ಕ್ರೀಡೆ

ಫುಟ್​ಬಾಲ್​ ಕ್ರೇಜ್: ಮದುವೆ ಮಂಟಪದಿಂದ ಐದು ನಿಮಿಷದಲ್ಲಿ ಬರುವುದಾಗಿ ಹೇಳಿ ವರ ಪರಾರಿ​!

Pinterest LinkedIn Tumblr


ಭಾರತದಲ್ಲಿ ಅತಿ ಹೆಚ್ಚು ಫುಟ್​ಬಾಲ್ ಪ್ರೇಮಿಗಳಿರುವ ರಾಜ್ಯವೆಂದರೆ ಕೇರಳ. ಫಿಫಾ ವರ್ಲ್ಡ್​​ ಕಪ್​ ಸಮಯದಲ್ಲಂತೂ ಕೇರಳದಲ್ಲಿಯೇ ವಿಶ್ವಕಪ್​ ನಡೆಯುತ್ತಿದೆ ಎಂಬ ರೀತಿಯಲ್ಲಿ ಅಲ್ಲಿನ ಜನರು ಸಂಭ್ರಮಿಸಿದ್ದರು. ಗಲ್ಲಿ ಗಲ್ಲಿಗೆ ಫುಟ್​ಬಾಲ್ ತಂಡಗಳನ್ನು ಹೊಂದಿರುವ ದೇವರನಾಡಿನ ಕ್ರೀಡಾಪಟುವೊಬ್ಬ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ಅಷ್ಟೇ ಅಲ್ಲ ಖುದ್ದು ಕ್ರೀಡಾ ಸಚಿವರಿಂದ ಶಹಭಾಷ್​ಗಿರಿ ಪಡೆದುಕೊಂಡಿದ್ದಾನೆ. ಇಷ್ಟೆಲ್ಲಾ ಸುದ್ದಿಯಾಗಲು ಕಾರಣ ರಿದ್ವಾನ್ ಫುಟ್​ಬಾಲ್ ಕ್ರೇಜ್.

ಮಲಪ್ಪುರಂ ಜಿಲ್ಲೆಯಲ್ಲಿ ಇತ್ತೀಚೆಗೆ ಸೆವೆನ್ಸ್​ ಲೀಗ್​ ಫುಟ್​ಬಾಲ್​ ಟೂರ್ನಿ ಏಪರ್ಡಿಸಲಾಗಿತ್ತು. ಈ ಟೂರ್ನಿಯಲ್ಲಿ ಫಿಫಾ ಮಂಜೇರಿ ತಂಡ ಕಣದಲ್ಲಿತ್ತು. ಆದರೆ ಪಂದ್ಯವಿದ್ದ ದಿನವೇ ರಿದ್ವಾನ್​ ಎಂಬ ಆಟಗಾರನ ಮದುವೆ ಕೂಡ ಫಿಕ್ಸ್​ ಆಗಿತ್ತು. ಇದರಿಂದ ರಿದ್ವಾನ್​ ಅಂದು ವರನಾಗಿ ಮಂಟಪದಲ್ಲಿ ಮಿಂಚುತ್ತಿದ್ದರು. ಇದೇ ವೇಳೆ ಮೈದಾನಕ್ಕಿಳಿದ ಫಿಫಾ ಮಂಜೇರಿ ತಂಡಕ್ಕೆ ಬದಲಿ ಡಿಫೆಂಡರ್​ ಆಟಗಾರನ ಕೊರತೆ ಉಂಟಾಗಿದೆ.

ಈ ವಿಷಯ ಮದುವೆ ಮನೆಯಲ್ಲಿ ಟಿಪ್​ಟಾಪ್ ಡ್ರೆಸಿಂಗ್ ಮಾಡಿಕೊಂಡಿದ್ದ ರಿದ್ವಾನ್ ಕಿವಿಗೆ ಬಿದ್ದಿದೆ. ಈ ಹೊತ್ತಿಗೆ ವಧು-ವರರು ಜೊತೆಯಾಗಿ ನಿಂತು ಕ್ಯಾಮೆರಾಗೆ ಪೋಸ್​ ನೀಡುವ ಬಿಝಿಯಲ್ಲಿದ್ದರು. ಆದರೆ ತಂಡವು ಸಂಕಷ್ಟದಲ್ಲಿರುವುದು ತಿಳಿದ ರಿದ್ವಾನ್​ ಏನು ಮಾಡಬೇಕೆಂಬುದೇ ತೋಚಲಿಲ್ಲ. ಅದು ಕೂಡ ಸೆಮಿ ಫೈನಲ್​ ಮ್ಯಾಚ್. ಇದರಿಂದ ಮತ್ತೇನು ಯೋಚಿಸಲಿಲ್ಲ ರಿದ್ವಾನ್.

ಮದುಮಗಳೊಂದಿಗೆ ಕ್ಷಮಿಸು, ಐದೇ ಐದು ನಿಮಿಷದಲ್ಲಿ ಬರುವುದಾಗಿ ವಿನಂತಿಸಿ ಕೊಂಡಿದ್ದಾರೆ. ಹಾಗೆಯೇ ಯಾರಿಗೂ ಹೇಳದೇ ಮದುವೆ ಮಂಟಪದಿಂದ ರಿದ್ವಾನ್​ ಎಸ್ಕೇಪ್ ಆಗಿದ್ದಾನೆ. ಆಟದ ಸಮಕ್ಕೆ ಸರಿಯಾಗಿ ಮೈದಾನಕ್ಕಿಳಿದ ರಿದ್ವಾನ್ ಫಿಫಾ ಮಂಜೇರಿ ತಂಡವನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಮದುವೆ ದಿನವೇ ಮೈದಾನಕ್ಕೆ ಓಡಿದ ರಿದ್ವಾನ್​ ಮನೆಗೆ ಹಿಂತಿರುಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಅದಾಗ್ಯೂ ಎಲ್ಲರನ್ನು ಸಂಭಾಳಿಸಿದ ನವ ವರ ಸದ್ಯ ಖುಷಿಯಾಗಿದ್ದಾರೆ.

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಭಾರತದ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮೆಚ್ಚುಗೆ ಸೂಚಿಸಿದ್ದಾರೆ. ರಿದ್ವಾನ್​ ಅವರ ಕ್ರೀಡಾ ಪ್ರೇಮವನ್ನು ರಾಜ್ಯವರ್ಧನ್​ ಸಿಂಗ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಹೊಗಳಿ, ನನಗೆ ಈತನನ್ನು ಭೇಟಿಯಾಗಬೇಕೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಹಸೆಮಣೆ ಏರುವ ಸಂದರ್ಭದಲ್ಲಿ ಎಸ್ಕೇಪ್ ಆದ ರಿದ್ವಾನ್ ಸದ್ಯ ಮಂಜೇರಿಯ ಸ್ಟಾರ್​ ಆಗಿ ಬಿಟ್ಟಿದ್ದಾರೆ.

Comments are closed.