ಕ್ರೀಡೆ

ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮೇಲಿನ ಅಮಾನತು ಶಿಕ್ಷೆ ತತ್‏ಕ್ಷಣದಿಂದ ತೆರವು

Pinterest LinkedIn Tumblr

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಆಟಗಾರರಾದ ಕೆ.ಎಲ್​. ರಾಹುಲ್​ ಮತ್ತು ಹಾರ್ದಿಕ್​ ಪಾಂಡ್ಯ ಅವರ ಮೇಲಿದ್ದ ಅಮಾನತ್ತಿನ ಶಿಕ್ಷೆಯನ್ನು ಬಿಸಿಸಿಐ ಹಿಂಪಡೆದಿದೆ. ಬಾಲಿವುಡ್​ ಖ್ಯಾತ ನಿರ್ದೇಶಕ, ನಟ ಮತ್ತು ನಿರೂಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಇಬ್ಬರೂ ಆಟಗಾರರು ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಸಂದರ್ಶನದಲ್ಲಿ ಇಬ್ಬರೂ ಆಟಗಾರರು ಆಡಿದ ಮಾತುಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಇದೀಗ ಆಲ್​ ರೌಂಡರ್​ ಹಾರ್ದಿಕ್​ ಪಾಂಡ್ಯ ಮತ್ತು ಓಪನರ್​ ಕೆ.ಎಲ್​. ರಾಹುಲ್​ ಅವರಿಗೆ ಬಿಸಿಸಿಐ ಕೊಂಚ ರಿಲೀಫ್​ ನೀಡಿದೆ. ಬಿಸಿಸಿಐನ ನಿರ್ವಾಹಕ ಸಮಿತಿ ಇಬ್ಬರು ಆಟಗಾರರ ಮೇಲಿದ್ದ ಮಧ್ಯಂತರ ಅಮಾನತ್ತು ಆದೇಶವನ್ನು ತಕ್ಷಣಕ್ಕೆ ಆಚರಣೆಗೆ ಬರುವಂತೆ ಹಿಂಪಡೆದಿದೆ. ಬಿಸಿಸಿಐನ ಅಮಿಕಾಸ್​ ಕ್ಯೂರಿ ಪಿ.ಎಸ್​. ನರಸಿಂಹ ಅವರ ಸಲಹೆ ಪಡೆದು ಈ ನಿರ್ಧಾರಕ್ಕೆ ನಿರ್ವಾಹಕ ಸಮಿತಿ ಬಂದಿದೆ.

ಬಿಸಿಸಿಐ ಸಾರ್ವಜನಿಕ ತನಿಖಾಧಿಕಾರಿಯ ನೇಮಕವನ್ನು ಸುಪ್ರೀಂ ಕೋರ್ಟ್​ ಫೆಬ್ರವರಿ 5ಕ್ಕೆ ಮುಂದೂಡಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ಮುಂದಿನ ಕ್ರಮಕ್ಕೆ ಮುಂದಾಗದಂತೆ ಸಮಿತಿ ನಿರ್ಧರಿಸಿದೆ. ಜನವರಿ 11ರಂದು ಪಾಂಡ್ಯ ಮತ್ತು ರಾಹುಲ್​ರನ್ನು ಮಧ್ಯಂತರ ಅಮಾನತ್ತಿನಲ್ಲಿಟ್ಟು ಬಿಸಿಸಿಐ ಆದೇಶ ಹೊರಡಿಸಿತ್ತು.

ಏನಿದು ಪ್ರಕರಣ?

ಖ್ಯಾತ ಟಿವಿ ಟಾಕ್ ಶೋ ಕಾಫಿ ವಿತ್ ಕರಣ್​ನಲ್ಲಿ ಮಹಿಳೆಯರ ಬಗ್ಗೆ ಹಾರ್ದಿಕ್, ರಾಹುಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಇಬ್ಬರು ಆಟಗಾರರಿಂದ ಸ್ಪಷ್ಟನೆ ಕೋರಿತ್ತು. ಆದರೆ ಆಟಗಾರರ ಸ್ಪಷ್ಟನೆಯನ್ನು ಪರಿಗಣಿಸದ ಬಿಸಿಸಿಐ ವಿಚಾರಣೆ ನಡೆಸಲು ತೀರ್ಮಾನಿಸಿತ್ತು. ವಿಚಾರಣೆ ಮುಕ್ತಾಯಗೊಳ್ಳುವವರೆಗೆ ಇಬ್ಬರನ್ನು ಅಮಾನತಿನಲ್ಲಿಡಲು ನಿರ್ಧರಿಸಿ ಆದೇಶ ಹೊರಡಿಸಿತ್ತು. ಇದರಿಂದ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಟೀಂ ಇಂಡಿಯಾದ ಇಬ್ಬರು ಆಟಗಾರರು ವಾಪಸಾಗುವಂತಾಗಿತ್ತು. ಜತೆಗೆ ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್​ ವಿರುದ್ಧದ ಸರಣಿಯಿಂದಲೂ ಆಚೆ ಉಳಿಯುವಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಆಟಗಾರರ ವಿವಾದಕ್ಕೂ ತಂಡಕ್ಕೂ ಸಂಬಂಧವಿಲ್ಲ. ಹಾರ್ದಿಕ್‌ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಆಲ್​ರೌಂಡರ್​ ಸ್ಥಾನವನ್ನು ತುಂಬಲಿದ್ದಾರೆ ಎಂದು ತಿಳಿಸಿದ್ದರು.

ಆರಂಭದಲ್ಲಿ ತನಿಖೆ ಪೂರ್ಣಗೊಳ್ಳುವವರೆಗೂ ಇಬ್ಬರು ಆಟಗಾರ ವಿರುದ್ಧ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಆಟಗಾರರು ಖಾಸಗಿ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಬಗ್ಗೆ ಬಿಸಿಸಿಐ ನಿರ್ಬಂಧ ಹೇರುವ ಸಾಧ್ಯತೆಯೂ ಈ ಘಟನೆಯಿಂದ ಸೃಷ್ಟಿಯಾಗಿದೆ.

ಬಾಲಿವುಡ್​ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ ಚಾಟ್​ ಶೋ ಕಾಫಿ ವಿತ್ ಕರಣ್’ನಲ್ಲಿ ಹಾರ್ದಿಕ್ ಮತ್ತು ರಾಹುಲ್​ ಸ್ತ್ರೀ ದ್ವೇಷಿ ಹಾಗೂ ಕಾಮ ಪ್ರಚೋದಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆಟಗಾರರ ಇಂತಹ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ ಆಡಳಿತ ಮಂಡಳಿ ಆಟಗಾರರನ್ನು ಸರಣಿಯಿಂದ ಕೈ ಬಿಡುವಂತಹ ತೀರ್ಮಾನ ತೆಗೆದುಕೊಂಡಿದೆ.

Comments are closed.