ಕ್ರೀಡೆ

ಐಪಿಎಲ್ ; ಮನ್ ಕಡ್ ಮೂಲಕ ಜಾಸ್ ಬಟ್ಲರ್ ರನ್ನು ಅಶ್ವಿನ್​ ಔಟ್ ಮಾಡಿದ ಬಳಿಕ ಭುಗಿಲೆದ್ದಿರುವ ಹೊಸ ಕ್ರಿಕೆಟ್ ವಿವಾದ

Pinterest LinkedIn Tumblr

ಐಪಿಎಲ್ 12ನೇ ಆವೃತ್ತಿಯಲ್ಲಿ ವಿವಾದವೊಂದು ಹುಟ್ಟಿಕೊಂಡಿದೆ. ಮಾರ್ಚ್​ 25 ರಂದು ನಡೆದ ರಾಜಸ್ಥಾನ ಹಾಗೂ ಕಿಂಗ್ಸ್​ ಇಲೆವನ್​ ಪಂಜಾಬ್​ ತಂಡದ ನಡುವಿನ ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಆಟಗಾರ ಜಾಸ್​ ಬಟ್ಟರ್​ ಔಟ್ ಆದ ರೀತಿ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನದಲ್ಲಿ ಜಾಸ್ ಬಟ್ಲರ್​ ಅನ್ನು ಆರ್​. ಅಶ್ವಿನ್ ಮನ್​ಕಡ್ ರನೌಟ್ ಮೂಲಕ ಔಟ್ ಮಾಡಿದ್ದರು.

43 ಎಸೆತಗಳಲ್ಲಿ ಅಮೋಘ 69 ಸಿಡಿಸಿದ್ದ ಬಟ್ಲರ್​ ರನ್ನು ಅಶ್ವಿನ್ ಬೌಲಿಂಗ್ ಮಾಡುವ ಮುನ್ನವೇ ರನೌಟ್​ ಮಾಡಿದ್ದರು. ಬ್ಯಾಟ್ಸಮನ್​ಗೆ ಯಾವುದೇ ರೀತಿಯ ಎಚ್ಚರಿಕೆ ನೀಡದೇ ಔಟ್ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ದಿಗ್ಗಜರು ಸಹ ಈ ಸಂಬಂಧ ಪರ-ವಿರೋದ ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಅವರ ನಡೆಯನ್ನು ಪ್ರಶ್ನಿಸಲಾಗುತ್ತಿದೆ. ಮುಖ್ಯವಾಗಿ ಅಶ್ವಿನ್ ಯಾವುದೇ ಮುನ್ನೆಚ್ಚರಿಕೆ ನೀಡದೇ ಬಟ್ಲರ್​ ಅನ್ನು ಔಟ್ ಮಾಡಿ ಕ್ರೀಡಾ ಸ್ಪೂರ್ತಿ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ಈ ವಿವಾದ ತಾರಕ್ಕೇರುತ್ತಿದ್ದಂತೆ ಖುದ್ದು, ಕಿಂಗ್ಸ್​ ಇಲೆವೆನ್ ತಂಡದ ನಾಯಕ, ಮನ್​ಕಡ್​ ರನೌಟ್ ವಿವಾದಾತ್ಮಕ ಆಟಗಾರ ಆರ್​.ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕ್ರಿಕೆಟ್ ನಿಯಮಗಳ ಪ್ರಕಾರ ಜಾಸ್ ಬಟ್ಲರ್ ರನ್ನು ಔಟ್ ಮಾಡಿದ್ದೇನೆ. ಇಲ್ಲಿ ಕ್ರೀಡಾಸ್ಪೂರ್ತಿಯ ಪ್ರಶ್ನೆ ಎಲ್ಲಿಂದ ಉದ್ಭವ ಆಗಿದೆ ಎಂದು ತಿಳಿಯುತ್ತಿಲ್ಲ. ಐಸಿಸಿಯ ರೂಲ್ಸ್​ನ 41.16 ನಿಯಮದ ಅಡಿಯಲ್ಲಿ ಬೌಲರ್ ಚೆಂಡನ್ನು ಎಸೆಯುವ ಮುನ್ನ ಬ್ಯಾಟ್ಸಮನ್ ಕ್ರೀಸ್ ಬಿಟ್ಟರೆ, ಆತನನ್ನು ರನೌಟ್ ಮಾಡಬಹುದು. ಈಗ ನಾನು ಮಾಡಿದ್ದು ತಪ್ಪು ಎಂದಾದರೆ ಮೊದಲು ನಿಯಮವನ್ನು ಬದಲಿಸಬೇಕಾಗುತ್ತದೆ ಎಂದು ಅಶ್ವಿನ್ ಟೀಕಾಕಾರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಮನ್​ಕಡ್ ರನೌಟ್ ಎಂದರೇನು?
ಬೌಲರ್ ಚೆಂಡನ್ನು ಎಸೆಯುವ ಮುನ್ನ ಬ್ಯಾಟ್ಸಮನ್ ಕ್ರೀಸ್ ಬಿಟ್ಟರೆ, ಆಗ ಆತನನ್ನು ರನೌಟ್ ಮೂಲಕ ಔಟ್ ಮಾಡುವುದನ್ನು ಮನ್​ಕಡ್ ರನೌಟ್ ಎನ್ನಲಾಗುತ್ತದೆ.

ಈ ರನೌಟ್​ಗೂ ಭಾರತಕ್ಕೂ ಇದೆ ನಂಟು..!

ಈ ರನೌಟ್ ವಿಧಾನವನ್ನು ಮೊದಲು ಪ್ರಯೋಗಿಸಿದ್ದು ಭಾರತೀಯ ಆಟಗಾರ. 1947 ರಲ್ಲಿ ಭಾರತ ತಂಡದ ಆಲ್​ರೌಂಡರ್ ವಿನು ಮನ್​ಕಡ್ ಈ ಪ್ರಯೋಗದ ಮೂಲಕ ಆಸ್ಟ್ರೇಲಿಯನ್ ಬ್ಯಾಟ್ಸ್​ಮನ್ ಬಿಲ್​ ಬ್ರೌನ್ ಅನ್ನು ಔಟ್ ಮಾಡಿದ್ದರು. ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ಬ್ರೌನ್ ಬೌಲಿಂಗ್ ಮಾಡುವ ಮುನ್ನ ಕ್ರೀಸ್ ಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಮನ್​ಕಡ್​ ಬ್ರೌನ್​ ವಿಕೆಟ್​ ಅನ್ನು ರನೌಟ್ ಮೂಲಕ ಪಡೆದರು.

ಇದಾದ ಬಳಿಕ 2ನೇ ಟೆಸ್ಟ್​ ಪಂದ್ಯದಲ್ಲೂ ಮತ್ತದೇ ತಪ್ಪು ಮಾಡಿದ್ದ ಕ್ರಿಸ್ ಬ್ರೌನ್​ರನ್ನು ವಿನು ಮನ್​ಕಡ್ ಔಟ್ ಮಾಡಿದರು. ಈ ಘಟನೆಯ ಬಳಿಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ರೀತಿಯ ರನೌಟ್ ಹೊಸ ಚರ್ಚೆ ಹುಟ್ಟು ಹಾಕಿತು. ಈ ವೇಳೆ ಅನೇಕರು ವಿನು ಮನ್​ಕಡ್​ ಅವರ ನಡೆಯನ್ನು ಪ್ರಶ್ನಿಸಿದ್ದರು. ಆದರೆ ಕ್ರಿಕೆಟ್ ದಂತಕಥೆ ಸರ್. ಡಾನ್ ಬ್ರಾಡ್ಮನ್ ಭಾರತೀಯ ಆಟಗಾರನ ಕ್ರಮವನ್ನು ಬೆಂಬಲಿಸಿದ್ದರು. ಈ ಕುರಿತು ಬ್ರಾಡ್ಮನ್ ತಮ್ಮ ಆತ್ಮಕಥೆಯಲ್ಲೂ ತಿಳಿಸಿದ್ದಾರೆ. ಅಂದು ಏಕೆ ಎಲ್ಲರೂ ಮನ್​ಕಡ್ ಮಾಡಿದ ರನೌಟ್ ಅನ್ನು ಪ್ರಶ್ನಿಸಿದ್ದರು ಎಂದು ಅರ್ಥವಾಗಲಿಲ್ಲ. ನಾನ್​ ಸ್ಟ್ರೈಕರ್ ಆಟಗಾರ ಬಾಲ್ ಬಿಡುವ ಮುನ್ನ ಕ್ರೀಸ್ ಬಿಡುವುದರಿಂದ ಬ್ಯಾಟ್ಸ್​ಮನ್​ಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬುದನ್ನು ಕ್ರಿಕೆಟ್​ ದಿಗ್ಗಜ ಪ್ರಸ್ತಾಪಿಸಿದ್ದರು.

ಅಂದು ವಿನು ಮನ್​ಕಡ್ ಮಾಡಿದ ರನೌಟ್ ನಂತರ ಮನ್​ಕಡ್ ರನೌಟ್ ಎಂದೇ ಪ್ರಖ್ಯಾತಿ ಪಡೆಯಿತು. ಇದನ್ನೇ ಮುಂದೆ ಕ್ರಿಕೆಟ್ ನಿಯಮದಲ್ಲಿ ಮನ್​ಕಡಿಂಗ್ ರನೌಟ್​ ಎಂದು ಕರೆಯಲಾಯಿತು.

ಮನ್​ಕಡ್ ಅಸ್ತ್ರ ಪ್ರಯೋಗಿಸಿದ ಭಾರತೀಯ ಆಟಗಾರರು:

ಅಶ್ವಿನ್​ಗೂ ಮುನ್ನ ಮನ್​ಕಡ್ ರನೌಟ್ ಮಾಡಿ ಕೆಲ ಭಾರತೀಯ ಆಟಗಾರರು ಸುದ್ದಿಯಾಗಿದ್ದರು. ಅದರಲ್ಲಿ ಪ್ರಮುಖರು ಎಂದರೆ ಭಾರತೀಯ ಕ್ರಿಕೆಟ್ ದಂತಕಥೆ ಕಪಿಲ್ ದೇವ್. 1992 ರಲ್ಲಿ ಭಾರತ ಮತ್ತು ದಕ್ಷಿಣಾ ಆಫ್ರಿಕಾ ನಡುವೆ ಫ್ರೆಂಡ್​ಶಿಪ್ ಸಿರೀಸ್ ನಡೆಯುತ್ತಿತ್ತು. ಈ ವೇಳೆ ಸೌತ್ ಆಫ್ರಿಕಾ ಬ್ಯಾಟ್ಸ್​ಮನ್ ಪೀಟರ್​ ಕಿಸ್ಟರ್ನ್​ ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್​ ಬಿಡುತ್ತಿದ್ದರು. ಇದನ್ನು ಪ್ರಶ್ನಿಸಿದ ಕಪಿಲ್ ದೇವ್ ಕಿಸ್ಟರ್ನ್​ಗೆ ಎರಡು ಬಾರಿ ಎಚ್ಚರಿಕೆ ನೀಡಿದರು. ಮತ್ತದೇ ತಪ್ಪು ಮಾಡಿದ ದಕ್ಷಿಣ ಆಫ್ರಿಕಾ ಆಟಗಾರನನ್ನು ಕಪಿಲ್ ದೇವ್ ಮನ್​ಕಡ್ ರನೌಟ್ ಮೂಲಕ ಪೆವಿಲಿಯನ್​ಗೆ ಕಳುಹಿಸಿದ್ದರು.

ಇನ್ನು ರಣಜಿ ಪಂದ್ಯದ ವೇಳೆಯು ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಪಶ್ಚಿಮ ಬಂಗಾಳದ ಆಟಗಾರ ಸಂದಿಪನ್ ದಾಸ್ ಬೌಲರ್ ಚೆಂಡೆಸುವ ಮುನ್ನ ಕ್ರೀಸ್​ನಿಂದ ಕಾಲ್ಕಿತ್ತಿದ್ದರು. ಈ ವೇಳೆ ರೈಲ್ವೇಸ್ ಪರ ಬೌಲಿಂಗ್ ಮಾಡುತ್ತಿದ್ದ ಸ್ಪಿನ್ನರ್ ಮುರಳಿ ಕಾರ್ತಿಕ್ ಮನ್​ಕಡ್ ರನೌಟ್ ಮೂಲಕ ದಾಸ್​ರನ್ನು ಔಟ್ ಮಾಡಿದ್ದರು.

ಎರಡನೇ ಬಾರಿ ಬಲಿಯಾದ ಬಟ್ಲರ್​!

ಅಂದಹಾಗೆ ಜಾಸ್ ಬಟ್ಲರ್ ಈ ರೀತಿಯಾಗಿ ಔಟ್ ಆಗಿರುವುದು ಇದು ಎರಡನೇ ಬಾರಿ. 2014 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮುನ್ನ ಕ್ರೀಸ್ ಬಿಡುವ ತಪ್ಪನ್ನು ಇಂಗ್ಲೆಂಡ್ ಬ್ಯಾಟ್ಸ್​ಮನ್ ಮಾಡಿದ್ದನು. ಈ ವೇಳೆ ಲಂಕಾ ಬೌಲರ್​ ಸಚಿತ್ರ ಸೇನಾನಾಯಕೆ ಮನ್​ಕಡ್ ರನೌಟ್ ಮೂಲಕ ಬಟ್ಲರ್​ ಅನ್ನು ಔಟ್​ ಮಾಡಿದ್ದರು.

Comments are closed.