ಮೊಹಾಲಿ: ಐಪಿಎಲ್ 2019 ಟ್ವಿಂಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 12 ರನ್ ಅಂತರದಿಂದ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಒಟ್ಟು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಮತ್ತೊಂದೆಡೆ ಆರನೇ ಸೋಲಿಗೆ ಗುರಿಯಾಗಿರುವ ರಾಜಸ್ತಾನ್ ನಾಲ್ಕು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಇದರಿಂದಾಗಿ ಪ್ಲೇ – ಆಫ್ ಸಾಧ್ಯತೆ ಮತ್ತಷ್ಟು ಕ್ಷೀಣಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೆಎಲ್ ರಾಹುಲ್ (52) ಹಾಗೂ ಡೇವಿಡ್ ಮಿಲ್ಲರ್ (40) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 182 ರನ್ ಗಳನ್ನು ಪೇರಿಸಿತ್ತು.
ಆರಂಭಿಕರಾದ ಕ್ರೀಸ್ ಗೇಲ್ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್ ಗಳಿಂದ 30 ರನ್ ಗಳಿಸಿ ಔಟಾದರು. ಬಳಿಕ ಕ್ರೀಸಿಗಿಳಿದ ಕರ್ನಾಟಕದ ಮಯಾಂಕ್ ಅಗರ್ವಾಲ್ 26 ರನ್ ಗಳಿಸಿದರು. ಉಳಿದಂತೆ ಎನ್ ಪೂರನ್ 5, ಆರ್ ಅಶ್ವಿನ್ 17 ರನ್ ಗಳಿಸಿದರು.
ರಾಜಸ್ತಾನ ರಾಯಲ್ಸ್ ಪರ ಜೆಸಿ ಅರ್ಚೆರ್ 3, ಡಿಎಸ್ ಕುಲಕರ್ಣಿ, ಜೆಡಿ ಉನ್ನಾದ್ ಕತ್ , ಹಾಗೂ ಸೊದಿ ತಲಾ 1 ವಿಕೆಟ್ ಪಡೆದುಕೊಂಡರು.
ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ 182 ರನ್ ಗುರಿ ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ಆರ್ ಎ ತ್ರಿಪಾಠಿ ಅರ್ಧಶತಕ ಬಾರಿಸಿದರು. ಜೆಸಿ ಬುಟ್ಲರ್ 23, ಎಸ್ ವಿ ಸ್ಯಾಮ್ ಸನ್ 27, ಎಎಂ ರಹಾನೆ 26, ಎಸ್ ಟಿಆರ್ ಬಿನ್ನಿ 33 ರನ್ ಗಳೊಂದಿಗೆ ನಿಗದಿತ ಓವರ್ ಗಳಲ್ಲಿ 170 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದರಿಂದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ರನ್ ಅಂತರದಿಂದ ಗೆಲುವು ಸಾಧಿಸಿತು. ಆರ್. ಅಶ್ವೀನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.