ಕ್ರೀಡೆ

ಹೆಂಡತಿ ಹಜೇಲ್ ಕೀಜ್ ಜೊತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಯುವರಾಜ್ ಸಿಂಗ್

Pinterest LinkedIn Tumblr


ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು, ಪತ್ನಿ ಹಜೇಲ್ ಕೀಜ್ ಜೊತೆ ವೆಬ್ ಸೀರಿಸ್‍ನಲ್ಲಿ ನಟನೇ ಮಾಡುವ ಮೂಲಕ ಕ್ರಿಕೆಟ್ ಬಳಿಕ ಸಿನಿಮಾರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧವಾಗಿದ್ದಾರೆ.

ಹೌದು ಕ್ರಿಕೆಟ್ ಆಟಕ್ಕೆ ಯುವಿ ವಿದಾಯ ಹೇಳಿದ ಮೇಲೆ ಅವರು ಮತ್ತೇನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ವಿದಾಯದ ನಂತರ ಯುವರಾಜ್ ಸಿಂಗ್ ಅವರು ಕೆಲ ವಿದೇಶಿ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಪತ್ನಿ ಜೊತೆ ವೆಬ್ ಸೀರಿಸ್ ನಲ್ಲಿ ನಟಿಸುವ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಇಷ್ಟು ದಿನ ಕ್ರಿಕೆಟ್‍ನಲ್ಲಿ ತನ್ನ ಆಲ್‍ರೌಂಡರ್ ಆಟದ ಮೂಲಕ ಕ್ರೀಡಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದ ಈ ಎಡಗೈ ದಾಂಡಿಗ, ಈಗ ಅಸ್ಸಾಂನ ಡ್ರೀಮ್ ಹೌಸ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ವೆಬ್ ಸರಣಿಯಲ್ಲಿ ಅಭಿನಿಯಿಸುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ಅವರ ಪತ್ನಿ ಹಜೇಲ್ ಕೀಜ್ ಮತ್ತು ಸಹೋದರ ಜೋರಾವರ್ ಸಿಂಗ್ ಅವರು ಕೂಡ ಅಭಿನಯಿಸಲಿದ್ದಾರೆ.

ಈ ವೆಬ್ ಸರಣಿಯ ಇನ್ನೊಂದು ವಿಶೇಷವೆಂದರೆ ಇದರಲ್ಲಿ ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೂ ದಿನ ಬ್ಯಾಟ್ ಹಿಡಿದು ಘರ್ಜಿಸಿದ್ದ ಯುವಿ ಈಗ ಬಣ್ಣ ಹಚ್ಚಿ ಮೋಡಿ ಮಾಡಲು ಬರುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಆದರೆ ಯುವಿ ಈ ವೆಬ್ ಸರಣಿಯಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ.

ಇತ್ತೀಚೆಗೆ ಭಾರತದ ಕ್ರಿಕೆಟ್ ತಂಡದ ಆಟಗಾರರು ಹೆಚ್ಚು ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ತಮಿಳಿನಲ್ಲಿ ಫ್ರೆಂಡ್ ಶಿಪ್ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಸ್ವತಃ ಅವರೇ ಟ್ವೀಟ್ ಮಾಡಿ ತಿಳಿಸಿದ್ದರು. ಇದಾದ ನಂತರ ಮಾಜಿ ವೇಗಿ ಇರ್ಫಾನ್ ಪಠಾಣ್ ಕೂಡ ಮೊದಲ ಬಾರಿಗೆ ಇದೇ ವರ್ಷ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಪಠಾಣ್ ಅವರು ವಿಕ್ರಮ್ ನಟನೆಯ ವಿಕ್ರಮ್ 58 ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಸ್ವತಃ ಸಿನಿಮಾದ ನಿರ್ದೇಶಕ ಅಜಯ್ ಜ್ಞಾನಮುತ್ತು ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದರು.

ಭಾರತ ತಂಡದ ಪರ 17 ವರ್ಷ ಅಮೋಘವಾಗಿ ಆಟವಾಡಿದ್ದ ಯುವರಾಜ್ ಸಿಂಗ್, ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. 2011 ರ ವಿಶ್ವಕಪ್‍ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಯುವಿ, ಇಂಡಿಯಾಗೆ ಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಯಾವುದೇ ವಿದಾಯ ಪಂದ್ಯಗಳನ್ನು ಆಡದೇ ನಿವೃತ್ತಿ ಘೋಷಿಸಿದ್ದು, ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು.

Comments are closed.