ಕ್ರೀಡೆ

ಟೋಕಿಯೋ ಒಲಿಂಪಿಕ್ಸ್‌ ವೇಟ್‌ಲಿಫ್ಟಿಂಗ್‌: ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟ ಮೀರಾಬಾಯಿ ಚಾನು

Pinterest LinkedIn Tumblr

ಟೋಕಿಯೋ (ಜಪಾನ್‌): ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ ವೇಟ್‌ಲಿಫ್ಟಿಂಗ್‌ ಮಹಿಳೆಯ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಅವರು ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಆದರೆ, ಪದಕ ಭರವಸೆ ಮೂಡಿಸಿದ್ದ ಭಾರತದ ಸೌರಭ್‌ ತಿವಾರಿ ಅವರು 10 ಮೀಟರ್‌ ಏರ್‌ ಪಿಸ್ತೂಲ್‌ ಪುರುಷರ ವಿಭಾಗದ ಫೈನಲ್‌ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟಿರುವ ಮೀರಾಬಾರಿ ಚಾನು ಅವರು, ಕಳೆದ ಏಪ್ರಿಲ್‌ ತಿಂಗಳಲ್ಲಿ ನಡೆದಿದ್ದ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಕ್ಲೀನ್‌ ಅಂಡ್‌ ಜೆರ್ಕ್‌ ವಿಭಾಗದಲ್ಲಿ 119 ಕೆ.ಜಿ ತೂಕ ಎತ್ತುವ ಮೂಲಕ ನೂತನ ದಾಖಲೆಯನ್ನು ನಿರ್ಮಿಸಿದ್ದರು.

2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚೀನಾ ಮೊಟ್ಟ ಮೊದಲ ಚಿನ್ನದ ಪದಕ ಗೆದ್ದುಕೊಂಡಿದೆ. ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ವಿಭಾಗದಲ್ಲಿ ಚೀನಾದ ಕ್ವೀಯನ್‌ ಯಂಗ್‌ ಅವರು ಚೆನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಆದರೆ, ಇದೇ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ ಚಂದೇಲಾ ಹಾಗೂ ಎಲವೆನಿಲ್‌ ವಲರಿವನ್‌ ಅವರು ಅರ್ಹತಾ ಸುತ್ತಿನಲ್ಲಿಯೇ ಹೊರ ಬಿದ್ದಿದ್ದರು.

ಆದರೆ, ದೀಪಿಕಾ ಕುಮಾರಿ ಹಾಗೂ ಪ್ರವೀಣ್‌ ಜಾದವ್‌ ಅವರು ಮಿಶ್ರ ತಂಡದ ವಿಭಾಗದಲ್ಲಿ ಮೊದಲ ಪಂದ್ಯದಲ್ಲಿ ಚೈನೀಸ್‌ ತೈಪೈ ವಿರುದ್ಧ ಗೆಲುವು ಪಡೆದು ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದರು, ಆದರೆ, ಅಂತಿಮ ಎಂಟರ ಘಟ್ಟದಲ್ಲಿ ಕೊರಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದಾರೆ.

ಮೀರಾಬಾಯಿ ಚಾನು ಅವರು ಬೆಳ್ಳಿ ಪದಕ ಸಾಧನೆ ಮಾಡುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ, ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಸೇರಿದಂತೆ ಹಲವರು ಮೀರಾಬಾಯಿ ಚಾನುಗೆ ಅಭಿನಂದನೆ ಅರ್ಪಿಸಿದ್ದಾರೆ.

Comments are closed.