ಕ್ರೀಡೆ

ಇತಿಹಾಸದಲ್ಲೇ ಮೊದಲ ಟೈ ಪಂದ್ಯ, ಭಾರತ ಸೋತಿದ್ದು ವಿಪರ್ಯಾಸ

Pinterest LinkedIn Tumblr


ಬೆಂಗಳೂರು: ಜನಕರ ನಾಡು 7ನೇ ವಿಶ್ವಕಪ್ ಆತಿಥ್ಯ ವಹಿಸಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್​​, ಭಾರತ ಜೊತೆಗೆ ಪಾಕಿಸ್ತಾನ ತಂಡ ಗೆಲುವಿನ ಫೇವರಿಟ್ ಆಗಿದ್ದವು. ಭಾರತಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ದಕ್ಷಿಣ ಆಫ್ರಿಕಾವಂತೂ ಕ್ರಿಕೆಟ್ ಇತಿಹಾಸದಲ್ಲೇ ಎಂದೂ ಮರೆಯದ ಸೋಲನ್ನ ಕಂಡಿತು. ಹೀಗೆ ಕೆಲವರಿಗೆ ಅದೃಷ್ಟ ಕೈ ಕೊಟ್ಟರೆ, ಮತ್ತೆ ಕೆಲವರು ಕೈಲಿದ್ದ ಗೆಲುವನ್ನ ಕಳೆದುಕೊಂಡರು. ಪರಿಣಾಮ 1999ರ ವಿಶ್ವಕಪ್​​ ಕಾಂಗರೂಗಳ ಪಾಲಾಯಿತು. ಇಲ್ಲಿವೆ 7ನೇ ವಿಶ್ವಕಪ್​​ನ ಕೆಲ ರೋಚಕ ಅಂಶಗಳು.

ಮೊದಲ ಮೂರು ವಿಶ್ವಕಪ್​ಗೆ ಆತಿಥ್ಯ ವಹಿಸಿದ್ದ ಇಂಗ್ಲೆಂಡ್ 7ನೇ ವಿಶ್ವಕಪ್ ಮಹಾಟೂರ್ನಿಗೂ ಆತಿಥ್ಯ ವಹಿಸಿತು. ಇಂಗ್ಲೆಂಡ್ ಜೊತೆಗೆ ಸ್ಕಾಟ್ಲೆಂಡ್​, ಐರ್ಲೆಂಡ್​, ನೆದರ್ಲೆಂಡ್​, ವೇಲ್ಸ್​​ ಕೂಡ ಸಾಥ್ ಕೊಟ್ಟಿದ್ದವು. ಮೊಹಮ್ಮದ್​ ಅಜರುದ್ದೀನ್ ನಾಯಕತ್ವದಲ್ಲಿ ಭಾರತ ಅಖಾಡ ಪ್ರವೇಶಿಸಿತು.

ಮೊದಲ ಪಂದ್ಯದಲ್ಲೇ ಮುಗ್ಗರಿಸಿದ್ದ ಭಾರತ

ಮತ್ತೊಂದು ವಿಶ್ವಕಪ್​ ಗೆಲುವಿನ ವಿಶ್ವಾಸದಲ್ಲಿ ಟೂರ್ನಿ ಆರಂಭಿಸಿದ್ದ ಭಾರತ ತಂಡ ಮೊದಲ ಪಂದ್ಯದಲ್ಲೇ ಸೋಲಿನ ಕಹಿ ಅನುಭವಿಸಿತು. 22 ವರ್ಷಗಳ ಬಳಿಕ ವಿಶ್ವಕಪ್​ ಮರುಪ್ರವೇಶಿಸಿದ ದಕ್ಷಿಣ ಆಫ್ರಿಕಾ ಎದುರು ಸೋತು ಮುಖಭಂಗ ಅನುಭವಿಸಿತು.

ಸೂಪರ್ ಸಿಕ್ಸ್​ ಮಾದರಿಯಲ್ಲಿ ಪರಿಚಯಿಸಲಾಗಿದ್ದ ಟೂರ್ನಮೆಂಟ್​ನಲ್ಲಿ ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಆದರೆ ಮೊದಲ ಪಂದ್ಯದಲ್ಲೇ ಸೋಲು ಕಂಡಿದ್ದರಿಂದ ಶ್ರೀಲಂಕಾ ವಿರುದ್ಧ 2ನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಈ ಪಂದ್ಯದಲ್ಲಿ ಭಾರತ ಮ್ಯಾಜಿಕ್​ ಮಾಡಿಬಿಟ್ಟಿತು. 2ನೇ ವಿಕೆಟ್​​ಗೆ ಜೊತೆಯಾದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್​ ದಾಖಲೆಯ ಜೊತೆಯಾಟವಾಡಿದರು.

318 ರನ್​ಗಳ ದಾಖಲೆಯ ಜೊತೆಯಾಟವಾಡಿದ ಗಂಗೂಲಿ 183 ರನ್​ ಸಿಡಿಸಿದರೆ, ದ್ರಾವಿಡ್​ 145 ರನ್​ ಕಲೆಹಾಕಿದರು. ಈ ದಾಖಲೆಯ ಆಟ ಭಾರತಕ್ಕೆ ಗೆಲುವು ತಂದುಕೊಟ್ಟಿತು. ಇನ್ನು ರನ್​ ರೇಟ್ ಆಧಾರದಲ್ಲಿ ಭಾರತ ಇಂಗ್ಲೆಂಡ್​​, ಕೀನ್ಯಾ ತಂಡವನ್ನ ಹಿಂದಿಕ್ಕಿ ಸೂಪರ್​​ ಸಿಕ್ಸ್​ ಹಂತಕ್ಕೆ ಲಗ್ಗೆಯಿಟ್ಟಿತು.

ಸೂಪರ್​ ಸಿಕ್ಸ್​ನಲ್ಲಿ ಬದ್ಧ ವೈರಿಗಳ ಮುಖಾಮುಖಿ

ಅದು 1999ರ ವಿಶ್ವಕಪ್​ನ ರೋಚಕ ಫೈಟ್​. ಅದು ಕೇವಲ ಪಂದ್ಯಕ್ಕಿಂತ ಹೆಚ್ಚಾಗಿ ಯುದ್ಧದಂತೆ ಬಿಂಬಿತವಾಗಿತ್ತು. ಯಾಕಂದರೆ ಭಾರತ-ಪಾಕಿಸ್ತಾನ ಅಲ್ಲಿಯವರೆಗೆ ಲೀಗ್ ಹಂತದಲ್ಲೇ ಮುಖಾಮುಖಿಯಾಗಿದ್ದವು. ಆದರೆ 7ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಸೂಪರ್ ಸಿಕ್ಸ್​ ಹಂತದಲ್ಲಿ ಸೆಣೆಸಾಡಲು ತುದಿಗಾಲಿನಲ್ಲಿ ನಿಂತಿದ್ದವು. ಭಾರತ-ಪಾಕಿಸ್ತಾನದಲ್ಲಿ ಸಂಭ್ರಮ ಕಳೆಕಟ್ಟಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿತು. ಆ ವೇಳೆ ಗೆಲುವಿಗೆ ಇಷ್ಟು ರನ್​ಗಳು ಸಾಕಾ ಎಂಬ ಪ್ರಶ್ನೆ ಮೂಡಿತ್ತು. ಆದರೆ ನಂತರ ನಡೆದಿದ್ದೇ ಬೇರೆ!

ಭಾರತದ ಬಿಗು ಬೌಲಿಂಗ್ ದಾಳಿಗೆ ಪಾಕಿಸ್ತಾನ ನೆಲಕಚ್ಚಿ ಹೋಯಿತು. ಕನ್ನಡಿಗ ವೆಂಕಟೇಶ್ ಪ್ರಸಾದ್ 5 ವಿಕೆಟ್ ಪಡೆದು ಮಿಂಚಿದರು. ಪಾಕಿಸ್ತಾನ ತಂಡ 180 ರನ್​ಗಳಿಗೆ ಆಲೌಟ್ ಆಯಿತು. 47 ರನ್​ಗಳಿಂದ ಗೆದ್ದು ಬೀಗಿದ ಭಾರತ ಸಂಭ್ರಮದಲ್ಲಿ ತೇಲಿತು. ಆದರೆ ಭಾರತದ ಹೋರಾಟ ಸೂಪರ್​ ಸಿಕ್ಸ್​ ಹಂತದಲ್ಲಿ ಮುಗಿದಿದ್ದು ನಿಜಕ್ಕೂ ವಿಪರ್ಯಾಸ. ರನ್​ ರೇಟ್ ಆಧಾರದಲ್ಲಿ ಪಾಕಿಸ್ತಾನ ಸೆಮಿಫೈನಲ್​ಗೆ ಎಂಟ್ರಿ ನೀಡಿತು.

‘ಟೈ’ ಕಂಡ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಪಂದ್ಯ

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ-ನ್ಯೂಜಿಲೆಂಡ್ ತಂಡಗಳು ಎದುರಾಗಿದ್ದವು. ಈ ಪಂದ್ಯದಲ್ಲಿ ವಾಸಿಂ ಅಕ್ರಂ ಟೀಂ ಎದುರಾಳಿಯನ್ನ 9 ವಿಕೆಟ್​ಗಳಿಂದ ಮಣಿಸಿ 2ನೇ ಬಾರಿಗೆ ಫೈನಲ್ ಪ್ರವೇಶಿಸಿತು.

ಇನ್ನು 2ನೇ ಸೆಮಿಫೈನಲ್​ ಪಂದ್ಯವಂತೂ ರೋಚಕವಾಗಿತ್ತು. ಗೆಲುವಿನ ಹಂತದಲ್ಲಿದ್ದ ದಕ್ಷಿಣ ಆಫ್ರಿಕಾ ಕೊನೆಯಲ್ಲಿ ನಿರಾಸೆ ಅನುಭವಿಸಿತು. ಮೊದಲ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 213 ರನ್ ಕಲೆಹಾಕಿದರೆ, ಇದನ್ನ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ಕೂಡ 213ರನ್ ಕಲೆಹಾಕಿ ಆಲ್​ಔಟ್ ಆಯಿತು. ಇದು ವಿಶ್ವಕಪ್ ಇತಿಹಾಸದಲ್ಲೇ ಟೈ ಆದ ಮೊದಲ ಪಂದ್ಯ.

ಹೀಗೆ ಪಂದ್ಯ ಟೈ ಆಗಿದ್ದರಿಂದ ರನ್​ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾ ಫೈನಲ್​ ಎಂಟ್ರಿ ಪಡೆಯಿತು. ಆದರೆ ಫೈನಲ್​​ನಲ್ಲಿ ಆಸ್ಟ್ರೇಲಿಯಾ ಅತಿ ಸುಲಭ ಗೆಲುವು ಸಾಧಿಸಿತು. ಮೊದಲ ಬ್ಯಾಟಿಂಗ್ ಮಾಡಿದ್ದ ಪಾಕ್​ ಕೇವಲ 132ರನ್​ಗೆ ಆಲೌಟ್​​ ಆಗಿದ್ದರಿಂದ ಸ್ಟ್ರೀವಾ ನಾಯಕತ್ವದ ಆಸೀಸ್​ ಟೀಂ ಸುಲಭವಾಗಿ 8 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿತು. ಅಲ್ಲದೆ 2ನೇ ಬಾರಿಗೆ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು.

Comments are closed.