ಕ್ರೀಡೆ

ಇಂಡಿಯಾದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಪಾಕ್ ಮಗುವಿಗೆ ವೀಸಾ ಕೊಡಿಸಿದ ಕ್ರಿಕೆಟಿಗ ಗೌತಮ್ ಗಂಭೀರ್

Pinterest LinkedIn Tumblr


ನವದೆಹಲಿ: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಭಾರತದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಲು ಪಾಕಿಸ್ತಾನ ಮಗುವಿಗೆ ವೀಸಾ ಕೊಡಿಸಿದ್ದಾರೆ.

ಪಾಕಿಸ್ತಾನದ ಒಮೈಮಾ ಅಲಿ ಎಂಬ ಪುಟ್ಟ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು, ಪಾಕ್‍ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗದ ಕಾರಣ ಅವರು ಭಾರತಕ್ಕೆ ಬರಬೇಕಿತ್ತು. ಆದರೆ ಈಗ ನಡೆಯುತ್ತಿರುವ ಕೆಲ ವಿದ್ಯಮಾನಗಳಿಂದ ಭಾರತ ಸರ್ಕಾರ ಮಗು ಮತ್ತು ಆಕೆ ಪೋಷಕರಿಗೆ ವೀಸಾ ನೀಡಿರಲಿಲ್ಲ.

ಈ ವಿಚಾರ ಗಂಭೀರ್ ಅವರಿಗೆ ಗೊತ್ತಾಗಿದೆ. ಅದ್ದರಿಂದ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ಮಗು ಒಮೈಮಾ ಅಲಿ ಮತ್ತು ಅವರ ಪೋಷಕರಿಗೆ ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಸಚಿವ ಜೈಶಂಕರ್ ಅವರು ಮಗು ಮತ್ತು ಪೋಷಕರು ಬರಲು ವೀಸಾ ನೀಡುವಂತೆ ಭಾರತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ವಿಚಾರವಾಗಿ ಜೈಶಂಕರ್ ಅವರು ಭಾರತಕ್ಕೆ ಪ್ರಯಾಣಿಸಲು ಬಾಲಕಿ ಮತ್ತು ಆಕೆಯ ಪೋಷಕರಿಗೆ ವೀಸಾ ನೀಡುವಂತೆ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈಕಮಿಷನ್‍ಗೆ ಸೂಚಿಸಿದ್ದು, ಅವರಿಗೆ ಇಸ್ಲಾಮಾಬಾದ್‍ನಲ್ಲಿ ವೀಸಾ ನೀಡಲಾಗಿದೆ ಎಂದು ಜೈಶಂಕರ್ ಗಂಭೀರ್‍ಗೆ ಬರೆದಿರುವ ಪತ್ರವನ್ನು ಗಂಭೀರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ಈ ಪತ್ರದ ಜೊತೆ ‘ಸೌಮ್ಯ ಹೃದಯವು ಇನ್ನೊಂದು ಕಡೆಯಿಂದ ನಮ್ಮನ್ನು ಸಂಪರ್ಕಿಸಿದಾಗ, ನಮ್ಮ ಹೃದಯವು ಎಲ್ಲಾ ಅಡೆತಡೆಗಳನ್ನು ಮತ್ತು ಗಡಿಗಳನ್ನು ಬದಿಗಿರಿಸುತ್ತದೆ. ಅವಳ ಸಣ್ಣ ಪಾದಗಳಿಂದ, ಅವಳು ನಮಗಾಗಿ ಸಿಹಿ ಗಾಳಿಯನ್ನು ಸಹ ತರುತ್ತಾಳೆ. ನನ್ನ ಮಗಳು ನನ್ನ ಮನೆಗೆ ಭೇಟಿ ನೀಡುತ್ತಿರುವಂತೆ ಅನಿಸುತ್ತಿದೆ’ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧಗಳು ಬಿಗಡಾಯಿಸಿದರೂ, ಭಾರತದಲ್ಲಿ ಪಾಕಿಸ್ತಾನದ ಜನರಿಗೆ ಮಾನವೀಯ ನೆಲೆಯಲ್ಲಿ ವೀಸಾ ನೀಡಲಾಗುತ್ತಿದೆ. ಭಾರತದಲ್ಲಿ ನಿರ್ಣಾಯಕ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಈ ಹಿಂದೆಯಿಂದಲೂ ಭಾರತ ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನೀಡುತ್ತಾ ಬಂದಿದೆ.

Comments are closed.