ಕ್ರೀಡೆ

ಸಚಿನ್ ಅವರ ಭದ್ರತೆ ತಗ್ಗಿಸಿ, ಆದಿತ್ಯ ಠಾಕ್ರೆಗೆ ಹೆಚ್ಚಿಸಿದ ಮಹಾ ಸರ್ಕಾರ

Pinterest LinkedIn Tumblr


ಮುಂಬೈ: ಕ್ರಿಕೆಟ್​ ಲೋಕದ ದೇವರು ಎಂದೇ ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ತಗ್ಗಿಸಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮಗ, ಶಾಸಕ ಆದಿತ್ಯ ಠಾಕ್ರೆ ಅವರ ಭದ್ರೆತೆಯನ್ನು ಝಡ್ ಹಂತಕ್ಕೆ ವಿಸ್ತರಿಸಲಾಗಿದೆ.

ಮಹಾರಾಷ್ಟ್ರ ಬೆದರಿಕೆ ಗ್ರಹಿಕೆ ಸಮಿತಿಯ ಅನ್ವಯ ಈ ಬದಲಾವಣೆಗಳನ್ನು ಮಾಡಲಾಗಿದೆ. ನಲವತ್ತಕ್ಕೂ ಹೆಚ್ಚು ಮಂದಿ ವಿಐಪಿಗಳಿಗೆ ಭದ್ರತೆ ಹಿಂಪಡೆಯಲಾಗಿದ್ದು, ಕೆಲವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇನ್ನು ಕೆಲಸವರಿಗೆ ಹೊಸದಾಗಿ ಭದ್ರತೆ ಕಲ್ಪಿಸಲಾಗಿದೆ.

ಸಚಿನ್ ತೆಂಡೂಲ್ಕರ್ ಅವರಿಗೆ ಎಕ್ಸ್​ ಭದ್ರತೆ ಒದಗಿಸಲಾಗಿತ್ತು. ಇದರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಕಾವಲಿಗೆ ನೀಡಲಾಗಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ. ಆದರೆ, ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಮುಂದುವರೆಸಲಾಗಿದೆ. ಶಾಸಕ ಆದಿತ್ಯ ಠಾಕ್ರೆಗೆ ಈವರೆಗೂ ವೈ + ಭದ್ರತೆ ನೀಡಲಾಗಿತ್ತು. ಈಗ ಅದನ್ನು ಝಡ್ ಭದ್ರತೆಗೆ ವಿಸ್ತರಿಸಲಾಗಿದೆ.

ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರಾಮನಾಯಕ್ ಅವರಿಗೆ ನೀಡಲಾಗಿದ್ದ ಝಡ್ ಪ್ಲಸ್ ಭದ್ರತೆ ಹಿಂಪಡೆದು ಎಕ್ಸ್ ಹಂತದ ಭದ್ರತೆ ನೀಡಲಾಗಿದೆ. ಉಗ್ರ ಅಜ್ಮಲ್ ಕಸಬ್ ವಿರುದ್ಧ ವಾದ ಮಂಡಿಸಿದ್ದ ಹಿರಿಯ ವಕೀಲ ಉಜ್ವಲ್ ನಿಕ್ಕೀ ಅವರಿಗೆ ನೀಡಲಾಗಿದ್ದ ಝಡ್ + ದರ್ಜೆಯ ಭದ್ರತೆ ಕಡಿತಗೊಳಿಸಿ ವೈ ದರ್ಜೆಯ ಭದ್ರತೆ ನೀಡಲಾಗಿದೆ.

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ವೈ + ದರ್ಜೆಯ ಭದ್ರತೆಯಿಂದ ಝಡ್ ದರ್ಜೆಗೆ ಏರಿಸಲಾಗಿದೆ. ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಝಡ್ + ಭದ್ರತೆ ಮುಂದುವರೆಸಲಾಗಿದೆ ಇವರ ಸೋದರ ಸಂಬಂಧಿ ಅಜಿತ್ ಅವರಿಗಿರುವ ನೀಡಲಾಗಿರುವ ಝಡ್ ಭದ್ರತೆಯೂ ಮುಂದುವರೆಯಲಿದೆ.

ಗುಪ್ತಚರ ಇಲಾಖೆ, ಪೊಲೀಸ್ ಮತ್ತು ಇತರ ಇಲಾಖೆಗಳ ಮಾಹಿತಿ ಆಧರಿಸಿ ಸೂಕ್ಷ್ಮ ವರದಿ ತಯಾರಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.