ಅಂತರಾಷ್ಟ್ರೀಯ

4ನೇ ಬಾರಿಗೆ ಐಪಿಎಲ್‌ ಕಿರೀಟ ಮುಡಿಗೇರಿಸಿಕೊಂಡ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌

Pinterest LinkedIn Tumblr

ದುಬೈ: ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ 4ನೇ ಬಾರಿಗೆ ಐಪಿಎಲ್‌ ಕಿರೀಟ ಮುಡಿಗೇರಿಸಿಕೊಂಡಿದೆ. ಏಳನೇ ಸ್ಥಾನದಿಂದ ಮೇಲೆದ್ದು ಫೈನಲ್‌ ತನಕ ಏರಿ ಬಂದ ಕೋಲ್ಕತಾ ನೈಟ್ ರೈಡರ್ಸ್ ಶುಕ್ರವಾರ ರಾತ್ರಿ ದುಬಾೖ ಅಂಗಳದಲ್ಲಿ 27 ರನ್ನುಗಳಿಂದ ಸೋತಿದೆ.

ಬ್ಯಾಟಿಂಗಿಗೆ ಇಳಿದ ಚೆನ್ನೈ ಆಕ್ರಮಣಕಾರಿಯಾಗಿ ಆಡಿ ಕೇವಲ 3 ವಿಕೆಟಿಗೆ 192 ರನ್‌ ಮಾಡಿ ಸವಾಲೊಡ್ಡಿತು. ಕೆಕೆಆರ್‌ ಓಪನಿಂಗ್‌ ಕೂಡ ಸ್ಫೋಟಕವಾಗಿಯೇ ಇತ್ತು. ವೆಂಕಟೇಶ್‌ ಅಯ್ಯರ್‌ (50)-ಶುಭಮನ್‌ ಗಿಲ್‌ (51) ಮೊದಲ ವಿಕೆಟಿಗೆ 91 ರನ್‌ ಸೂರೆಗೈದು ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಕೂಡಲೇ ಚೆನ್ನೈ ಬೌಲಿಂಗ್‌ ದಾಳಿ ತೀವ್ರಗೊಂಡಿತು. ಕೆಕೆಆರ್‌ ವಿಕೆಟ್‌ಗಳು ತರಗೆಲೆಯಂತೆ ಉದುರಿದವು. ಅಂತಿಮವಾಗಿ 9 ವಿಕೆಟಿಗೆ 165 ರನ್‌ ಮಾಡಿ ಶರಣಾಯಿತು. ಠಾಕೂರ್‌, ಜಡೇಜ, ಹ್ಯಾಝಲ್‌ವುಡ್‌ ಬೌಲಿಂಗ್‌ ಉತ್ತಮವಾಗಿತ್ತು.

ಚೆನ್ನೈ ಭರ್ಜರಿ ಬ್ಯಾಟಿಂಗ್‌
ಅಂತಿಮ ಎಸೆತದಲ್ಲಿ ಔಟಾದ ಫಾ ಡು ಪ್ಲೆಸಿಸ್‌ ಸರ್ವಾಧಿಕ 86 ರನ್ನುಗಳ ಕೊಡುಗೆ ಸಲ್ಲಿಸಿ ಚೆನ್ನೈ ಮೊತ್ತವನ್ನು ಬೆಳೆಸಿದರು (59 ಎಸೆತ, 7 ಬೌಂಡರಿ, 3 ಸಿಕ್ಸರ್‌). ಗಾಯಕ್ವಾಡ್‌ 32, ಮೊಯಿನ್‌ ಅಲಿ ಔಟಾಗದೆ 37 ರನ್‌ ಹೊಡೆದರು. ಒಟ್ಟು 10 ಸಿಕ್ಸರ್‌, 12 ಬೌಂಡರಿ ಸಿಡಿಸಿದ್ದು ಚೆನ್ನೈನ ಪ್ರಚಂಡ ಬ್ಯಾಟಿಂಗಿಗೆ ಸಾಕ್ಷಿ.

ಸಿಎಸ್‌ಕೆಯ ನಂಬಿಗಸ್ಥ ಆರಂಭಿಕರಾದ ಋತುರಾಜ್‌ ಗಾಯಕ್ವಾಡ್‌ ಮತ್ತು ಫಾ ಡು ಪ್ಲೆಸಿಸ್‌ ಎಂದಿನಂತೆ ಉತ್ತಮ ಲಯದಲ್ಲಿ ಸಾಗಿದರು. ಮೊದಲೆರಡು ಓವರ್‌ಗಳ ಬಳಿಕ ಗಾಯಕ್ವಾಡ್‌ ಮುನ್ನುಗ್ಗಿ ಬೀಸಲಾರಂಭಿಸಿದರು. ಶಕಿಬ್‌ಗ ಸತತವಾಗಿ ಬೌಂಡರಿ, ಸಿಕ್ಸರ್‌ಗಳ ರುಚಿ ತೋರಿಸಿದರು. ತಂಡದ ಮೊತ್ತ 20ಕ್ಕೆ ಏರಿದೊಡನೆ ಈ ಜೋಡಿಯಿಂದ ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ವಿಕೆಟಿಗೆ 700 ರನ್‌ ಒಟ್ಟುಗೂಡಿಸಿದ ದಾಖಲೆ ನಿರ್ಮಾಣಗೊಂಡಿತು.

ಪವರ್‌ ಪ್ಲೇ ಅವಧಿಯನ್ನು ಚೆನ್ನೈ ಆರಂಭಿಕರು ಸೊಗಸಾದ ಬ್ಯಾಟಿಂಗ್‌ ಮೂಲಕ ತಮ್ಮದಾಗಿಸಿಕೊಂಡರು. ಆಗ ವಿಕೆಟ್‌ ನಷ್ಟವಿಲ್ಲದೆ 50 ರನ್‌ ಒಟ್ಟುಗೂಡಿತು. ಮೊದಲ ವಿಕೆಟಿಗೆ 8.1 ಓವರ್‌ಗಳಿಂದ 61 ರನ್‌ ಬಂತು. ಆಗ ನಾರಾಯಣ್‌ ಮೊದಲ ಬ್ರೇಕ್‌ ಒದಗಿಸಿದರು. 32 ರನ್‌ ಮಾಡಿದ ಗಾಯಕ್ವಾಡ್‌ ವಾಪಸಾದರು (27 ಎಸೆತ, 3 ಬೌಂಡರಿ, 1 ಸಿಕ್ಸರ್‌).

ಗಾಯಕ್ವಾಡ್‌-ಡು ಪ್ಲೆಸಿಸ್‌ ಈ ಐಪಿಎಲ್‌ನಲ್ಲಿ 756 ರನ್‌ ಜತೆಯಾಟ ನಿಭಾಯಿಸಿದರು. ಇದು ಐಪಿಎಲ್‌ ಋತುವಿನಲ್ಲಿ ಜೋಡಿಯೊಂದು ಪೇರಿಸಿದ 3ನೇ ಅತ್ಯಧಿಕ ಗಳಿಕೆ. 2016ರಲ್ಲಿ ಕೊಹ್ಲಿ-ಎಬಿಡಿ 939 ರನ್‌ ಸಂಗ್ರಹಿಸಿದ್ದು ದಾಖಲೆ. ದ್ವಿತೀಯ ಸ್ಥಾನದಲ್ಲಿರುವ ಜೋಡಿ ವಾರ್ನರ್‌-ಬೇರ್‌ಸ್ಟೊ. ಇವರು 2019ರಲ್ಲಿ 791 ರನ್‌ ಒಟ್ಟುಗೂಡಿಸಿದ್ದರು.

ರಾಬಿನ್‌ ಉತ್ತಪ್ಪ ಕ್ರೀಸ್‌ ಇಳಿದ ಬಳಿಕ ಚೆನ್ನೈ ರನ್‌ಗತಿಯಲ್ಲಿ ಭರ್ಜರಿ ನೆಗೆತ ಕಂಡುಬಂತು. ಡು ಪ್ಲೆಸಿಸ್‌ ಕೂಡ ಮುನ್ನುಗ್ಗಿ ಬಾರಿಸಲಾರಂಭಿಸಿದರು. ಕೇವಲ 32 ಎಸೆತಗಳಿಂದ 63 ರನ್‌ ಹರಿದು ಬಂತು. ರಿವರ್ಸ್‌ ಸ್ವೀಪ್‌ಗೆ ಮುಂದಾದ ಉತ್ತಪ್ಪ ಅವರನ್ನು ನಾರಾಯಣ್‌ ಎಲ್‌ಬಿ ಬಲೆಗೆ ಕೆಡವಿದರು. ಇದಕ್ಕೂ ಹಿಂದಿ ನೆರಡು ಎಸೆತಗಳಲ್ಲಿ ಉತ್ತಪ್ಪ ಸಿಕ್ಸರ್‌ ಬಾರಿಸಿ ನಾರಾಯಣ್‌ಗೆ ಬೆದರಿಕೆಯೊಡ್ಡಿದ್ದರು. ಉತ್ತಪ್ಪ ಅವರ ಮಿಂಚಿನ ಆಟದಲ್ಲಿ 31 ರನ್‌ ಬಂತು. ಕೇವಲ 15 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 3 ಪ್ರಚಂಡ ಸಿಕ್ಸರ್‌ ಒಳಗೊಂಡಿತ್ತು.

ಈ ನಡುವೆ ಫ‌ರ್ಗ್ಯುಸನ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಡು ಪ್ಲೆಸಿಸ್‌ ಅರ್ಧ ಶತಕ ಪೂರ್ತಿಗೊಳಿಸಿದರು. 15 ಓವರ್‌ ಮುಕ್ತಾಯಕ್ಕೆ 2 ವಿಕೆಟಿಗೆ 131 ರನ್‌ ಗಳಿಸಿದ ಚೆನ್ನೈ ದೊಡ್ಡ ಮೊತ್ತದ ಸೂಚನೆ ನೀಡಿತು. ಡು ಪ್ಲೆಸಿಸ್‌-ಅಲಿ 3ನೇ ವಿಕೆಟಿಗೆ 39 ಎಸೆತಗಳಿಂದ 68 ರನ್‌ ರಾಶಿ ಹಾಕಿ ಇದನ್ನು ನಿಜಗೊಳಿಸಿದರು.

ಬದಲಾಗದ ತಂಡಗಳು
ಫೈನಲ್‌ನಲ್ಲಿ ಕಣಕ್ಕಿಳಿದ ಎರಡೂ ತಂಡಗಳಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ಇತ್ತಂಡಗಳೂ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡಿದ ಹನ್ನೊಂದರ ಬಳಗದ ಮೇಲೆಯೇ ವಿಶ್ವಾಸವಿರಿಸಿದವು. ಹೀಗಾಗಿ ಐಪಿಎಲ್‌ನ ಯಶಸ್ವಿ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ, ಬಿಗ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ಅವರಿಗೆ ಈ ಪ್ರತಿಷ್ಠಿತ ಕಾಳಗದಲ್ಲಿ ಭಾಗಿಯಾಗುವ ಅವಕಾಶ ತಪ್ಪಿತು.

ಸ್ಕೋರ್‌ ಪಟ್ಟಿ
ಚೆನ್ನೈ ಸೂಪರ್‌ ಕಿಂಗ್ಸ್‌
ಗಾಯಕ್ವಾಡ್‌ ಸಿ ಮಾವಿ ಬಿ ನಾರಾಯಣ್‌ 32
ಡು ಪ್ಲೆಸಿಸ್‌ ಸಿ ಅಯ್ಯರ್‌ ಬಿ ಮಾವಿ 86
ಉತ್ತಪ್ಪ ಎಲ್‌ಬಿಡಬ್ಲ್ಯು ಬಿ ನಾರಾಯಣ್‌ 31
ಮೊಯಿನ್‌ ಅಲಿ ಔಟಾಗದೆ 37
ಇತರ 6
ಒಟ್ಟು(3 ವಿಕೆಟಿಗೆ) 192
ವಿಕೆಟ್‌ ಪತನ:1-61,-2-124, 3-192.
ಬೌಲಿಂಗ್‌;
ಶಕಿಬ್‌ ಅಲ್‌ ಹಸನ್‌ 3-0-33-0
ಶಿವಂ ಮಾವಿ 4-0-32-1
ಲಾಕಿ ಫ‌ರ್ಗ್ಯುಸನ್‌ 4-0-56-0
ವರುಣ್‌ ಚಕ್ರವರ್ತಿ 4-0-38-0
ಸುನೀಲ್‌ ನಾರಾಯಣ್‌ 4-0-26-2
ವೆಂಕಟೇಶ್‌ ಅಯ್ಯರ್‌ 1-0-5-0
ಕೋಲ್ಕತಾ ನೈಟ್‌ ರೈಡರ್
ಶುಭಮನ್‌ ಎಲ್‌ಬಿಡಬ್ಲ್ಯು ಬಿ ದೀಪಕ್‌ 51
ವಿ. ಅಯ್ಯರ್‌ ಸಿ ಜಡೇಜ ಬಿ ಶಾರ್ದೂಲ್ ಠಾಕೂರ್50
ರಾಣಾ ಸಿ ಡು ಪ್ಲೆಸಿಸ್‌ ಬಿ ಶಾರ್ದೂಲ್ ಠಾಕೂರ್0
ನಾರಾಯಣ್‌ ಸಿ ಜಡೇಜ ಬಿ ಹ್ಯಾಝಲ್‌ವುಡ್‌ 2
ಮಾರ್ಗನ್‌ ಸಿ ದೀಪಕ್‌ ಬಿ ಹ್ಯಾಝಲ್‌ವುಡ್‌ 4
ಕಾರ್ತಿಕ್‌ ಸಿ ರಾಯುಡು ಬಿ ಜಡೇಜ 9
ಶಕಿಬ್‌ ಎಲ್‌ಬಿಡಬ್ಲ್ಯು ಬಿ ಜಡೇಜ 0
ತ್ರಿಪಾಠಿ ಸಿ ಅಲಿ ಬಿ ಠಾಕೂರ್‌ 2
ಫ‌ರ್ಗ್ಯುಸನ್‌ ಔಟಾಗದೆ 18
ಶಿವಂ ಮಾವಿ ಸಿ ದೀಪಕ್‌ ಬಿ ಬ್ರಾವೊ 20
ಚಕ್ರವರ್ತಿ ಔಟಾಗದೆ 0
ಇತರ 9
ಒಟ್ಟು (9 ವಿಕೆಟಿಗೆ) 165
ವಿಕೆಟ್‌ ಪತನ:1-91, 2-93, 3-97, 4-108, 5-119, 6-120, 7-123, 8-125, 9-164.
ಬೌಲಿಂಗ್‌;
ದೀಪಕ್‌ ಚಹರ್‌ 4-0-32-1
ಜೋಶ್‌ ಹ್ಯಾಝಲ್‌ವುಡ್‌ 4-0-29-2
ಶಾರ್ದೂಲ್ ಠಾಕೂರ್ 4-0-38-3
ಡ್ವೇನ್‌ ಬ್ರಾವೊ 4-0-29-1
ರವೀಂದ್ರ ಜಡೇಜ 4-0-37-2

Comments are closed.