ಕ್ರೀಡೆ

ಟೀಮ್‌ ಇಂಡಿಯಾದ ಕುರಿತ ಚರ್ಚೆಗೆ ದ್ರಾವಿಡ್‌ ಭೇಟಿಯಾಗಲಿರುವ ಗಂಗೂಲಿ!

Pinterest LinkedIn Tumblr


ಹೊಸದಿಲ್ಲಿ: ಟೀಮ್‌ ಇಂಡಿಯಾದ ಭವಿಷ್ಯದ ಹಾದಿಯನ್ನು ರೂಪಿಸುವ ನಿಟ್ಟಿನಲ್ಲಿ ಬಿಸಿಸಿಐನ ನೂತನ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಅವರನ್ನು ಬುಧವಾರ ಭೇಟಿಯಾಗಲಿದ್ದಾರೆ.

ಕಳೆದ ಜುಲೈನಲ್ಲಿ ಎನ್‌ಸಿಎ ಮುಖ್ಯಸ್ಥರಾಗಿ ರಾಹುಲ್‌ ದ್ರಾವಿಡ್‌ ಅಧಿಕಾರ ಸ್ವೀಕರಿಸಿದ್ದರು. ದ್ರಾವಿಡ್‌ ಈಗಾಗಲೇ ಭಾರತೀಯ ಕ್ರಿಕೆಟ್‌ ಮುನ್ನಡೆಯಬೇಕಿರುವ ಹಾದಿ ಕಡೆಗೆ ಯೋಜನೆ ರೂಪಿಸಿದ್ದು, ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಗಂಗೂಲಿ ಹಂಚಿಕೊಳ್ಳಲಿದ್ದಾರೆ. “ಎನ್‌ಸಿಎಗೆ ಹೊಸ ರೂಪ ನೀಡುವ ಯೋಜನೆ ನನ್ನಲ್ಲಿದೆ. ಅಕ್ಟೋಬರ್‌ 30ರಂದು ಬೆಂಗಳೂರಿಗೆ ತೆರಳಲಿದ್ದೇನೆ,” ಎಂದು ಸೌರವ್‌ ಗಂಗೂಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಕ್ಟೋಬರ್‌ 23ರಂದು ಬಿಸಿಸಿಐನ ವಿವಿಧ ಹುದ್ದಗಳನ್ನು ಅಲಂಕರಿಸಿರುವ ಪದಾಧಿಕಾರಿಗಳೆಲ್ಲರೂ ಅಕ್ಟೋಬರ್‌ 30ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎನ್‌ಸಿಎ ಸಿಇಒ ತುಫಾನ್‌ ಘೋಷ್ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಟೀಮ್‌ ಇಂಡಿಯಾಗೆ ಭವಿಷ್ಯದ ಆಟಗಾರರನ್ನು ರೂಪಿಸಿಕೊಡುವ ಉದ್ದೇಶದಿಂದ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಆರಂಭಿಸಲಾಗಿತ್ತು. ಆದರೆ, ಹಲವು ವರ್ಷಗಳಿಂದ ಗಾಯಗೊಂಡ ಆಟಗಾರರ ಪುನರ್‌ ವಸತಿ ಕೇಂದ್ರವಾಗಿಬಿಟ್ಟಿದೆ. ಗಂಗೂಳಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಎನ್‌ಸಿಎಯಲ್ಲಿ ಹೊಸ ಯೋಜನೆಗಳನ್ನು ತರುವುದರ ಕಡೆಗೆ ಗಂಗೂಲಿ ಮುಂದಾಗಿದ್ದಾರೆ.

“ಎನ್‌ಸಿಎ ಮುಂದಿನ ಹಾದಿಯನ್ನು ಚರ್ಚಿಸಲು ಸೌರವ್‌ ಗಂಗೂಲಿ ಮತ್ತು ರಾಹುಲ್‌ ದ್ರಾವಿಡ್‌ ಸಭೆ ಸೇರಲಿದ್ದಾರೆ. ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ,” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಡೋಪಿಂಗ್‌ ನಿಷೇಧದಿಂದ ಹೊರಬಂದು ಸ್ಟ್ರೆಂತ್‌ ಅಂಡ್‌ ಕಂಡೀಷನಿಂಗ್‌ ಯೋಜನೆಗೆ ಒಳಪಟ್ಟಿರುವ ಪೃಥ್ವಿ ಶಾ, ಮತ್ತು ಬೆನ್ನು ನೋವಿನಿಂದ ಚೇತರಿಸುತ್ತಿರುವ ಜಸ್‌ಪ್ರೀತ್‌ ಬುಮ್ರಾ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಪುನರ್‌ ವಸತಿ ಯೋಜನೆ ಕುರಿತಾಗಿ ಗಂಗೂಲಿ ಚರ್ಚಿಸಲಿದ್ದಾರೆ.

ವಿವಿಎಸ್‌ ಲಕ್ಷ್ಮಣ್‌ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಮತ್ತು ಟೀಮ್‌ ಇಂಡಿಯಾ ಕೋಚ್‌ ರವಿ ಶಾಸ್ತ್ರಿ ಸೌರವ್‌ ಗಂಗೂಲಿ ಭಾರತೀಯ ಕ್ರಿಕೆಟ್‌ ತಂಡದ ಬೆಂಚ್‌ ಸ್ಟ್ರೆಂತ್‌ ಬಲ ಪಡಿಸುವ ಕಡೆಗೆ ಮಹತ್ವದ ಕೊಡುಗೆ ಸಲ್ಲಿಸಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತ ಪಡಿಸಿದ್ದಾರೆ.

Comments are closed.