ಕ್ರೀಡೆ

ನನಗನಿಸಿದ್ದನ್ನು ಹೇಳಲು ಯಾರ ಅನುಮತಿ ಪಡೆಯಬೇಕಿಲ್ಲ: ಕ್ರಿಕೆಟಿಗ ಇರ್ಫಾನ್​ ಪಠಾಣ್

Pinterest LinkedIn Tumblr


ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿಚಾರವಾಗಿ ಜಾಮಿಯಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ದೇಶಾದ್ಯಂತ ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಅನೇಕ ಗಣ್ಯರು ಸಾಥ್​ ನೀಡಿದ್ದಾರೆ. ಹೀಗೆ ವಿದ್ಯಾರ್ಥಿಗಳ ಪರ ಟ್ವೀಟ್​ ಮೂಲಕ ಧ್ವನಿಯೇರಿಸಿ ಕೆಲವರಿಂದ ಟೀಕೆಗೆ ಗುರಿಯಾಗಿದ್ದ ಕ್ರಿಕೆಟಿಗ ಇರ್ಫಾನ್​ ಪಠಾಣ್ ಮಾತಿನ ಮೂಲಕವೇ ತಿರುಗೇಟು ನೀಡಿದ್ದಾರೆ.

ಜಾಮಿಯಾ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಹಿಂಸಾಚಾರ ನಡೆದ ಬೆನ್ನಲ್ಲೇ ಟ್ವೀಟ್​ ಮಾಡಿದ್ದ ಇರ್ಫಾನ್​, ರಾಜಕೀಯದಲ್ಲಿ ಆರೋಪ ಮತ್ತು ಪ್ರತ್ಯಾರೋಪ ಎಂದಿಗೂ ನಡೆಯುತ್ತಲೇ ಇರುತ್ತದೆ. ಆದರೆ, ನಾನು ಮತ್ತು ನನ್ನ ದೇಶ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದಿದ್ದರು. ಟ್ವೀಟ್​ಗೆ ಭಾರಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಪಠಾಣ್​ ಸ್ಪಷ್ಟನೆ ನೀಡಿದ್ದಾರೆ.

ನನಗನಿಸಿದ್ದನ್ನು ಹೇಳಲು ನನ್ನ ರಾಷ್ಟ್ರದಲ್ಲಿ ನನಗೆ ಯಾರೊಬ್ಬರ ಅನುಮತಿಯು ಬೇಕಿಲ್ಲ. ನಾನು ರಾಷ್ಟ್ರದ ಪ್ರತಿನಿಧಿಯಾಗಿದ್ದೇನೆ. ಇದನ್ನು ಕೆಲ ಜನರು ಅರ್ಥ ಮಾಡಿಕೊಳ್ಳಬೇಕು. ಕ್ರೀಡಾಂಗಣದಲ್ಲಿ ಬೌಲಿಂಗ್​ ಮಾಡುವಾಗ ನಾನೊಬ್ಬ ಭಾರತೀಯ ಅಂದುಕೊಂಡಿದ್ದೆ ಹೊರತು ಮುಸ್ಲಿಂ ಎಂದು ಭಾವಿಸಿರಲಿಲ್ಲ. ಮೊದಲು ನಾನೊಬ್ಬ ಭಾರತೀಯ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

Comments are closed.