ಕ್ರೀಡೆ

ಐಪಿಎಲ್ 2020ರಲ್ಲಿ ಆರ್​ಸಿಬಿ ಭರ್ಜರಿ ಶುಭಾರಂಭ; ಸನ್​​ರೈಸರ್ಸ್​ ಹೈದರಾಬಾದನ್ನು ಸೋಲಿಸಿ ಗೆಲುವಿನ ನಗೆ ಬೀರಿದ ಕೊಹ್ಲಿ ಪಡೆ: ಡಿವಿಲಿಯರ್ಸ್​ ಸ್ಫೋಟಕ ಬ್ಯಾಟಿಂಗ್

Pinterest LinkedIn Tumblr

ದುಬೈ: ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ನ 3ನೇ ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ತಂಡವನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿಯೇ ಮಣಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಬ್ಯಾಟಿಂಗ್​ನಲ್ಲಿ ದೇವದತ್ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್​ ಅಬ್ಬರಿಸಿದರೆ ಬೌಲಿಂಗ್​ನಲ್ಲಿ ಚಹಾಲ್ ಸ್ಲಿನ್ ಮೋಡಿಯಿಂದ ಕೊಹ್ಲಿ ಪಡೆ 10 ರನ್​ಗಳ ಜಯದೊಂದಿಗೆ ಐಪಿಎಲ್ 2020 ರಲ್ಲಿ ಶುಭಾರಂಭ ಮಾಡಿದೆ.

ಆರ್​ಸಿಬಿ ನೀಡಿದ್ದ 164 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್(6) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್​ಗೆ ಜಾನಿ ಬೈರ್​ಸ್ಟೋ ಜೊತೆಯಾದ ಮನೀಶ್ ಪಾಂಡೆ ಅತ್ಯುತ್ತಮ ಆಟ ಪ್ರದರ್ಶಿಸಿದರು.

ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಆರ್​ಸಿಬಿ ಬೌಲರ್​ಗಳನ್ನು ಕಾಡಿದರು. ಆದರೆ, ಉತ್ತಮವಾಗೇ ಆಡುತ್ತಿದ್ದ ಮನೀಶ್ ಪಾಂಡೆ 34 ರನ್ ಗಳಿಸಿರುವಾಗ ಚಹಾಲ್ ಬೌಲಿಂಗ್​ನಲ್ಲಿ ಔಟ್ ಆದರು. ಈ ಮೂಲಕ ಬೈರ್​ಸ್ಟೋ-ಪಾಂಡೆ 67 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.

ತನ್ನ ಅದ್ಭುತ ಆಟ ಮುಂದುವರೆಸಿದ ಬೈರ್​ಸ್ಟೋ ತಂಡದ ರನ್ ಗತಿಯನ್ನು ಕಡಿಮೆ ಆಗದಂತೆ ನೋಡಿಕೊಂಡರು. ಅದರಂತೆ ಅರ್ಧಶತಕವನ್ನೂ ಪೂರೈಸಿದರು. ಆದರೆ, ಈ ಸಂದರ್ಭ ನಡೆದಿದ್ದು ಚಹಾಲ್ ಸ್ಪಿನ್ ಮೋಡಿ.

ತನ್ನ ಗೂಗ್ಲಿ ಬೌಲಿಂಗ್​ನಿಂದ ಬೈರ್​ಸ್ಟೋ ಅವರನ್ನು ಬೌಲ್ಡ್​ ಮಾಡಿದರೆ ಬಂದ ಬೆನ್ನಲ್ಲೆ ವಿಜಯ್ ಶಂಕರ್ ಕೂಡ ಚಹಾಲ್ ಸ್ಪಿನ್ ಬಲೆಗೆ ಸಿಲುಕು ಪೆವಿಲಯನ್ ಸೇರಿಕೊಂಡರು. ಬೈರ್​ಸ್ಟೋ 43 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಿಡಿಸಿ 61 ರನ್ ಗಳಿಸಿದರು. ಇದರ ಬೆನ್ನಲ್ಲೆ ಪ್ರಿಯಂ ಗರ್ಗ್​ ಕೂಡ 12 ರನ್​ಗೆ ನಿರ್ಗಮಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಸನ್​ರೈಸರ್ಸ್​ 19.4 ಓವರ್​ನಲ್ಲಿ 153 ರನ್​ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಆರ್​ಸಿಬಿ ಪರ ಯಜುವೇಂದ್ರ ಚಹಾಲ್ 3 ವಿಕೆಟ್ ಕಿತ್ತು ಮಿಂಚಿದರೆ, ನವ್​ದೀಪ್ ಸೈನಿ 2 ಹಾಗೂ ಶಿವಂ ದುಬೆ ತಲಾ 2 ವಿಕೆಟ್ ಪಡೆದರು. 10 ರನ್​ಗಳ ಗೆಲುವಿನೊಂದಿಗೆ ಆರ್​ಸಿಬಿ ಐಪಿಎಲ್ 2020 ರಲ್ಲಿ ಭರ್ಜರಿ ಶುಭಾರಂಭ ಮಾಡಿ 2 ಅಂಕ ತನ್ನದಾಗಿಸಿದೆ.ಇದಕ್ಕೂ ಮೊದಲು ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಆರ್​​ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಓಪನರ್​ಗಳು 6 ಓವರ್​ನಲ್ಲಿ 53 ರನ್ ಕಲೆಹಾಕಿದರು.

ನಂತರವೂ ತನ್ನ ಆರ್ಭಟ ಮುಂದುವರೆಸಿದ ಪಡಿಕ್ಕಲ್ 36 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ ಐಪಿಎಲ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. ಆದರೆ, ಅರ್ಧಶತಕದ ಬೆನ್ನಲ್ಲೆ 56 ರನ್​ಗೆ ಔಟ್ ಆದರು. ಇದರ ಬೆನ್ನಲ್ಲೆ 27 ಎಸೆತಗಳಲ್ಲಿ 29 ರನ್ ಗಳಿಸಿದ್ದ ಫಿಂಚ್ ಕೂಡ ನಿರ್ಗಮಿಸಿ ಶಾಕ್ ನೀಡಿದರು. ನಾಯಕ ವಿರಾಟ್ ಕೊಹ್ಲಿ ತುಂಬಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 14 ರನ್​ಗೆ ಔಟ್ ಆದರು.

ಬಳಿಕ ಎಬಿ ಡಿವಿಲಿಯರ್ಸ್​ ಹಾಗೂ ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಎಬಿಡಿ ಕೇವಲ 30 ಎಸೆತಗಳಲ್ಲಿ 4 ಬೌಂಡಿರಿ, ಸಿಕ್ಸರ್ ಸಿಡಿಸಿ 51 ರನ್ ಚಚ್ಚಿ ಕೊನೆಯ ಓವರ್​​ನಲ್ಲಿ ಔಟ್ ಆದರು. ಅಂತಿಮವಾಗಿ ಆರ್​ಸಿಬಿ ನಿಗದಿತ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು. ಹೈದರಾಬಾದ್ ಪರ ನಟರಾಜನ್, ಅಭಿಷೇಕ್ ಶರ್ಮಾ ಹಾಗೂ ವಿಜಯ್ ಶಂಕರ್ ತಲಾ 1 ವಿಕೆಟ್ ಕಿತ್ತರು.

Comments are closed.