ಕ್ರೀಡೆ

ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌  ಪಂದ್ಯಕ್ಕೆ ಸೆಲೆಕ್ಟೆಡ್ ವೀಕ್ಷಕರಿಗೆ ಮಾತ್ರ ಅವಕಾಶ

Pinterest LinkedIn Tumblr


ಬ್ರಿಸ್ಬೇನ್‌: ಮುಂಬರುವ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವೆ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ವನಿತಾ ಕ್ರಿಕೆಟ್‌ ಸರಣಿ ಮೂಲಕ ವೀಕ್ಷಕರಿಗೆ ಸ್ಟೇಡಿಯಂ ಬಾಗಿಲು ತೆರೆಯಲು “ಕ್ರಿಕೆಟ್‌ ಆಸ್ಟ್ರೇಲಿಯ’ (ಸಿಎ) ನಿರ್ಧರಿಸಿದೆ

ಆಸ್ಟ್ರೇಲಿಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ಸೀಮಿತ ಸಂಖ್ಯೆಯ ವೀಕ್ಷಕರಿಗೆ ಅವಕಾಶ ನೀಡಲು ಅದು ತೀರ್ಮಾನಿಸಿದೆ. .

ಇಲ್ಲಿನ “ಅಲನ್‌ ಬೋರ್ಡರ್‌ ಫೀಲ್ಡ್‌’ನಲ್ಲಿ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಾಗುವುದು. ವೀಕ್ಷಕರಿಗಾಗಿ ಒಟ್ಟು 6 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಸೀಮಿತ ವಲಯದ ವೀಕ್ಷಕರನ್ನು ನಿರ್ದಿಷ್ಟ ಪಂದ್ಯಗಳಿಗಷ್ಟೇ ಸ್ಟೇಡಿಯಂ ಪ್ರವೇಶಾವಕಾಶ ನೀಡುವುದು ಆಸ್ಟ್ರೇಲಿಯದ ಯೋಜನೆ. ಯಾವುದೇ ಕಾರಣಕ್ಕೂ ವೀಕ್ಷಕರು ತಮ್ಮ ವಲಯದಿಂದ ಇನ್ನೊಂದು ವಲಯವನ್ನು ಪ್ರವೇಶಿಸಿ ಪುನಃ ಪಂದ್ಯಗಳಿಗೆ ಹಾಜರಾಗುವಂತಿಲ್ಲ.

ಈ ವಿಧಾನದಿಂದ ಒಬ್ಬರಿಗೆ ಒಂದು ಪಂದ್ಯವನ್ನಷ್ಟೇ ವೀಕ್ಷಿಸಲು ಸಾಧ್ಯವಾಗುತ್ತದೆ. ರಾಜ್ಯ ಸರಕಾರದ ನೂತನ ಮಾರ್ಗಸೂಚಿಯಂತೆ ಶೇ. 50ರಷ್ಟು ವೀಕ್ಷಕರು ಸ್ಟೇಡಿಯಂ ಪ್ರವೇಶಿಸಬಹುದಾಗಿದೆ. ಎರಡು ಬ್ಯಾಟ್‌ಗಳಷ್ಟು ಅಂತರದಲ್ಲಿ ಇವರು ಕುಳಿತುಕೊಳ್ಳಬೇಕು. ಒಂದು ಮಿತಿಯಲ್ಲಿ ಸಂಭ್ರಮಾಚರಣೆಗೆ ಅವಕಾಶವಿದೆ. ಆದರೆ ಆಟಗಾರರೊಂದಿಗೆ ಫೋಟೊ ತೆಗೆಸಿಕೊಳ್ಳಲು, ಹಸ್ತಾಕ್ಷರ ಪಡೆಯಲು ನಿರ್ಬಂಧ ವಿಧಿಸಲಾಗಿದೆ. ಆಸ್ಟ್ರೇಲಿಯದಲ್ಲಿ ಕೊನೆಯ ಸಲ ವೀಕ್ಷಕರಿಗೆ ಅವಕಾಶ ಕಲ್ಪಿಸಲಾದ ಪಂದ್ಯವೆಂದರೆ ವನಿತಾ ಟಿ20 ವಿಶ್ವಕಪ್‌ ಫೈನಲ್‌.

ಬ್ರಿಸ್ಬೇನ್‌ ಬಳಿಕ ಮೆಲ್ಬರ್ನ್ ನಲ್ಲೂ ಪ್ರೇಕ್ಷಕರ ಪ್ರವೇಶದ ಬಗ್ಗೆ ಅವಲೋಕಿಸಲಾಗುತ್ತಿದೆ. ಇಲ್ಲಿ ನಡೆಯಲಿರುವ ವರ್ಷಾಂತ್ಯದ ಭಾರತ-ಆಸ್ಟ್ರೇಲಿಯ ನಡುವಿನ “ಬಾಕ್ಸಿಂಗ್‌ ಡೇ ಟೆಸ್ಟ್‌’ ಮತ್ತು ಜನವರಿಯಲ್ಲಿ ನಡೆಯುವ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಗೆ ವೀಕ್ಷಕರಿಗೆ ಅವಕಾಶ ಕಲ್ಪಿಸುವ ಬಗ್ಗೆ ವಿಕ್ಟೋರಿಯಾ ಸರಕಾರ ಯೋಚಿಸುತ್ತಿದೆ. ಇಲ್ಲಿನ ಪ್ರೀಮಿಯರ್‌ ಡೇನಿಯಲ್‌ ಆ್ಯಂಡ್ರೂಸ್‌, ಕ್ರಿಕೆಟ್‌ ಮತ್ತು ಟೆನಿಸ್‌ ಆಡಳಿತ ಮಂಡಳಿಗಳೊಂದಿಗೆ ಸುದೀರ್ಘ‌ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಆದರೆ ಇಷ್ಟು ಬೇಗ ಸ್ಪಷ್ಟ ತೀರ್ಮಾನವೊಂದನ್ನು ತೆಗೆದುಕೊಳ್ಳುವುದು ಅಸಾಧ್ಯ ಎಂದೂ ಹೇಳಿದ್ದಾರೆ.

Comments are closed.