ನವದೆಹಲಿ: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಕೊನೆಗೂ ದಿನಾಂಕ ನಿಗದಿಯಾದಂತೆ ಕಾಣುತ್ತಿದೆ. ಸೆಪ್ಟೆಂಬರ್ 19ರಂದು ಆರಂಭವಾಗಿ ನವೆಂಬರ್ 8ರಂದು ಮುಕ್ತಾಯಗೊಳ್ಳಲಿದೆ ಎಂದು ಬಿಸಿಸಿಐಯ ಖಚಿತ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಾವಳಿ ಆಯೋಜನೆಗೆ ರೂಪುರೇಷೆಗಳನ್ನು ಸಿದ್ದಪಡಿಸಲು ಐಪಿಎಲ್ ಆಡಳಿತ ಮಂಡಳಿ ಮುಂದಿನ ವಾರ ಸಭೆ ಸೇರಲಿದ್ದು ಅಲ್ಲಿ ನಿಗದಿತ ವೇಳಾಪಟ್ಟಿಗೆ ಒಪ್ಪಿಗೆ ಸೂಚಿಸಲಿದೆ. ಈ ಬಗ್ಗೆ ಬಿಸಿಸಿಐ ಅನೌಪಚಾರಿಕವಾಗಿ ಈಗಾಗಲೇ ಫ್ರೆಂಚೈಸಿಗಳಿಗೆ ತಿಳಿಸಿದೆ ಎನ್ನಲಾಗುತ್ತಿದೆ.
ಐಪಿಎಲ್ ಸೆಪ್ಟೆಂಬರ್ 19ರಂದು ಭಾನುವಾರ ಆರಂಭವಾಗಿ ಅಂತಿಮ ಪಂದ್ಯ ನವೆಂಬರ್ 8ರಂದು ಭಾನುವಾರ ಮುಕ್ತಾಯಗೊಳ್ಳಲಿದೆ. ಇದು 51 ದಿನಗಳ ಪಂದ್ಯಾವಳಿಯಾಗಿದ್ದು ಫ್ರಾಂಚೈಸಿಗಳು, ಪ್ರಚಾರಕರು ಮತ್ತು ಇತರ ಸಂಬಂಧಪಟ್ಟವರಿಗೆ ಹೊಂದಿಕೆಯಾಗಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ನಿಂದ ನವೆಂಬರ್ ವರೆಗೆ ನಡೆಯಲಿದ್ದ ಟಿ20 ವಿಶ್ವಕಪ್ ನ್ನು ಮುಂದೂಡಿ ಐಸಿಸಿ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಐಪಿಎಲ್ ನ್ನು ಆಯೋಜಿಸಲಾಗುತ್ತಿದೆ.
ಐಪಿಎಲ್ ನಲ್ಲಿ ಪ್ರತಿ ತಂಡಕ್ಕೆ ತರಬೇತಿ, ಸಿದ್ದತೆ ಮಾಡಿಕೊಳ್ಳಲು ಕನಿಷ್ಠ ಒಂದು ತಿಂಗಳು ಸಮಯ ಬೇಕಾಗಿರುವುದರಿಂದ ಆಗಸ್ಟ್ 20ಕ್ಕೆ ತಂಡಗಳು ಯುಎಇಗೆ ಪ್ರಯಾಣ ಬೆಳೆಸಲಿವೆ.
Comments are closed.