ಕ್ರೀಡೆ

ಐಪಿಎಲ್ 12ರ ಆವೃತ್ತಿಗೆ ಕ್ಷಣಗಣನೆ: ಇಂದು ಆರ್​​ಸಿಬಿ-ಸಿಎಸ್​​ಕೆ ಮಧ್ಯೆ ಮೊದಲ ಸೆಣೆಸಾಟ

Pinterest LinkedIn Tumblr


ಬೆಂಗಳೂರು: ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಕಲರ್​ಫುಲ್​ ಹೊಡಿ ಬಡಿ ಚುಟುಕು ಸಮರ ಐಪಿಎಲ್ 12ರ ಆವೃತ್ತಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ನಾಳೆ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮೊದಲ ಸೆಣೆಸಾಟ ನಡೆಸಲಿದೆ.

ಉಭಯ ತಂಡಗಳು ಈಗಾಗಲೇ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ಬಲಿಷ್ಠವಾಗಿದೆ. ಅದರಲ್ಲು ಆರ್​ಸಿಬಿ ತಂಡ ಹೊಸ ಹುರುಪಿನೊಂದಿಗೆ ಮೈದಾನಕ್ಕಿಳಿಯಲು ತಯಾರಾಗಿದೆ. ಆರ್​ಸಿಬಿ ಪರ ಆರಂಭಿಕರಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಕಣಕ್ಕಿಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬೆಂಗಳೂರಿಗೆ ಈಬಾರಿ ಮತ್ತಷ್ಟು ಬಲ ಬಂದಿದೆ.

ಮಿ. 360 ಖ್ಯಾತಿಯ ಎಬಿ ಡಿವಿಲಿಯರ್ಸ್​ ಒಂದು ಕಡೆಯಾದರೆ, ವೆಸ್ಟ್​ ಇಂಡೀಸ್​ನ ಹೊಡಿಬಡಿ ಆಟಗಾರ ಶಿಮ್ರೋನ್ ಹೆಟ್ಮೇರ್ ಇದೆ ಮೊದಲ ಬಾರಿಗೆ ಅಬ್ಬರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಲ್ಲದೆ ಕಿವೀಸ್ ದಾಂಡಿಗ ಕಾಲಿನ್ ಗ್ರ್ಯಾಂಡ್​​ಹೋಮ್​​, ಶಿವಂ ದುಬೆ, ಮೊಯೀನ್ ಅಲಿ, ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಬಲ್ಲರು. ಬೌಲಿಂಗ್​​ನಲ್ಲೂ ವೇಗಿಗಳಾಗಿ ಉಮೇಶ್ ಯಾದವ್ ಹಾಗೂ ನೇಥನ್ ಕೌಲ್ಟರ್ ನೈಲ್ ಇದ್ದರೆ ಸ್ಪಿನ್ ಜಾದು ಮಾಡಲು ಯಜುವೇಂದ್ರ ಚಹಾಲ್ ಕಾದುಕುಳಿತಿದ್ದಾರೆ.

ಇತ್ತ ಧೋನಿ ನಾಯಕತ್ವದ ಹಾಲಿ ಚಾಂಪಿಯನ್ ಚೆನ್ನೈ ತಂಡ ಅನುಭವದ ಜೊತೆ ಬಲಿಷ್ಠ ಆಟಗಾರರಿಂದ ಕೂಡಿದೆ. ಶೇನ್ ವಾಟ್ಸನ್​​​, ಸುರೇಶ್ ರೈನಾ, ಅಂಬಟಿ ರಾಯುಡು, ಕೇದರ್ ಜಾಧವ್ ಒಂದು ಕಡೆಯಾದರೆ, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ ಹಾಗೂ ಡೇವಿಡ್ ವಿಲ್ಲೆ ಹೊಡಿಬಡಿ ಆಟಕ್ಕೆ ಹೇಳಿಮಾಡಿಸಿದ ಆಟಗಾರರು.

ಬೌಲಿಂಗ್​ನಲ್ಲಿ ಕೊಂಚ ವೀಕ್ ಆಗಿರುವ ಚೆನ್ನೈ ಪ್ರಮುಖ ಅಸ್ತ್ರವನ್ನೆ ಕಳೆದುಕೊಂಡಿದೆ. ಪ್ರಮುಖ ಬೌಲರ್ ಲುಂಗಿ ನಿಗಿಡಿ ಗಾಯಕ್ಕೆ ತುತ್ತಾಗಿ ಬಹುತೇಕ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರು ಬೌಲಿಂಗ್ ವಿಭಾಗದಲ್ಲಿ ಬಲ ತುಂಬಲು ಮೋಹಿತ್ ಶರ್ಮಾ ಕಮ್​ಬ್ಯಾಕ್ ಮಾಡಿದ್ದು, ಇವರ ಜೊತೆ ಮಿಚೆಲ್ ಸ್ಯಾಂಟನರ್, ದೀಪಕ್ ಚಹಾರ್ ಇದ್ದಾರೆ.

ಅಂಕಿ ಅಂಶದ ಪ್ರಕಾರ ಚೆನ್ನೈ ತಂಡವೆ ಬಲಿಷ್ಠವಾಗಿದೆ. ಈವರೆಗೆ ಐಪಿಎಲ್​ನಲ್ಲಿ ಉಭಯ ತಂಡಗಳು ಒಟ್ಟು 23 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ 15 ಪಂದ್ಯಗಳಲ್ಲಿ ಗೆಲುವು ಕಂಡರೆ, ಆರ್​ಸಿಬಿ ಕೇವಲ 7 ಪಂದ್ಯದಲ್ಲಷ್ಟೆ ಜಯ ಸಾಧಿಸಿದೆ. ಒಂದು ಪಂದ್ಯ ಡ್ರಾ ಆಗಿದೆ.

ಅದೇನೆಯಿದ್ದರು ಕೊಹ್ಲಿ ಪಡೆ ಗೆಲುವಿನ ವಿಶ್ವಾಸದಲ್ಲಿದ್ದು, ಇತ್ತ ಧೋನಿ ಕೂಡ ಜಯದ ಮೂಲಕ ಟೂರ್ನಿಯಲ್ಲಿ ಆರಂಭ ಪಡೆಯಬೇಕೆಂದು ರಣತಂತ್ರ ಹೆಣೆದಿದ್ದಾರೆ. ಒಟ್ಟಾರೆ ನಾಳೆ ರಾತ್ರಿ 8 ಗಂಟೆಗೆ ಹೈವೋಲ್ಟೇಜ್​​ ಪಂದ್ಯವಾಗುವ ಎಲ್ಲ ನಿರೀಕ್ಷೆಯಿದೆ.

ಸರಳ ರೀತಿಯಲ್ಲಿ ಉದ್ಘಾಟನೆ:

ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಈ ಬಾರಿ ರಂಗೀನ್​ ದುನಿಯಾದ ಸ್ಟಾರ್​ ನಟ-ನಟಿಯರು ಕಾಣಿಸಿಕೊಳ್ಳುವುದಿಲ್ಲ. ಸರಳ ರೀತಿಯಲ್ಲೇ ಉದ್ಘಾಟನಾ ಸಾಮಾರಂಭವನ್ನು ಆಯೋಜಿಸಲು ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ತೀರ್ಮಾನಿಸಿದೆ. ಅಲ್ಲದೆ ಅದ್ಧೂರಿ ಒಪನಿಂಗ್​ಗಾಗಿ ಮೀಸಲಿಟ್ಟ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನೀಡಲು ನಿರ್ಧರಿಸಲಾಗಿದೆ.

Comments are closed.