ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 4-1 ಅಂತರದಿಂದ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ಇದೀಗ ಟಿ20 ಸರಣಿಗೆ ಸಜ್ಜಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 06ರಿಂದ ಆರಂಭವಾಗಲಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ತಂಡದಿಂದ ಹೊರಗುಳಿದಿದ್ದ ರಿಷಭ್ ಪಂತ್ ತಂಡ ಕೂಡಿಕೊಂಡಿದ್ದು ತಂಡದ ಬ್ಯಾಟಿಂಗ್ ಬಲವನ್ನು ಇನ್ನಷ್ಟು ಹೆಚ್ಚಿಸಿದೆ. ಹಾರ್ದಿಕ್ ಪಾಂಡ್ಯ ಹಾಗೂ ಕೇದಾರ್ ಜಾಧವ್ ತಮ್ಮ ಆಲ್ರೌಂಡ್ ಪ್ರದರ್ಶನವನ್ನು ಏಕದಿನ ಸರಣಿಯಲ್ಲಿ ಅಚ್ಚುಕಟ್ಟಾಗಿ ನಿಭಾಯಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ವೇಗದ ಬೌಲಿಂಗ್ ಸಾರಥ್ಯ ವಹಿಸಲಿದ್ದು, ಮಣಿಕಟ್ಟು ಸ್ಪಿನ್ ದ್ವಯರು ಮ್ಯಾಜಿಕ್ ಮಾಡಲು ಸಜ್ಜಾಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗ ಹೀಗಿರಬಹುದು:
ಆರಂಭಿಕರಾಗಿ ಧವನ್-ರೋಹಿತ್: ಟೀಂ ಇಂಡಿಯಾದ ಯಶಸ್ವಿ ಆರಂಭಿಕ ಜೋಡಿ ರೋಹಿತ್ ಶರ್ಮಾ- ಶಿಖರ್ ಧವನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಈ ಜೋಡಿ ಉತ್ತಮ ಆರಂಭ ಒದಗಿಸಿಕೊಟ್ಟರೆ, ಮಧ್ಯಮ ಕ್ರಮಾಂಕ ನಿರಾಯಾಸವಾಗಿ ರನ್ ಕಲೆಹಾಕಬಹುದು.
ಮಧ್ಯಮ ಕ್ರಮಾಂಕ: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಶುಭಮನ್ ಗಿಲ್, ಮಹೇಂದ್ರ ಸಿಂಗ್ ಧೋನಿ ಹಾಗೂ ರಿಷಭ್ ಪಂತ್ ಟೀಂ ಇಂಡಿಯಾಗೆ ಬಲ ತುಂಬಲಿದ್ದಾರೆ. ಕೆಳಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೇದಾರ್ ಜಾಧವ್ ಆಲ್ರೌಂಡ್ ಪ್ರದರ್ಶನ ನೀಡಬಲ್ಲರು.
ಬೌಲಿಂಗ್ ವಿಭಾಗ: ಚುಟುಕು ಕ್ರಿಕೆಟ್ ಸ್ಪೆಷಲಿಸ್ಟ್ ಸ್ಪಿನ್ನರ್’ಗಳಾದ ಯುಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಕಿವೀಸ್ ಬ್ಯಾಟ್ಸ್’ಮನ್’ಗಳನ್ನು ಬಲೆಗೆ ಬೀಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ವೇಗದ ಬೌಲರ್ ನೇತೃತ್ವವನ್ನು ಭುವನೇಶ್ವರ್ ಕುಮಾರ್ ವಹಿಸಲಿದ್ದು, ಇವರಿಗೆ ಖಲೀಲ್ ಅಹಮ್ಮದ್ ಇಲ್ಲವೇ ಸಿದ್ಧಾರ್ಥ್ ಕೌಲ್ ಸಾಥ್ ನೀಡುವ ಸಾಧ್ಯತೆಯಿದೆ.
ಒಟ್ಟಾರೆ ತಂಡ:
1. ರೋಹಿತ್ ಶರ್ಮಾ
2. ಶಿಖರ್ ಧವನ್
3. ಶುಭ್’ಮನ್ ಗಿಲ್
4. ಎಂ.ಎಸ್ ಧೋನಿ
5. ರಿಷಭ್ ಪಂತ್
6. ಕೇದಾರ್ ಜಾಧವ್
7. ಹಾರ್ದಿಕ್ ಪಾಂಡ್ಯ
8. ಭುವನೇಶ್ವರ್ ಕುಮಾರ್
9. ಕುಲ್ದೀಪ್ ಯಾದವ್
10. ಯುಜುವೇಂದ್ರ ಚಹಲ್
11. ಖಲೀಲ್ ಅಹಮ್ಮದ್/ಸಿದ್ಧಾರ್ಥ್ ಕೌಲ್
Comments are closed.