ಕ್ರೀಡೆ

ಸಚಿನ್​ರಿಂದ ಬೇಸ್ ಎನಿಸಿಕೊಂಡಿದ್ದ ಆಟಗಾರನಿಗೆ 3 ವರ್ಷ ನಿಷೇಧ!

Pinterest LinkedIn Tumblr


ತಂಡದ ಸಹ ಆಟಗಾರನ ಮೇಲೆ ಅಶಿಸ್ತಿನ ವರ್ತನೆ ತೋರಿದ ಮುಂಬೈ ಅಂಡರ್​ 16 ತಂಡದ ನಾಯಕ ಮುಶೀರ್ ಖಾನ್​ಗೆ ಮುಂಬೈ ಕ್ರಿಕೆಟ್​ ಮಂಡಳಿ 3 ವರ್ಷಗಳ ಕಾಲ ನಿಷೇಧ ಹೇರಿದೆ. ಮುಶೀರ್​ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡಿದ್ದ ಸರ್ಫರಾಜ್ ಖಾನ್​ ಅವರ ಸಹೋದರನಾಗಿದ್ದು, ಸದ್ಯ ಮುಂಬೈ ಕಿರಿಯರ ತಂಡವನ್ನು ಪ್ರತಿನಿಧಿಸುತ್ತಿದ್ದಾನೆ.

ವಿಜಯ್ ಮರ್ಚೆಂಟ್​​ ಟೂರ್ನಿಯ ಪಂದ್ಯದ ವೇಳೆ, ತನ್ನ ಸಹ ಆಟಗಾರನ ಜೊತೆ ಅಶಿಸ್ತಿನಿಂದ ಮುಶೀರ್ ವರ್ತಿಸಿದ್ದನು. ಈ ಕುರಿತು ದೂರು ಬಂದಿದ್ದರಿಂದ 14 ರ ಹರೆಯದ ಆಟಗಾರರನ್ನು ಟೀಮ್​ ಆಡಳಿತ ಮಂಡಳಿ ವಿಚಾರಣೆ ನಡೆಸಿತ್ತು. ಈ ವೇಳೆ ಮುಶೀರ್​ ತಪ್ಪೊಪ್ಪಿಕೊಂಡಿದ್ದು, ಹೀಗಾಗಿ ಆತನ ಮೇಲೆ ಎಂಸಿಎ ಮೂರು ವರ್ಷಗಳ ಕಾಲ ನಿಷೇಧ ಹೇರಿದೆ ಎಂದು ಮುಂಬೈ ಕ್ರಿಕೆಟ್​ನ ಕಾರ್ಯದರ್ಶಿ ಉಮೇಶ್ ಖಾನ್ವಿಲ್ಕರ್ ತಿಳಿಸಿದ್ದಾರೆ.

ಆದರೆ ಕಿರಿಯ ಆಟಗಾರನ ಮೇಲೆ ವಿಧಿಸಿರುವ ಶಿಕ್ಷೆಯಿಂದ ಆತನ ಕ್ರಿಕೆಟ್​ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸುವಂತೆ ಕ್ರಿಕೆಟ್​ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮುಶೀರ್ ಈಗಾಗಲೇ ತನ್ನ ಅದ್ಭುತ ಪ್ರತಿಭೆಯ ಮೂಲಕ ಹಲವು ಕ್ರಿಕೆಟಿಗರ ಮನಗೆದ್ದಿದ್ದಾನೆ. ಸ್ಪಿನ್ ಮತ್ತು ಬ್ಯಾಟಿಂಗ್ ಕೌಶಲ್ಯದ ಮೂಲಕ 8 ನೇ ವಯಸ್ಸಿನಲ್ಲೇ ಮುಶೀರ್ ಕ್ರಿಕೆಟ್​ನ ವಂಡರ್​ ಕಿಡ್​ ಎಂದು ಕರೆಸಿಕೊಂಡಿದ್ದನು.

2013 ರಲ್ಲಿ ಮುಂಬೈ ಕ್ರಿಕೆಟ್​ ಅಸೋಶಿಯೇಷನ್​ ಆಯೋಜಿಸಿದ್ದ ಸಮಾರಂಭದಲ್ಲಿ ಮುಶೀರ್​ ಸಾಧನೆಗೆ ಖುದ್ದು ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್​ ಪ್ರಶಸ್ತಿ ನೀಡಿ, ಶಹಬ್ಬಾಸ್​ ಗಿರಿ ನೀಡಿದ್ದರು. ಮಗನ ಮೇಲೆ ಹೇರಲಾಗಿರುವ ನಿಷೇಧವನ್ನು ತೆಗೆದು ಹಾಕುವಂತೆ ಈಗಾಗಲೇ ಮುಶೀರ್ ಖಾನ್ ಪೋಷಕರು ಎಂಸಿಎ ಅನ್ನು ಕೇಳಿಕೊಂಡಿದ್ದಾರೆ. ಈ ಬಗ್ಗೆ ಮುಂಬೈ ಕ್ರಿಕೆಟ್​ ಅಸೋಶಿಯೇಷನ್​ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Comments are closed.