ಕ್ರೀಡೆ

ಕೊಹ್ಲಿ ಪಡೆಗೆ ಸತತ ಎರಡನೇ ಬಾರಿ ಸೋಲು; ಆರ್‌ಸಿಬಿ ವಿರುದ್ಧ ಮುಂಬೈಗೆ 6 ರನ್ ಗಳ ರೋಚಕ ಜಯ

Pinterest LinkedIn Tumblr

ಬೆಂಗಳೂರು: ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 5 ಸಾವಿರ ರನ್ ದಾಖಲೆ, ನಿರ್ಮಿಸುವಲ್ಲಿ ಯಶಸ್ವಿಯಾದರೂ ಆರ್‌ಸಿಬಿ ಮಾತ್ರ ಸೋಲಿನ ದವಡೆಯಿಂದ ಪಾರಾಗಲು ಸಾಧ್ಯವಾಗಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 6 ರನ್ ಗಳ ರೋಚಕ ಜಯ ಸಾಧಿಸಿದೆ.

ಮುಂಬೈ ನೀಡಿದ್ದ 188 ರನ್ ಗುರಿ ಬೆನ್ನತ್ತಿದ ಕೊಹ್ಲಿ ಪಡೆ ಇಪ್ಪತ್ತು ಓವರ್ ಗಳಲ್ಲಿ5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದೆ. ಈ ಮೂಲಕ ಹೋಂ ಪಿಚ್ ನಲ್ಲಿ ಸಹ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಗೆಲುವು ದಕ್ಕಲಿಲ್ಲ. ಅಲ್ಲದೆ ಐಪಿಎಲ್ ಹನ್ನೆರಡನೇ ಆವೃತ್ತಿಯಲ್ಲಿ ಕೊಹ್ಲಿ ಪಡೆ ಸತತ ಎರಡನೇ ಬಾರಿ ಸೋಲು ಕಂಡಿದೆ.

ಆರ್‌ಸಿಬಿ ಪರವಾಗಿ ನಾಯಕ ವಿರಾಟ್ ಕೊಹ್ಲಿ (46), ಎಬಿ ಡೆವಿಲ್ಲಿಯರ್ಸ್ (70), ಪಾರ್ಥಿವ್ ಪಟೇಲ್ (31), ಮೊಯೀನ್ ಅಲಿ (13) ರನ್ ಗಳಿಸಿ ಗಮನ ಸೆಳೆದರು.

ಇದರಲ್ಲಿಯೂ ಡೆವಿಲ್ಲಿಯರ್ಸ್ 6 ಸಿಕ್ಸರ್ ಹಾಗೂ 4 ಬೌಂಡರಿಗಳು ಸೇರಿ 41 ಎಸೆತಕ್ಕೆ 70 ರನ್ ಕಲೆಹಾಕಿದ್ದರು. ಇನ್ನು ನಾಯಕ ಕೊಹ್ಲಿ 6 ಬೌಂಡರಿ ಸಿಡಿಸಿ 32 ಬಾಲ್ ಗಳಿಗೆ 46 ರನ್ ಗಳಿಸಿದ್ದರು.
ಮುಂಬೈ ಪರ ಬುಮ್ರಾ 3, ಮಯಾಂಕ್ 1 ವಿಕೆಟ್ ಪಡೆದು ಮಿಂಚಿದ್ದರು.

ಇದಕ್ಕೆ ಮುನ್ನ ಬ್ಯಾಟಿಂಗ್ ನಡೆಸಿದ್ದ ಮುಂಬೈ ನಿಗದಿತ ಇಪ್ಪತ್ತು ಓವರ್ ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ 187 ರನ್‌ ಗಳಿಸಿತ್ತು.

ಕೊಹ್ಲಿ 5000 ರನ್ ಮೈಲುಗಲ್ಲು
ಐಪಿಎಲ್ ನಲ್ಲಿ ಸುರೇಶ್ ರೈನಾ ಬಳಿಕ 5000 ರನ್ ಸಾಧನೆ ಮಾಡಿದ ಎರಡನೇ ಆಟಗಾರನಾಗಿ ವಿರಾಟ್ ಕೊಹ್ಲಿ ಹೆಸರಾಗಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್ ನ ಅದ್ಭುತ ಪ್ರದರ್ಶನವನ್ನು ಐಪಿಎಲ್ ನಲ್ಲಿಯೂ ಮುಂದುವರಿಸಿರುವ ಕೊಹ್ಲಿ ತಮ್ಮ 164ನೇ ಐಪಿಎಲ್ ಪಂದ್ಯದ 157ನೇ ಇನ್ನಿಂಗ್ಸ್‌ ನಲ್ಲಿ ಐದು ಸಹಸ್ರ ರನ್ ಗುರಿ ತಲುಪಿದರು.

38.44ರ ಸರಾಸರಿಯಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.ಐಪಿಎಲ್ ನಲ್ಲಿ ಕೊಹ್ಲಿ ಇದುವರೆಗೆ ನಾಲ್ಕು ಶತಕ, 34 ಅರ್ಧಶತಕಗಳನ್ನು ಸಿಡಿಸಿದ್ದಾರೆ.

Comments are closed.