ಕ್ರೀಡೆ

ಆಟಕ್ಕಿಂತ ಬೇಕರಿ ಕೆಲಸ ಉತ್ತಮ: ನ್ಯೂಜಿಲೆಂಡ್ ಆಟಗಾರನ ಹತಾಶೆಯ ನುಡಿ

Pinterest LinkedIn Tumblr


ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಫೈನಲ್ ವಿರೋಚಿತ ಸೋಲಿನ ಬಳಿಕ ನ್ಯೂಜಿಲೆಂಡ್ ಆಲ್​ರೌಂಡರ್ ಜಿಮ್ಮಿ ನೀಶಮ್ ತಮ್ಮ ನೋವನ್ನು ಹೊರ ಹಾಕಿದ್ದಾರೆ. ಮಕ್ಕಳೇ ಯಾರು ಕೂಡ ಕ್ರೀಡೆಯನ್ನು ಆಯ್ದುಕೊಳ್ಳಬೇಡಿ. ಅದಕ್ಕಿಂತ ಬೇಕರಿ ಕೆಲಸ ಅಥವಾ ಇನ್ಯಾವುದಾದರೂ ಉತ್ತಮ ಎಂದು ಟ್ವೀಟ್ ಮಾಡಿ ನೋವು ತೋಡಿಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್​ನಲ್ಲಿ ಉಭಯ ತಂಡಗಳು 241 ರನ್​ಗಳಿಸಿದ್ದರಿಂದ ಅಂತಿಮ ಹಣಾಹಣಿಯು ರೋಚಕ ಟೈನಲ್ಲಿ ಅಂತ್ಯಗೊಂಡಿತು. ಈ ಹಿನ್ನೆಲೆಯಲ್ಲಿ ಸೂಪರ್ ಓವರ್​ ಅವಕಾಶ ನೀಡಲಾಯಿತು. ಇಂಗ್ಲೆಂಡ್ ನೀಡಿದ 15 ರನ್​ಗಳನ್ನು ಭರ್ಜರಿಯಾಗಿಯೇ ನೀಶಮ್ ಬೆನ್ನತ್ತಿದ್ದರು. ಆದರೆ ಕೊನೆಯಲ್ಲಿ ಗಪ್ಟಿಲ್ ರನೌಟ್​ ಆಗುವ ಮೂಲಕ ಸೂಪರ್ ಓವರ್ ಪಂದ್ಯ ಕೂಡ ಟೈ ಆಗಿತ್ತು.

ಈ ಹಂತದಲ್ಲಿ ಇನಿಂಗ್ಸ್​ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿ ತಂಡವನ್ನು ವಿಶ್ವ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಅದರಂತೆ ಇಂಗ್ಲೆಂಡ್ ತಂಡವು ವಿಶ್ವ ಕ್ರಿಕೆಟ್​ನ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿತು. ಆದರೆ ಅತ್ತ ಸೋಲದೇ ಹಾಗೂ ಇತ್ತ ಗೆಲ್ಲದೇ ಇದ್ದ ನ್ಯೂಜಿಲೆಂಡ್ ಪಾಲಿಗೆ ಐಸಿಸಿ ನಿಯಮವೇ ಕಂಟಕವಾಯಿತು ಎನ್ನಲಾಗುತ್ತಿದೆ.

ಈ ಸೋಲಿನ ಆಘಾತದಲ್ಲಿ ನೀಶಮ್ ಯಾರೂ ಕೂಡ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸದೇ, ಇತರೆ ಉದ್ಯೋಗದತ್ತ ಮುಖ ಮಾಡಿ ಎಂದು ಯುವ ತಲೆಮಾರಿಗೆ ಸೂಚಿಸಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ‘ಮಕ್ಕಳೇ, ಕ್ರೀಡೆಯನ್ನು ನಿಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳದಿರಿ. ಬದಲಿಗೆ ಬೇಕರಿ ಕೆಲಸ ಮಾಡಿ ಅಥವಾ ಇನ್ಯಾವುದಾದರೂ ಕೆಲಸ ಮಾಡಿ. ಬೊಜ್ಜು ತುಂಬಿಸಿಕೊಂಡು 60 ವರ್ಷಕ್ಕೆ ಕೊನೆ ಉಸಿರೆಳೆದರಷ್ಟೇ ಸಾಕು’ ಎಂದು ತಮ್ಮೊಳಗಿನ ಹತಾಶೆಯನ್ನು ಬಿಚ್ಚಿಟ್ಟಿದ್ದಾರೆ. ಈ ಟ್ವೀಟ್ ಈಗ ವೈರಲ್ ಆಗಿದ್ದು ಹಲವರು ನ್ಯೂಜಿಲೆಂಡ್ ಆಲ್​ರೌಂಡರ್​ರನ್ನು ಸಮಾಧಾನ ಪಡಿಸಿದ್ದಾರೆ.

ಇನ್ನು ಮತ್ತೊಂದು ಟ್ವೀಟ್​ ಮೂಲಕ ಇಂಗ್ಲೆಂಡ್ ತಂಡಕ್ಕೆ ಶುಭ ಕೋರಿದ ನೀಶಮ್, ‘ಇದು ನಿಜಕ್ಕೂ ನೋವುಂಟಾಗಿದೆ. ಮುಂದಿನ ಒಂದು ದಶಕದವರೆಗೆ ಈ ದಿನ ಅಥವಾ ಕೊನೆಯ ಅರ್ಧ ಗಂಟೆಯ ಆಟವನ್ನು ನಾನು ನೆನಪಿಸಿಕೊಳ್ಳಲು ಬಯಸುವುದಿಲ್ಲ. ಇಂಗ್ಲೆಂಡ್‌ಗೆ ಶುಭಾಶಯಗಳು. ಈ ಗೆಲುವಿಗೆ ನೀವು ಅರ್ಹರು’ ಎಂದು ಟ್ವೀಟಿಸಿದ್ದರು.

‘ನಮ್ಮ ತಂಡಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಧ್ವನಿ ದಿನಪೂರ್ತಿ ನಮ್ಮ ಕಿವಿಗೆ ಮುಟ್ಟುತ್ತಿತ್ತು. ಗೆಲ್ಲುವ ಹಂಬಲ ನಮ್ಮದಾಗಿತ್ತು. ಆದರೆ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿ ಕೂಡ ನೀಶಮ್ ಟ್ವೀಟ್ ಹಾಕಿದ್ದರು.

Comments are closed.