
ಬೆಂಗಳೂರು (ಜೂ. 25): ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ನಲ್ಲಿ ಫಿಂಚ್ ಮಿಂಚಿದರೆ, ಬೆಹ್ರೆಂಡಾರ್ಫ್ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು ಮೂರನೇ ಸೋಲು ಅನುಭವಿಸಿದೆ. ಫಿಂಚ್ ಪಡೆ 64 ರನ್ಗಳ ಜಯದೊಂದಿಗೆ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಆಸ್ಟ್ರೇಲಿಯಾ ನೀಡಿದ್ದ 286 ರನ್ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ಪ್ರಮುಖ ವಿಕೆಟ್ ಕೈ ಚೆಲ್ಲಿತು. 50 ರನ್ ಆಗುವ ಹೊತ್ತಿಗೆನೆ 4 ವಿಕೆಟ್ ಕಳೆದುಕೊಂಡಿತು.
ಇಂಗ್ಲೆಂಡ್ನ ಓಪನರ್ ಜೇಮ್ಸ್ ವಿನ್ಸ್ ಮತ್ತೊಮ್ಮ ವಿಫಲವಾಗಿ ಮೊದಲ ಓವರ್ನ 2ನೇ ಎಸೆತದಲ್ಲೇ ಬೆಹ್ರೆಂಡಾರ್ಫರ್ ಬೌಲಿಂಗ್ನಲ್ಲಿ ಬೌಲ್ಡ್ ಆದರೆ, ಕಳೆದ ಪಂದ್ಯದಲ್ಲಿ ಮಿಂಚಿದ್ದ ಜೋ ರೂಟ್ ಕೇವಲ 8 ರನ್ಗೆ ನಿರ್ಗಮಿಸಿದರು. ನಾಯಕ ಇಯಾನ್ ಮಾರ್ಗನ್ ಆಟ 4 ರನ್ಗೆ ಅಂತ್ಯವಾಯಿತು. ಜಾನಿ ಬೈರ್ಸ್ಟೋ ಕೊಂಚಹೊತ್ತು ಕ್ರೀಸ್ನಲ್ಲಿದ್ದರಾದರು 27 ರನ್ಗೆ ಬ್ಯಾಟ್ ಕೆಳಗಿಟ್ಟರು.
4 ವಿಕೆಟ್ ಕಳೆದುಕೊಂಡಿರುವಾಗ ಜಾಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿ 71 ರನ್ಗಳ ಜೊತೆಯಾಟ ಆಡಿದರು. ಚೆನ್ನಾಗಿಯೆ ಆಡುತ್ತಿದ್ದ ಬಟ್ಲರ್ 25 ರನ್ ಬಾರಿಸಿ ಸ್ಟಾಯಿನಿಸ್ ಬೌಲಿಂಗ್ನಲ್ಲಿ ಔಟ್ ಆಗುವ ಮೂಲಕ ಮತ್ತೊಂದು ಆಘಾತ ನೀಡಿದರು. ಕ್ರಿಸ್ ವೋಕ್ಸ್ ಆಟ 26ಕ್ಕೆ ನಿಂತಿತು. ಹೀಗೆ ಒಂದುಕಡೆ ವಿಕೆಟ್ ಉರುಳುತ್ತಿದ್ದರೆ, ಇತ್ತ ಬೆನ್ ಸ್ಟೋಕ್ಸ್ ಗೆಲುವಿಗಾಗಿ ಎಲ್ಲಿಲ್ಲದ ಹೋರಾಟ ನಡೆಸಿದರು.
ಆದರೆ, ಅರ್ಧಶತಕ ಸಿಡಿಸಿ ಬಿರುಸಿನ ಆಟ ಪ್ರದರ್ಶಿಸಿದ ಸ್ಟೋಕ್ಸ್ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. 115 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಬಾರಿಸಿ 89 ರನ್ಗೆ ಸ್ಟಾರ್ಕ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಬಳಿಕ ಬಂದ ಬ್ಯಾಟ್ಸ್ಮನ್ಗಳು ಯಾರು ಕ್ರೀಸ್ ಕಚ್ಚಿ ಆಡಲಿಲ್ಲ. ಪರಿಣಾಮ ಇಂಗ್ಲೆಂಡ್ 44.4 ಓವರ್ನಲ್ಲಿ 221 ರನ್ಗೆ ಆಲೌಟ್ ಆಯಿತು. ಆಸೀಸ್ ಪರ ಬೆಹ್ರೆಂಡಾರ್ಫ್ 5 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 4 ಹಾಗೂ ಸ್ಟಾಯಿನಿಸ್ 1 ವಿಕೆಟ್ ಪಡೆದರು.
64 ರನ್ಗಳ ಭರ್ಜರಿ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೆ 2019ರ ಏಕದಿನ ವಿಶ್ವಕಪ್‌ನಲ್ಲಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿ ಸೆಮಿ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇತ್ತ ಇಂಗ್ಲೆಂಡ್ 3ನೇ ಸೋಲಿನೊಂದಿಗೆ ಕುಸಿದಿದ್ದು, 4ನೇ ಸ್ಥಾನದಲ್ಲಿದೆ. ಶತಕ ಸಿಡಿಸಿದ ಆ್ಯರೋನ್ ಫಿಂಚ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
ಇದಕ್ಕೂ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಅದರಂತೆ ಬ್ಯಾಟಿಂಗ್ಗೆ ಇಳಿದಿರುವ ಆಸ್ಟ್ರೇಲಿಯಾಕ್ಕೆ ಓಪನರ್ಗಳಾದ ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಅರ್ಧಶತಕ ಸಿಡಿಸಿ ಶತಕದ ಜೊತೆಯಾಟ ಆಡಿದರು. ಆಂಗ್ಲ ಬೌಲರ್ಗಳ ಬೆವರಿಳಿಸಿದ ಈ ಜೋಡಿ ಅತ್ಯುತ್ತಮ ಆಟ ಪ್ರದರ್ಶಿಸಿದರು. 123 ರನ್ಗಳ ಅಮೋಘ ಜೊತೆಯಾಟದೊಂದಿಗೆ ವಾರ್ನರ್ 53 ರನ್ ಬಾರಿಸಿ ಮೊಯೀನ್ ಅಲಿ ಬೌಲಿಂಗ್ನಲ್ಲಿ ಔಟ್ ಆದರು.
ಈ ಮೂಲಕ ವಾರ್ನರ್-ಫಿಂಚ್ ಜೋಡಿ ದಾಖಲೆ ಬರೆದಿದೆ. ಏಕದಿನ ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ಗೆ ಸತತ ಐದು ಬಾರಿ 50ಕ್ಕೂ ಹೆಚ್ಚು ಜೊತೆಯಾಟ ನೀಡಿದ ದಾಖಲೆಗೆ ಇವರಿಬ್ಬರು ಪಾತ್ರವಾಗಿದ್ದಾರೆ. ಅಲ್ಲದೆ ಈ ದಾಖಲೆ ಬರೆದ ಮೊತ್ತ ಮೊದಲ ಆರಂಭಿಕ ಜೋಡಿ ಫಿಂಚ್-ವಾರ್ನರ್ ಆಗಿದ್ದಾರೆ.
ವಾರ್ನರ್ ಔಟ್ ಆದ ಬೆನಲ್ಲೆ ಕ್ರೀಸ್ಗೆ ಬಂದ ಉಸ್ಮಾನ್ ಖ್ವಾಜಾ ಕೊಂಚಹೊತ್ತು ಬ್ಯಾಟ್ ಬೀಸಿ 23 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ಮಧ್ಯೆ ಫಿಂಚ್ ಏಕದಿನ ಕ್ರಿಕೆಟ್ನಲ್ಲಿ 15ನೇ ಶತಕ ಪೂರೈಸಿದರು. ಆದರೆ, ಶತಕ ಬಾರಿಸಿದ ಮುಂದಿನ ಎಸೆತದಲ್ಲೇ ಫಿಂಚ್ ನಿರ್ಗಮಿಸಿದರು. 116 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ನೊಂದಿಗೆ ಫಿಂಚ್ 100 ರನ್ ಗಳಿಸಿ ಔಟ್ ಆದರು.
ಬಳಿಕ ಸ್ಟೀವ್ ಸ್ಮಿತ್ ಜೊತೆಯಾದ ಗ್ಲೇನ್ ಮ್ಯಾಕ್ಸ್ವೆಲ್ ರನ್ ಕಲೆಹಾಕಲು ಹೊರಟರಾದರು, ಮ್ಯಾಕ್ಸ್ವೆಲ್ 12 ರನ್ಗೆ ಔಟ್ ಆದರೆ, ಸ್ಟಾಯಿನಿಸ್ 8 ರನ್ ಗಳಿಸಿರುವಾಗ ರನೌಟ್ ಬಲೆಗೆ ಬಿದ್ದರು. ಸ್ಮಿತ್ ಆಟ 38 ರನ್ಗೆ ನಿಂತರು. ನಂತರ ಬಂದ ಬ್ಯಾಟ್ಸ್ಮನ್ಗಳು ಯಾರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.
ಕೊನೆಯಲ್ಲಿ ಅಲೆಕ್ಸ್ ಕ್ಯಾರಿ 27 ಎಸೆತಗಳಲ್ಲಿ 38 ರನ್ ಬಾರಿಸಿದ ಪರಿಣಾಮ ಆಸ್ಟ್ರೇಲಿಯಾ 50 ಓವರ್ಗೆ 7 ವಿಕೆಟ್ ಕಳೆದುಕೊಂಡು 285 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 2 ವಿಕೆಟ್ ಕಿತ್ತರೆ, ಆರ್ಚೆರ್, ಮಾರ್ಕ್ ವುಡ್, ಮೊಯೀನ್ ಅಲಿ ಹಾಗೂ ಬೆನ್ ಸ್ಟೋಕ್ಸ್ ತಲಾ 1 ವಿಕೆಟ್ ಪಡೆದರು.
Comments are closed.