
ಮುಂಬಯಿ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗಾಗಿನ ಟೀಮ್ ಇಂಡಿಯಾ ಆಯ್ಕೆಗೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಪರಿಗಣಿಸಿರಲಿಲ್ಲ.
ಇದು ಅಭಿಮಾನಿಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಆಟಗಾರನಿಗೆ ಅವಕಾಶ ಏಕೆ ನೀಡಲಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ವಿವರಣೆಯನ್ನು ನೀಡಿದ್ದಾರೆ.
ಎಂಎಸ್ ಧೋನಿ ಆಯ್ಕೆಗೆ ಲಭ್ಯವಿರವಿಲ್ಲ ಎಂದಷ್ಟೇ ಎಂಎಸ್‌ಕೆ ಪ್ರಸಾದ್ ಉತ್ತರಿಸಿದ್ದಾರೆ. ಇದರಿಂದ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಕಳೆದ ಏಕದಿನ ವಿಶ್ವಕಪ್ ಬಳಿಕ ಧೋನಿ ಎರಡು ತಿಂಗಳುಗಳ ಬಿಡುವು ಪಡೆದುಕೊಂಡು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.
ಮಗದೊಂದು ಬಿಸಿಸಿಐ ಮೂಲದ ಪ್ರಕಾರ, ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗಾಗಿ ಆಯ್ಕೆ ಸಮಿತಿಯು ಸ್ಪಷ್ಟ ಮಾರ್ಗ ಸೂಚಿಯನ್ನು ತಯಾರಿಸಿದ್ದು, ಯುವ ಆಟಗಾರರಿಗೆ ಹೆಚ್ಚಿನ ಅವಕಾಶವನ್ನು ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಎಲ್ಲ ಪ್ರಕಾರದಲ್ಲೂ ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಬ್ ಪಂತ್ ಮೊದಲ ಆಯ್ಕೆಯಾಗಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿವೃತ್ತಿ ಸಂಬಂಧ ಧೋನಿ ಮೇಲೆ ಯಾವುದೇ ಒತ್ತಡವನ್ನು ಹೇರಲು ಸಾಧ್ಯವಿಲ್ಲ. ಇದನ್ನು ಸ್ವತ: ಧೋನಿ ಅವರೇ ನಿರ್ಧರಿಸಲಿದ್ದಾರೆ. ಹಾಗಾಗಿ ಧೋನಿ ಮುಂದಿನ ನಡೆ ಏನಾಗಲಿದೆ ಎಂಬುದು ಕುತೂಹಲಕ್ಕೀಡು ಮಾಡಿದೆ.
Comments are closed.