ಕರಾವಳಿ

ಉಡುಪಿಯ ಇಬ್ಬರು ಅಂತರಾಷ್ಟ್ರೀಯ ಮಟ್ಟದ ಟೆನ್ನಿಸ್ ಆಟಗಾರರಿಗೆ ತಲಾ 5 ಲಕ್ಷ ಅವಾರ್ಡ್: ರಹೀಮ್ ಖಾನ್

Pinterest LinkedIn Tumblr

ಉಡುಪಿ: ರಾಜ್ಯದ ಕ್ರೀಡಾ ಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸರಕಾರದಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ರಹೀಮ್ ಖಾನ್ ತಿಳಿಸಿದ್ದಾರೆ.

ಅವರು, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಳಾಂಗಣ ಸಿಂಥೆಟಿಕ್ ಟೆನ್ನಿಸ್ ಅಂಕಣ, ಒಳಾಂಗಣ ನೂತನ ಜಿಮ್ ಕೊಠಡಿ ನವೀಕರಣ ಕಾಮಗಾರಿ, ಒಳಾಂಗಣ ನೂತನ ಹವಾ ನಿಯಂತ್ರಿತ ಜಿಮ್ ಕೇಂದ್ರ, ಮಹಿಳಾ ಕ್ರೀಡಾ ವಸತಿ ನಿಲಯ ಮತ್ತು ವಿಕಲಚೇತನ ಸ್ನೇಹಿ ಶೌಚಾಲಯ ಮತ್ತು ರ್‍ಯಾಂಪ್ ಕಾಮಗಾರಿ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡಾ ಪಟುಗಳಿಗೆ ಬೇಕಾಗುವ ಕ್ರೀಡಾ ಸಲಕರಣೆಗಳು ಹಾಗೂ ಇತರ ಯಾವುದೇ ಸಹಾಯ ಬೇಕಾದಲ್ಲಿ ಕ್ರೀಡಾ ಇಲಾಖೆಗೆ ಪತ್ರ ಬರೆದರೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಯುವ ಕ್ರೀಡಾ ಪ್ರತಿಭೆಗಳಿಗೆ ಕೋಚರ್‍ಸ್‌ಗಳನ್ನು ನೀಡುವುದಾಗಿಯೂ ಹೇಳಿದರು. ಉಡುಪಿ ಜಿಲ್ಲೆಯ ಅಂತರಾಷ್ಟ್ರೀಯ ಮಟ್ಟದ ಟೆನ್ನಿಸ್ ಆಟಗಾರರಾದ ಸಹನಾ ಹಾಗೂ ಸಚಿನ್ ಅವರಿಗೆ ತಲಾ 5 ಲಕ್ಷ ಅವಾರ್ಡ್ ನೀಡುವುದಾಗಿ ಘೋಷಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಮಾತನಾಡಿ, ಜಿಲ್ಲೆಯಲ್ಲಿ ಕ್ರಿಕೆ ಟ್ ಸ್ಟೇಡಿಯಂನ ಸ್ಥಾಪಿಸುವಂತೆ ಮತ್ತು ಮುಂದಿನ ದಿನಗಳಲ್ಲಿ ಯುವ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳಲು ಈ ಕ್ರೀಡಾಂಗಣಕ್ಕೆ ಹೆಚ್ಚಿನ ಕೋಚ್‌ಗಳನ್ನು ಒದಗಿಸಬೇಕು ಎಂದರು.

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಕ್ರೀಡೆ, ಅಥ್ಲೆಟಿಕ್‌ನಲ್ಲಿ ಉಡುಪಿ ಜಿಲ್ಲೆ ಹೆಚ್ಚು ಪ್ರತಿಭೆಯನ್ನು ಹೊಂದಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಕ್ರೀಡಾಪಟುಗಳ ಪ್ರತಿಭೆ ಹಿಂದುಳಿಯುತ್ತಿದೆ. ಮುಂದಿನ ದಿನಗಳಲ್ಲಿ ಯುವ ಕ್ರೀಡಾ ಪ್ರತಿಭೆಗಳಿಗೆ ಕೋಚಿಂಗ್ ಕ್ಯಾಂಪ್ ನಡೆಸುವ ವ್ಯವಸ್ಥೆ ಆಗಬೇಕು.ಉಡುಪಿಯಲ್ಲಿ ನಿರ್ಮಾಣವಾಗಿರುವ ಸಿಂಥೆಟಿಕ್ ಟೆನ್ನಿಸ್ ಕ್ರೀಡಾಂಗಣದ ಸದುಪಯೋಗ ಪಡೆದು ಯುವ ಕ್ರೀಡಾಪಟುಗಳು ಜಿಲ್ಲೆಗೆ ಕೀರ್ತಿತರಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ.ಕಲ್ಪನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್ , ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಟೆನಿಸ್ ಅಸೋಶಿಯೇಷನ್ ಅಧ್ಯಕ್ಷ ದೇವಾನಂದ್, ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಸತೀಶ್ಚಂದ್ರ ವಂದಿಸಿದರು.

Comments are closed.