ಕ್ರೀಡೆ

ಟೀಂ ಇಂಡಿಯಾಗೆ ದೊಡ್ಡ ಶಾಕ್; ಗಾಯಕ್ಕೆ ತುತ್ತಾಗಿದ್ದ ವಿಶ್ವಕಪ್ ಟೂರ್ನಿಯಿಂದಲೇ ಆದ ‘ಔಟ್’ ಶಿಖರ್ ಧವನ್

Pinterest LinkedIn Tumblr

ನವದೆಹಲಿ: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ಗಾಯದ ಸಮಸ್ಯೆಗೆ ತುತ್ತಾಗಿರುವ ತಂಡದ ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ಟೂರ್ನಿಯಿಂದ ಹೊರಬಂದಿದ್ದಾರೆ.

ಹೌದು.. ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರ ಎಡಗೈ ಹೆಬ್ಬೆರಳಿನ ಮೂಳೆ ಮುರಿದಿದ್ದು, ವೈದ್ಯರು ಧವನ್ ಗೆ ಮೂರು ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ಧವನ್ ವಿಶ್ವಕಪ್ ಟೂರ್ನಿಯಿಂದ ಹೊರ ಬರಲೇ ಬೇಕಿದೆ.

ಇನ್ನು ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಶಿಖರ್ ಧವನ್ ಗಾಯಗೊಂಡಿದ್ದರು. ತಂಡದ ಬ್ಯಾಟಿಂಗ್ ವೇಳೆ ಆಸಿಸ್ ವೇಗಿ ನಾಥನ್ ಕಾಲ್ಟರ್ ನೈಲ್ ಎಸೆದ ಚೆಂಡು ಧವನ್ ಎಡಗೈ ಹೆಬ್ಬೆರಳಿಗೆ ಬಲವಾಗಿ ಬಡಿದಿತ್ತು. ಬಳಿಕ ಆ ಜಾಗ ಊದಿತ್ತು. ಹೀಗಾಗಿ ಪಂದ್ಯದ ನಡುವೆಯೇ ತಂಡದ ಫಿಸಿಯೋ ಧವನ್ ಕೈಗೆ ಬ್ಯಾಂಡೇಜ್ ಸುತ್ತಿದ್ದರು. ಪಂದ್ಯ ಮುಕ್ತಾಯದ ಬಳಿಕ ಧವನ್ ರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಸ್ಕ್ಯಾನಿಂಗ್ ವರದಿಯಲ್ಲಿ ಅವರ ಎಡಗೈ ಹೆಬ್ಬೆರಳಿನ ಮೂಳೆ ಮುರಿದಿರುವುದು ಖಚಿತವಾಗಿದೆ ಎನ್ನಲಾಗಿದೆ.

ಇದೇ ಕಾರಣಕ್ಕೆ ವೈದ್ಯರು ಧವನ್ ಗೆ ಮೂರು ವಾರಗಳ ವಿಶ್ರಾಂತಿಯ ಸೂಚನೆ ನೀಡಿದ್ದು, ಧವನ್ ಭಾರತ ತಂಡದ ಮುಂದಿನ ಪಂದ್ಯಗಳಿಂದ ವಂಚಿತರಾದಲಿದ್ದಾರೆ. ಭಾರತ ತಂಡ ಇದೇ ಜೂನ್ ತಿಂಗಳಲ್ಲಿನಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಆಫ್ಘಾನಿಸ್ತಾನ ತಂಡದ ವಿರುದ್ಧ ಸೆಣಸಲಿದ್ದು, ಈ ಐದು ಪಂದ್ಯಗಳಿಂದ ಧವನ್ ವಂಚಿತರಾಗಲಿದ್ದಾರೆ.

ಭಾರತ ತಂಡದ ಮಟ್ಟಿಗೆ ಧವನ್ ಪ್ರಮುಖ ಆಟಗಾರರಾಗಿದ್ದು, ವಿಶ್ವಕಪ್ ನಲ್ಲಿ ಆಡಿರುವ 2 ಪಂದ್ಯಗಳಲ್ಲಿ 125 ರನ್ ಗಳಿಸಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾ ವಿರುದ್ಧದ ಶತಕವೂ ಕೂಡ ಸೇರಿದೆ. ಧವನ್ ಶತಕದ ನೆರವಿನಿಂದ ಭಾರತ ತಂಡ ಬೃಹತ್ ರನ್ ಕಲೆಹಾಕಿತ್ತು. ಅಲ್ಲದೆ ಶಿಖರ್ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು. ಇದೀಗ ಧವನ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮುಂದಿನ ಪಂದ್ಯಗಳನ್ನಾಡಬೇಕಿದೆ.

ಧವನ್ ಸ್ಥಾನಕ್ಕೆ ಮೂವರ ಪೈಪೋಟಿ
ಧವನ್ ಗಾಯದ ಸಮಸ್ಯೆಯಿಂದಾಗಿ ತೆರವುಗೊಂಡಿರುವ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮನ್ ಸ್ಥಾನಕ್ಕೆ ಮೂರು ಆಟಗಾರರ ನಡುವೆ ಪೈಪೋಟಿ ಇದ್ದು, ದಿನೇಶ್ ಕಾರ್ತಿಕ್, ಶಂಕರ್ ವಿಜಯ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಇದೆ ಎನ್ನಲಾಗಿದೆ.

Comments are closed.