ನಿನ್ನೆ ರಾತ್ರಿ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 13ನೇ ಆವೃತ್ತಿ ಐಪಿಎಲ್ನ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರನ್ನು ರವೀಂದ್ರ ಜಡೇಜಾಗೆ ನೀಡಿದ ಧೋನಿ ನಿರ್ಧಾರ ಸರಿಯೇ…? ಇದು ಈಗ ಎದ್ದಿರುವ ಪ್ರಶ್ನೆ !
ಶಿಖರ್ ಧವನ್ ಅವರ ವೈಭವದ ಶತಕ ಹಾಗೂ ಅಕ್ಷರ್ ಪಟೇಲ್ ಅವರ ಕೊನೆಯ ಓವರ್ನ ಬ್ಯಾಟಿಂಗ್ ನೆರವಿನಿಂದ ಅಯ್ಯರ್ ಪಡೆ 5 ವಿಕೆಟ್ಗಳ ಜಯ ಸಾಧಿಸಿದೆ. ಇದರೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಸಿಎಸ್ಕೆ 6ನೇ ಸೋಲು ಕಂಡಿದೆ. ಈ ಮಧ್ಯೆ ಕೊನೆಯ ಓವರ್ಅನ್ನು ಬ್ರಾವೋಗೆ ನೀಡಲಿಲ್ಲವೇಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದು, ಇದಕ್ಕೆ ಧೋನಿ ಉತ್ತರ ನೀಡಿದ್ದಾರೆ.
ಚೆನ್ನೈ ನೀಡಿದ್ದ 180 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಇನ್ನಿಂಗ್ಸ್ನ 2ನೇ ಎಸೆತದಲ್ಲೇ ಸೊನ್ನೆ ಸುತ್ತಿದರೆ, ಅಜಿಂಕ್ಯ ರಹಾನೆ 8 ರನ್ಗೆ ಔಟ್ ಆಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ಈ ಸಂದರ್ಭ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಉತ್ತಮ ಜೊತೆಯಾಟ ಆಡಿದರು. ಧವನ್ ಶತಕ ಕೂಡ ಬಾರಿಸಿದರು.
ಈ ಪಂದ್ಯವನ್ನು ರೋಚಕ ಹಂತಕ್ಕೆ ತೆಗೆದುಕೊಂಡು ಹೋಗಿದ್ದು ಕೊನೆಯ ಓವರ್. ಕೊನೆಯ 6 ಎಸೆತೆಗಳಲ್ಲಿ 17 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಎಲ್ಲರೂ ಬ್ರಾವೋ ಬೌಲಿಂಗ್ಗೆ ಬರುತ್ತಾರೆ ಎಂದು ಭಾವಿಸಿದ್ದರು. ಆದರೆ, ಅಚ್ಚರಿ ಎಂಬಂತೆ ಜಡೇಜಾ ಬೌಲಿಂಗ್ಗೆ ಇಳಿದಿದ್ದರು. ಒಂದೇ ಓವರ್ನಲ್ಲಿ ಡೆಲ್ಲಿ ತಂಡ ಅನಾಯಾಸವಾಗಿ 17 ರನ್ ಬಾರಿಸಿತ್ತು.
ಬ್ರಾವೋ ನಿನ್ನೆಯ ಮ್ಯಾಚ್ನಲ್ಲಿ ಮೂರು ಓವರ್ ಎಸೆದು 23 ರನ್ ನೀಡಿ ಒಂದು ವಿಕೆಟ್ ಕಿತ್ತಿದ್ದರು. ಎಕಾನಮಿ ರೇಟ್ 7.70 ಇತ್ತು. ಹೀಗಾಗಿ, ಬ್ರಾವೋ ಅವರನ್ನು ಕೊನೆಯ ಓವರ್ನಲ್ಲಿ ಬೌಲಿಂಗ್ಗೆ ಕಳುಹಿಸಿದ್ದರೆ ಡೆಲ್ಲಿ ತಂಡದವರಿಗೆ 17 ರನ್ ಹೊಡೆಯೋದು ಕಷ್ಟವಾಗುತ್ತಿತ್ತು ಎಂಬುದು ಕ್ರಿಕೆಟ್ ಪಂಡಿತರ ವಾದವಾಗಿತ್ತು.
ಇದಕ್ಕೆ ಧೋನಿ ಸ್ಪಷ್ಟನೆ ನೀಡಿದ್ದಾರೆ. ಬ್ರಾವೋ ಫಿಟ್ ಆಗಿರಲಿಲ್ಲ. ಹೀಗಾಗಿ, ಅವರ ಬಾಲ್ ಹಾಕಲು ಸಾಧ್ಯವೇ ಇರಲಿಲ್ಲ. ಹೀಗಾಗಿ, ಕರ್ಣ್ ಶರ್ಮಾ ಅಥವಾ ಜಡ್ಡು (ಜಡೇಜಾ) ಅವರನ್ನು ಬೌಲಿಂಗ್ಗೆ ಇಳಿಸಬೇಕಿತ್ತು. ಹೀಗಾಗಿ ಜಡ್ಡುಗೆ ಬಾಲ್ ನೀಡಿದೆ ಎಂದಿದ್ದಾರೆ ಧೋನಿ.