ಕ್ರೀಡೆ

ಟೀಮ್‌ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ಖಚಿತ: ವೇಳಾಪಟ್ಟಿ ಪ್ರಕಟ!

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮತ್ತು ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳು ನಡೆಯುತ್ತವೇ ಅಥವಾ ಇಲ್ಲವೇ ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ, ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಲಿರುವ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ.

ಕ್ರಿಕೆಟ್‌ ಆಸ್ಟ್ರೇಲಿಯಾ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ನಾಲ್ಕು ಪಂದ್ಯಗಳ ವೇಳಾಪಟ್ಟಿಯನ್ನು ಗುರುವಾರ ಪ್ರಕಟ ಮಾಡಿದ್ದು, ಟೀಮ್‌ ಇಂಡಿಯಾ ಮೊತ್ತ ಮೊದಲ ಬಾರಿ ವಿದೇಶದಲ್ಲಿ ಡೇ-ನೈಟ್‌ ಟೆಸ್ಟ್‌ ಪಂದ್ಯವನ್ನಾಡುವುದು ಖಾತ್ರಿಯಾಗಿದೆ.

ಆಸ್ಟ್ರೇಲಿಯಾ ತಂಡ ಅಫಘಾನಿಸ್ತಾನ ವಿರುದ್ಧ ನವೆಂಬರ್‌ 21ರಂದು ಏಕಮಾತ್ರ ಟೆಸ್ಟ್‌ ಪಂದ್ಯವನ್ನು ಆಡಲಿದ್ದು, ಬಳಿಕ ಭಾರತ ವಿರುದ್ಧದ ಟೆಸ್ಟ್‌ ಸರಣಿ ಶುರುವಾಗಲಿದೆ. ಮೊದಲ ಪಂದ್ಯ ಡಿ.3ರಂದು ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ. ನಂತರ ಡಿ.11ರಿಂದ 15ರವರೆಗೆ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ಭಾರತ vs ಆಸ್ಟ್ರೇಲಿಯಾ ನಡುವಣ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ನಡೆಯಲಿದೆ.

ಡಿ.26ರಂದು ಮೆಲ್ಬೋರ್ನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್‌ ಪಂದ್ಯ ನಡೆಯಲಿದ್ದು, ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ 2021ರ ಜನವರಿ 21ರಿಂದ 7ರವರೆಗೆ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯಲಿದೆ. ಭಾರತ ತಂಡದ ಇದೇ ಪ್ರವಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯನ್ನೂ ಆಡಲಿದ್ದು, ಅಕ್ಟೋಬರ್‌ 11, 14 ಮತ್ತು 17ರಂದು ಈ ಪಂದ್ಯಗಳು ಜರುಗಲಿವೆ. ಬಳಿಕ ಜನವರಿಯಲ್ಲಿ ಕನಿಷ್ಠ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯೂ ನಡೆಯಲಿದೆ.

“ಪರಿಸ್ಥಿತಿ ನಿಯಂತ್ರಿಸುವುದು ಈಗ ನಮ್ಮ ಕೈಲಿಲ್ಲ. ಹೀಗಾಗಿ ಈಗ ಬಿಡುಗಡೆ ಮಾಡಲಾಗಿರುವ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಗಳು ಆದರೂ ಆಗಬಹುದು. ಆದರೆ, ಇದೇ ಅವಧಿಯಲ್ಲಿ ಸರಣಿಗಳು ಜರುಗುವಂತೆ ಮಾಡಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೇವೆ,” ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಸಿಇಒ ಕೆವಿನ್‌ ರಾಬರ್ಟ್ಸ್‌ ಹೇಳಿದ್ದಾರೆ.

ಇನ್ನು ಬಿಸಿಸಿಐ ಮೂಲಗಳು ಹೇಳಿರುವಂತೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರೆ ಸರಣಿ ಆರಂಭಕ್ಕೂ ಮೊದಲು ಅಗತ್ಯವಿರುವ 14 ದಿನಗಳ ಕ್ವಾರಂಟೈನ್‌ಗೆ ಆಟಗಾರರು ಒಳಪಡಲಿದ್ದಾರೆ.

Comments are closed.