳಿ

ಕಂಬಳ ಕ್ಷೇತ್ರದಲ್ಲಿ ರಾಜ್ಯ ಕ್ರೀಡಾ ರತ್ನ ಪ್ರಶಸ್ತಿ ಪಡೆದು ಕರಾವಳಿಗೆ ಕೀರ್ತಿ ತಂದ ಸಾಧಕ ಗೋಪಾಲ ನಾಯ್ಕ್ ..!

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಕಂಬಳ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾದ ಉಡುಪಿ ಜಿಲ್ಲೆ ಬ್ರಹ್ಮಾವರದ ಮಂದರ್ತಿ ಸಮೀಪದ ಶಿರೂರು‌ ಮುದ್ದುಮನೆ ನಿವಾಸಿ ಗೋಪಾಲ ನಾಯ್ಕ್ (40) ಹೇಳಿಕೇಳಿ ಬಡತನದ ಕೃಷಿ ಕುಟುಂಬದಿಂದ ಬಂದವರು ಇವರ ಕೃಷಿ, ಕಂಬಳ, ತೋಟಗಾರಿಕೆ ಆಸಕ್ತಿ ಬಗೆಗಿನ ವಿಶೇಷ ವರದಿ ಇದು.

ಕುಡುಬಿ ಜನಾಂಗದವರಾದ ಗೋಪಾಲ ನಾಯ್ಕ್ ಮನೆಯಲ್ಲಿನ ಬಡತನದ ಹಿನ್ನೆಲೆ ಏಳನೇ ತರಗತಿಗೆ ಗುಡ್ ಬೈ ಹೇಳಿ ಬದುಕು ಕಟ್ಟಿಕೊಳ್ಳೋಕೆ ಬೇರೆಬೇರೆ ಕೆಲಸ ಮಾಡಿದ್ದು ಯಾವುದೂ ಕೈಗೂಡದಿದ್ದಾಗ ತಂದೆ ಮಾಡಿಟ್ಟ ಜಮೀನು ಇವರನ್ನು ಬಿಟ್ಟುಕೊಡಲಿಲ್ಲ. ತಂದೆಯೊಂದಿಗೆ ಕೃಷಿ ಕಾಯಕ‌ ಮಾಡೋಕೆ ಆರಂಭಿಸಿದರು. ಮನೆಯಲ್ಲಿ ತಂದೆ ಸಾಕಿದ್ದ ಕೋಣಗಳ ಪೋಷಣೆ ಮಾಡುತ್ತಾ ಅವುಗಳೊಂದಿಗೆ ಕಾಲ‌ಕಳೆಯೋಕೆ ಶುರು‌ಮಾಡಿದರು. ಮನೆಯ ವಿಶಾಲವಾದ ಗದ್ದೆಯಲ್ಲಿ ಕೋಣಗಳನ್ನು ಓಡಿಸೋದು ಇವರ ಇಂದಿನ ಈ ಸಾಧನೆಗೆ ಅಡಿಗಲ್ಲು. ಬರಬರುತ್ತಾ ಕಂಬಳಕ್ಕೆ ಹೋಗೋದು, ಕಂಬಳದಲ್ಲಿ ಬೇರೆಯವರ ಕೋಣ ಓಡಿಸೋದು ಇವರ ಪ್ರವೃತ್ತಿಯಾಗಿತ್ತು. ಇದಕ್ಕೆ ಕಂಬಳಾಸಕ್ತರಾದ ಬಾರ್ಕೂರು ಶಾಂತರಾಮ್ ಶೆಟ್ಟಿಯವರು ಸಾಥ್ ನೀಡಿದ್ದು ಅವರ ಕೋಣಗಳನ್ನು ಓಡಿಸಿ ಹಲವು ಮೆಡಲ್ ಪಡೆದ ಗೋಪಾಲ ನಾಯ್ಕ್ ತಾನೂ‌ ಕೂಡ ಕೋಣಗಳನ್ನು ಖರೀದಿಸಿ ಸಾಕಿ-ಸಲುಹಿ ಅವುಗಳನ್ನು ಕಂಬಳದಲ್ಲಿ ಓಡಿಸಲು ಆರಂಭಿಸಿದರು.

ಹೀಗೆ ಇವರ ಕಂಬಳದ ಮೇಲಿನ ಒಲವು ತೋರಿಸದಂತಹ ಉತ್ಸಾಹ, ಪರಿಶ್ರಮ ಇವರಿಗೆ ಈವರೆಗೆ ಸಾವಿರಕ್ಕೂ ಅಧಿಕ ಪ್ರಶಸ್ತಿಗಳ ಜೊತೆ ಗೋಲ್ಡನ್ ಗೋಪಾಲ ಎಂಬ ಬಿರುದು ಸಿಗುವಂತೆ ಮಾಡಿದೆ. ಇದೀಗಾ ಕಂಬಳ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಕ್ರೀಡಾ ರತ್ನ ಪ್ರಶಸ್ತಿ ಮುಡಿಗೇರಿಸಿಕೊಂಡು ಉಡುಪಿ‌ ಕರಾವಳಿಗೆ ಕೀರ್ತಿ ತಂದಿದ್ದಾರೆ.

ಗೋಪಾಲ ನಾಯ್ಕ್ ಖ್ಯಾತಿಯಾಗಿದ್ದು ಕಂಬಳದಲ್ಲಾದರೂ‌ ಕೂಡ ಅವರ ಕೃಷಿ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ಉತ್ಸಾಹ‌‌ ಅಪಾರವಿದೆ . ತಂದೆ ಕುಷ್ಟ ನಾಯ್ಕ್ ತಾಯಿ ಬುಡ್ಡಿ ಬಾಯಿ ಹಾಗೂ ಇವರ ಇಡೀ ಕುಟುಂಬಕ್ಕೆ ಇರುವ ಕೃಷಿ ಮೇಲಿನ ಒಲವು ಹಾಗೂ ಗೋಪಾಲ್ ಅವರ ಮೂವರು ಸಹೋದರರು ಒಬ್ಬ ಸಹೋದರಿ‌ ಸಹಿತ ಮನೆಯವರ ಪ್ರೋತ್ಸಾಹ ಕಂಬಳ ಗದ್ದೆ ಹಾಗೂ ಕೃಷಿ ಕಾಯಕ‌ ಮಾಡಲು ಪ್ರೇರಿಪಿಸಿತ್ತು. ಪ್ರತಿನಿತ್ಯ ಮನೆಯ ಸನಿಹದಲ್ಲಿರುವ ಇರುವ ಜಮೀನಿನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿಯುತ್ತಾರೆ. ಇವರ ತೋಟದಲ್ಲಿ ಅಡಿಕೆ ಮರಗಳು, ತೆಂಗು, ಬಾಳೆ, ಮಾವು, ನಿಂಬೆಕಾಯಿ, ಪಪ್ಪಾಯಿ, ಪೇರಳೆ ಸೊಗಸಾಗಿ ಬೆಳೆದು ನಿಂತಿದೆ. ಮನೆ ಬಳಿ ಅಲಸಂದೆ, ಕುಂಬಳಕಾಯಿ, ವಿವಿಧ ಜಾತಿಯ ಹೂ ಗಿಡಗಳು ಕಣ್ಣಿಗೆ ಮುದ ನೀಡುತ್ತೆ. ಇನ್ನು ಕೃಷಿ ಗದ್ದೆಯಲ್ಲಿ ವರ್ಷಕ್ಕೆರಡು ಬಾರಿ ಭತ್ತದ ಬೆಳೆ ಬೆಳೆಯುತ್ತಾರೆ.

ಗದ್ದೆ ಖಾಲಿಯಿರುವಾಗ ಬದನೆಕಾಯಿ, ಸವತೆಕಾಯಿ ಮೊದಲಾದ ಉಪಬೆಳೆ ಬೆಳೆಯುವ ಮೂಲಕ ಆದಾಯದ ಮೂಲ ಹುಡುಕಿಕೊಂಡಿದ್ದಾರೆ. ಕೃಷಿಗೆ ಕಾಡು ಹಂದಿ, ಜಿಂಕೆ, ನವಿಲು ಉಪಟಳ ನೀಡಿ ಬೆಳೆ ಹಾನಿ‌ ಮಾಡುವುದರಿಂದ ಬೆಳೆ ರಕ್ಷಣೆಗೆ ಗೋಪಾಲ್ ನಾಯ್ಕ್ ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಾರೆ.

 

Comments are closed.