ಢಾಕಾ: ಸ್ಥಳೀಯ ಪಂದ್ಯವೊಂದರಲ್ಲಿ ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಮೈದಾನದಲ್ಲೇ ಸಹ ಆಟಗಾರರ ವಿರುದ್ಧ ಹಲ್ಲೆಗೆ ಮುಂದಾಗಿರುವ ಘಟನೆ ಜರುಗಿದೆ.
ಕ್ಯಾಚ್ ಹಿಡಿಯುವಾಗ ಅಡ್ಡ ಬಂದ ಪರಿಣಾಮ, ಸಹ-ಆಟಗಾರ ನಾಸುಮ್ ಅಹಮದ್ ವಿರುದ್ಧ ಕೈ ಎತ್ತುವ ಮೂಲಕ ಮುಶ್ಫಿಕರ್ ರಹೀಂ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ. ಮುಶ್ಫಿಕರ್ ಹೊಡೆಯಲು ಕೈ ಎತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಮುಶ್ಫಿಕರ್ ರಹೀಂ ಬಾಂಗ್ಲಾದೇಶದ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರು. ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಬಂಗಾಬಂಧು ಟಿ20 ಕ್ರಿಕೆಟ್ ಟೂರ್ನಿ ವೇಳೆ ಮುಶ್ಫಿಕರ್ ರಹೀಂ ತಾಳ್ಮೆ ಕಳೆದುಕೊಂಡ ಘಟನೆ ಜರುಗಿದೆ. ಬೆಕ್ಸಿಮ್ಕೊ ಢಾಕಾ ಹಾಗೂ ಫಾರ್ಚೂನ್ ಬರಿಷಾಲ್ ನಡುವಿನ ಪಂದ್ಯದ 17ನೇ ಓವರ್‌ನಲ್ಲಿ ರಹೀಂ ಸಿಟ್ಟಾಗಿದ್ದಾರೆ. ಬೆಕ್ಸಿಮ್ಕೊ ಢಾಕಾ ಪರ ವಿಕೆಟ್ ಕೀಪರ್ ಮಾಡುತ್ತಿದ್ದ ಮುಶ್ಫಿಕರ್ ರಹೀಂ, ಎದುರಾಳಿ ತಂಡ ಆಫಿಫ್ ಹೊಸೆನ್ ನೀಡಿದ ಕ್ಯಾಚ್ ಹಿಡಿಯಲು ಮುಂದಾದರು. ಈ ವೇಳೆ ಸ್ಲಿಪ್‌ನಲ್ಲಿದ್ದ ನಾಸುಮ್ ಅಹಮದ್ ಕೂಡ ಕ್ಯಾಚ್ ಹಿಡಿಯಲು ಕೈವೊಡ್ಡಿದರು. ಆದರೆ,ಕ್ಯಾಚ್ ಪಡೆದ ರಹೀಂ ತಕ್ಷಣವೇ ಸಹ-ಆಟಗಾರನ ಮೇಲೆ ತಿರುಗಿ ಬಿದ್ದರು. ಈ ವೇಳೆ ತಕ್ಷಣವೇ ಉಭಯ ಆಟಗಾರರನ್ನು ಇತರ ಆಟಗಾರರು ಸುತ್ತುವರಿದು ಸಮಾಧಾನ ಮಾಡಿದರು.
ಮುಶ್ಫಿಕರ್ ರಹೀಂ ನಡತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಓರ್ವ ಹಿರಿಯ ಆಟಗಾರನಾಗಿ ನಿಮ್ಮ ನಡತೆ ಸಹಿಸಲು ಸಾಧ್ಯವಿಲ್ಲ. ದಯವಿಟ್ಟ ತಿದ್ದಿಕೊಳ್ಳಿ. ಬಹಿರಂಗವಾಗಿ ಯುವ ಕ್ರಿಕೆಟಿಗನ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.