ಕ್ರೀಡೆ

ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಹೋದರೇ ಖೇಲ್ ರತ್ನ ಪ್ರಶಸ್ತಿ ಹಿಂದಿರುಗಿಸುತ್ತೇನೆ: ಒಲಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್

Pinterest LinkedIn Tumblr


ನವದೆಹಲಿ: ಸರ್ಕಾರವು ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಹೋದರೇ, ಖೇಲ್ ರತ್ನ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ ಎಂದು ಒಲಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ರೈತಮುಖಂಡರ ನಡುವೆ ಶನಿವಾರ (ಡಿ. 5) ನಡೆದ ಮಾತುಕತೆಯಲ್ಲಿ ಯಾವುದೇ ಒಮ್ಮತ ಮೂಡಿಬರಲಿಲ್ಲ. ಹೀಗಾಗಿ ದೆಹಲಿ ಹೊರವಲಯದ ಸಿಂಗು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಭಾನುವಾರ 11ನೇ ದಿನಕ್ಕೆ ಕಾಲಿಟ್ಟಿದೆ.

ಹೀಗಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಬಾಕ್ಸರ್ ವಿಜೇಂದರ್ ಸಿಂಗ್ ರೈತರಿಗೆ ತಮ್ಮ ಬೆಂಬಲ ಸೂಚಿಸಿದರು. ಮಾತ್ರವಲ್ಲದೆ ಈ ಕೂಡಲೇ ಕೃಷಿ ಸಂಬಂಧಿತ ಕಾಯ್ದೆಗಳನ್ನು ಹಿಂಪಡೆಯದಿದ್ದರೇ, ಕ್ರೀಡಾ ಸಾಧನೆಗೆ ದೇಶದಲ್ಲಿ ನೀಡಲಾಗುವ ಅತ್ಯುನ್ನತ ಗೌರವ ಖೆಲ್ ರತ್ನ ಪ್ರಶಸ್ತಿ ಹಿಂದಿರುಗಿಸಲಾಗುವುದು ಎಂದು ತಿಳಿಸಿದರು.

ನಾನು ಪಂಜಾಬ್ ಗೆ ಬದ್ದನಾಗಿರುತ್ತೇನೆ. ನನ್ನ ವೃತ್ತಿ ಜೀವನದ ಸಾಕಷ್ಟು ಸಮಯಗಳನ್ನು ಪಟಿಯಾಲದಲ್ಲಿ ಕಳೆದಿದ್ದೇನೆ. ಇದೀಗ ಪಂಜಾಬ್ ಗಾಗಿ ಹೋರಾಟದಲ್ಲಿ ಭಾಗಿಯಾಗುತ್ತಿದ್ದೇನೆ. ರೈತರು ದೇಶದ ಆಸ್ತಿ, ಹೀಗಾಗಿ ಪ್ರತಿಯೊಬ್ಬ ಭಾರತೀಯ ಈ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಕರೆ ನಿಡಿದರು.

ವಿಜೇಂದರ್ ಸಿಂಗ್ 2008ರಲ್ಲಿ ಬೀಜಿಂಗ್ ನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಆ ಮೂಲಕ ಬಾಕ್ಸರ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಇವರ ಸಾಧನೆಯನ್ನು ಗುರುತಿಸಿ 2009ರಲ್ಲಿ ಭಾರತ ಸರ್ಕಾರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

2019ರಲ್ಲಿ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ್ದ ವಿಜೇಂದರ್, ದೆಹಲಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು.

Comments are closed.