ಕ್ರೀಡೆ

ಕೂದಲೆಳೆಯ ಅಂಚಿನಲ್ಲಿ ಪದಕವನ್ನು ಕಳೆದುಕೊಂಡು ನಾಲ್ಕನೇಯ ಸ್ಥಾನವನ್ನು ಪಡೆದ ಗಾಲ್ಫರ್ ಅದಿತಿ ಅಶೋಕ್

Pinterest LinkedIn Tumblr

ಟೋಕಿಯೋ: ವಿಶ್ವದಲ್ಲಿ 200ನೇ ಸ್ಥಾನ ಪಡೆದಿದ್ದ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ ಒಲಿಂಪಿಕ್ಸ್ ನಲ್ಲಿ ನಾಲ್ಕನೇಯ ಸ್ಥಾನ ಪಡೆಯುವ ಮೂಲಕ ಭಾರತಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.

ನಿನ್ನೆ ನಡೆದ ಮೂರನೇ ಸುತ್ತಿನ ಬಳಿಕ ಪದಕದ ನಿರೀಕ್ಷೆ ಮೂಡಿಸಿದ್ದ ಗಾಲ್ಫರ್ ಅದಿತಿ ಅಶೋಕ್ ಇಂದು ಕೂದಲೆಳೆಯ ಅಂಚಿನಲ್ಲಿ ಪದಕವನ್ನು ಕಳೆದುಕೊಂಡು ನಾಲ್ಕನೇಯ ಸ್ಥಾನವನ್ನು ಪಡೆದರು.

ಇಂದು ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ಬಳಿಕ ಜಂಟಿ ಮೂರನೇ ಸ್ಥಾನವನ್ನು ನ್ಯೂಜಿಲೆಂಡ್​ನ ಲೈಡಿಯಾ ಕೊ ಜೊತೆ ಗಳಿಸಿಕೊಂಡ ಕಾರಣ ಟೈ ಆಗಿತ್ತು. ಈ ವೇಳೆ ಮಳೆ ಬಂದ ಕಾರಣ ಪಂದ್ಯ ಸ್ಥಗಿತಗೊಳಿಸಲಾಗಿತ್ತು. ಬಳಿಕ ಪುನಃ ಆರಂಭಗೊಂಡು ಫೈನಲ್ ರೌಂಡ್ ನಡೆಯಿತು. ಈ ಸುತ್ತಿನಲ್ಲಿ ಅದಿತಿ 2 ಸ್ಥಾನ ಕುಸಿತಗೊಂಡು ಅಂತಿಮವಾಗಿ 4ನೇ ಸ್ಥಾನ ಪಡೆದುಕೊಂಡರು.

ಒಟ್ಟು 71 ಯತ್ನಗಳಲ್ಲಿ ಎಲ್ಲ 18 ಗುಂಡಿಗಳಿಗೆ ಬಾಲನ್ನು ಹಾಕಬೇಕು. ಅದಿತಿ ಮೊದಲ ಸುತ್ತಿನಲ್ಲಿ 67, ಎರಡನೇ ಸುತ್ತಿನಲ್ಲಿ 66, ಮೂರನೇ ಸುತ್ತಿನಲ್ಲಿ 68, ಇಂದು ನಡೆದ 4 ನೇ ಸುತ್ತಿನಲ್ಲಿ 68 ಯತ್ನಗಳಲ್ಲಿಗುಂಡಿಗೆ ಚೆಂಡನ್ನು ಹಾಕಿದರು.

ಒಟ್ಟು 4 ಸುತ್ತುಗಳ ಬಳಿಕ ವಿಶ್ವದ ನಂಬರ್ ಒನ್ ಆಟಗಾರ್ತಿ ಅಮೆರಿಕದ ನೆಲ್ಲಿ ಕೊರ್ಡಾ ಮೊದಲ ಸ್ಥಾನ ಪಡೆದರು. ನೆಲ್ಲಿ 267 ಯತ್ನ, ಜಪಾನ್ ಮತ್ತು ನ್ಯೂಜಿಲೆಂಡ್ ಆಟಗಾರ್ತಿಯರು 268 ಯತ್ನ, ಅದಿತಿ 269 ಯತ್ನಗಳಲ್ಲಿ ಗುಂಡಿಗೆ ಚೆಂಡನ್ನು ಹಾಕಿದ್ದರು. ಎರಡನೇ ಸ್ಥಾನಕ್ಕೆ ಟೈ ಆದ ಹಿನ್ನೆಲೆಯಲ್ಲಿ ಮತ್ತೆ ಪಂದ್ಯ ಆಡಿಸಲಾಯಿತು. ಇದರಲ್ಲಿ ಜಪಾನ್ ಆಟಗಾರ್ತಿ ಜಯಗಳಿಸಿದರು.

ಕಳೆದ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅದಿತಿ ಎರಡನೇ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

Comments are closed.