ಕರಾವಳಿ

ಯೋಗಾಸನದಲ್ಲಿ 3 ನೇ ಬಾರಿ ವಿಶ್ವದಾಖಲೆ ಮಾಡಿದ ಉಡುಪಿಯ ಹತ್ತರ ಪೋರಿ ತನುಶ್ರೀ ಪಿತ್ರೋಡಿ (Video)

Pinterest LinkedIn Tumblr

ಉಡುಪಿ: ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಉಡುಪಿಯ ಬಾಲಕಿಯೊಬ್ಬಳ ಸಾಧನೆ ದ್ರಷ್ಟಾಂತ. ಈ ಬಾಲಕಿ ವಯಸ್ಸು ಇನ್ನೂ 10 ಆದ್ರೂ ಸಾಧನೆ ಮಾತ್ರ ಅಪಾರ. ಈಕೆ ಹೆಸರು ತನುಶ್ರೀ ಪಿತ್ರೋಡಿ. ಉಡುಪಿಯ ಉದಯ್​ಕುಮಾರ್​ ಹಾಗೂ ಸಂಧ್ಯಾ ದಂಪತಿಯ ಪುತ್ರಿ. ಉಡುಪಿ ಸೇಂಟ್ ಸಿಸಿಲೀಸ್ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ.

ಈಗಾಗಲೇ ಯೋಗಾಸನದಲ್ಲಿ 2 ಬಾರಿ ವರ್ಲ್ಡ್​​ ರೆಕಾರ್ಡ್​ ಮಾಡಿರುವ ಈ ಪೋರಿ ಒಂದೆರಡು ದಿನಗಳ ಹಿಂದಷ್ಟೇ ಮತ್ತೊಮ್ಮೆ ವಿಶ್ವದಾಖಲೆ ಮಾಡಿದ್ದಾಳೆ. ಉಡುಪಿಯ ಸೇಂಟ್ ಸಿಸಿಲೀಸ್ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಯೋಗಪ್ರದರ್ಶನದಲ್ಲಿ ಧನುರಾಸನ ಎಂಬ ಯೋಗವನ್ನು ತನುಶ್ರೀ 1 ನಿಮಿಷದಲ್ಲಿ 62 ಉರುಳು ಹಾಗೂ 1 ನಿಮಿಷ 40 ಸೆಕೆಂಡ್​​ಗಳಲ್ಲಿ 100 ಉರುಳುಗಳನ್ನು ಹಾಕುವ ಮೂಲಕ ಎರಡು ವಿಶ್ವದಾಖಲೆ ನಿರ್ಮಿಸಿದ್ದಾಳೆ.

10ರ ಪೋರಿಯ ಅಭೂತಪೂರ್ವ ಸಾಧನೆಗಾಗಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ದಕ್ಷಿಣ ಏಷ್ಯಾ ನಿರ್ದೇಶಕ ಮನೀಶ್ ಬಿಶ್ನೋಯಿ ಪ್ರಮಾಣಪತ್ರ ಹಸ್ತಾಂತರಿಸಿದ್ರು.ಇನ್ನು 2017ರಲ್ಲಿ ತನುಶ್ರೀ ಯೋಗದ ನಿರಾಲಂಭ ಪೂರ್ಣ ಚಕ್ರಾಸನವನ್ನು ಒಂದೇ ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಳು. 2018ರಲ್ಲಿ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ನಿಮಿಷಕ್ಕೆ 41 ಬಾರಿ ತಿರುಗಿಸುವ ಮೂಲಕ ಇನ್ನೊಂದು ಗಿನ್ನಿಸ್ ರೆಕಾರ್ಡ್​ ಬರೆದಿದ್ದಳು. ಮೂರನೇ ಬಾರಿಗೆ ಇವರೆಗೆ ಯಾರೂ ದಾಖಲೆ ಮಾಡದ ಧನುರಾಸನದಲ್ಲಿ ತನುಶ್ರೀ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ತಕ್ಕದಾಗಿರುವ ಈಕೆ ಯೋಗಾಸನ ಮಾತ್ರವಲ್ಲ ನೃತ್ಯದಲ್ಲೂ ಎತ್ತಿದ ಕೈ. ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾಳೆ.

Comments are closed.