ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಕ್ರಿಸ್ ಗೇಲ್ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದ್ದು, ಇದಕ್ಕೆ ದಂಡ ಕೂಡ ವಿಧಿಸಲಾಗಿದೆ.
ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದು ಬೀಗಿದೆ. 185ರನ್ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಆರ್ಆರ್ ಅನಾಯಾಸವಾಗಿ ಗೆದ್ದು ಬೀಗಿತ್ತು. ಈ ಮಧ್ಯೆ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಗೇಲ್. ಅವರು ಬ್ಯಾಟ್ ಬೀಸಿ ಎಸೆದ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
#IPL2020 #KXIPvRR #RRvsKXIP : Chris Gayle Wicket pic.twitter.com/G1OxALwaEX
— IPL 2020 HIGHLIGHT (@ipl2020highlite) October 30, 2020
ಟಾಸ್ ಗೆದ್ದ ಆರ್ಆರ್ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡರು. ಕಪ್ತಾನನ ನಿರ್ಧಾರ ಸರಿ ಎಂಬಂತೆ ಮೊದಲ ಓವರ್ನಲ್ಲೇ ಮಂದೀಪ್ ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ಜೋಫ್ರಾ ಆರ್ಚರ್ ರಾಜಸ್ಥಾನ್ಗೆ ಮೊದಲ ಯಶಸ್ಸು ತಂದುಕೊಟ್ಟರು.
ಬಳಿಕ ಕ್ರೀಸ್ಗಿಳಿದ ಕ್ರಿಸ್ ಗೇಲ್ ಆರಂಭದಲ್ಲೇ ಆರ್ಭಟಿಸಲು ಆರಂಭಿಸಿದರು. ಅದರಲ್ಲೂ ಕಾರ್ತಿಕ್ ತ್ಯಾಗಿ ಎಸೆದ 5ನೇ ಓವರ್ನಲ್ಲಿ ಫೋರ್, ಸಿಕ್ಸ್, ಫೋರ್ ಬಾರಿಸುವ ಮೂಲಕ ರನ್ಗತಿಯನ್ನು ಹೆಚ್ಚಿಸಿದರು. ಮತ್ತೊಂದೆಡೆ ನಾಯಕ ಕೆಎಲ್ ರಾಹುಲ್ ಸಹ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್ಪ್ಲೇ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ತಂಡದ ಮೊತ್ತ 53 ಕ್ಕೆ ಬಂದು ನಿಂತಿತು. ಅಲ್ಲದೆ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಮೊದಲ ಹತ್ತು ಓವರ್ ಮುಕ್ತಾಯಕ್ಕೆ 81 ರನ್ ಪೇರಿಸಿತು. ಇದರ ಬೆನ್ನಲ್ಲೇ ಕ್ರಿಸ್ ಗೇಲ್ ಭರ್ಜರಿ ಸಿಕ್ಸರ್ನೊಂದಿಗೆ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆಗೆ ಯುನಿವರ್ಸ್ ಬಾಸ್ ಬ್ಯಾಟ್ನಿಂದ 4 ಸಿಕ್ಸರ್ ಹಾಗೂ 4 ಬೌಂಡರಿಗಳು ಮೂಡಿ ಬಂದಿದ್ದವು.
ತಂಡದ ಮೊತ್ತ 121 ರನ್ ಆಗಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾದ ಕೆಎಲ್ ರಾಹುಲ್ (46) ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಅರ್ಧಶತಕವನ್ನು ತಪ್ಪಿಸಿಕೊಂಡರು. ಬಳಿಕ ಗೇಲ್ ಜೊತೆಗೂಡಿದ ಪೂರನ್ ಆರಂಭದಲ್ಲೇ ಸಿಕ್ಸರ್ಗಳ ಮೂಲಕ ಪವರ್ ತೋರಿಸಿದರು. ಪರಿಣಾಮ 16 ಓವರ್ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ 137 ರನ್ಗಳಿಸಿತು.ಅಂತಿಮ ಓವರ್ಗಳಲ್ಲಿ ಆರ್ಭಟಿಸಲು ಆರಂಭಿಸಿದ ಪೂರನ್-ಗೇಲ್ ಸಿಕ್ಸ್, ಫೋರ್ಗಳ ಮೂಲಕ ರನ್ ಗತಿಯನ್ನು ಹೆಚ್ಚಿಸಿದರು.
ಈ ಮಧ್ಯೆ 99 ರನ್ ಗಳಿಸಿದ್ದ ಕ್ರಿಸ್ ಗೇಲ್ ಆರ್ಚರ್ ಬೌಲಿಂಗ್ನಲ್ಲಿ ಬೋಲ್ಡ್ ಆದರು. ಈ ವೇಳೆ ಬೇಸರ ಹಾಗು ಸಿಟ್ಟಿನಿಂದ ಕ್ರಿಸ್ಗೇಲ್ ಬ್ಯಾಟ್ ಬೀಸಿ ಎಸೆದರು. ಸಿಟ್ಟಿನಿಂದ ಎಸೆದ ಬ್ಯಾಟ್ ದೂರ ಹೋಗಿ ಬಿದ್ದಿತ್ತು. ನಂತರ ಸ್ವಲ್ಪ ಕೋಪ ತಗ್ಗಿಸಿಕೊಂಡ ಗೇಲ್ ಆರ್ಚರ್ಗೆ ಶೇಕ್ ಹ್ಯಾಂಡ್ ಮಾಡಿ ಮೈದಾನದಿಂದ ನಿರ್ಗಮಿಸಿದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಅಲ್ಲದೆ, ಗೇಲ್ ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಂಡ ಹಾಕಲಾಗಿದೆ. ಅವರ ಮ್ಯಾಚ್ ಸಂಭಾವನೆಯ ಶೇ.10ರನ್ನು ದಂಡವಾಗಿ ನೀಡುವಂತೆ ಐಪಿಎಲ್ ಮಂಡಳಿ ಸೂಚಿಸಿದೆ.
ಕಿಂಗ್ಸ್ ಇಲವೆನ್ ಪಂಜಾಬ್ ತಂಡ ನಿನ್ನೆಯ ಪಂದ್ಯದಲ್ಲಿ ಸೋತಿದೆ.