ಕ್ರೀಡೆ

ಸಚಿನ್ ಬಗ್ಗೆ ಮಾತನಾಡಿ ಎಡವಟ್ಟು ಮಾಡಿಕೊಂಡ ಪಾಂಡ್ಯ, ರಾಹುಲ್ ! ಅಷ್ಟಕ್ಕೂ ಹೇಳಿದ್ದೇನು…?

Pinterest LinkedIn Tumblr

ಮುಂಬೈ: ಭಾರತದ ಕ್ರಿಕೆಟ್ ದಂತಕಥೆ ಮತ್ತು ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್ ಬಗ್ಗೆ ಮಾತನಾಡಿ ಕ್ರಿಕೆಟಿಗರಾದ ಕೆಎಲ್ ರಾಹುಲ್​​, ಹಾರ್ದಿಕ್ ಪಾಂಡ್ಯ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ ಕಾಫೀ ವಿತ್​ ಕರಣ್​ ಸೀಸನ್​ 6 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾ ಇದೀಗ ಭಾರತೀಯ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಕರಣ್ ಜೋಹರ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಈ ಜೋಡಿ ಸಚಿನ್ ತೆಂಡೂಲ್ಕರ್ ಗಿಂತ ಹಾಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ ಎಂದು ಹೇಳಿದ್ದಾರೆ.

ಟೀಂ ಇಂಡಿಯಾದ ಇಬ್ಬರು ಆಟಗಾರರಾದ ಸಚಿನ್​ ತೆಂಡೂಲ್ಕರ್​ ಹಾಗೂ ವಿರಾಟ್​ ಕೊಹ್ಲಿ ಇಬ್ಬರಲ್ಲಿ ಯಾರು ಉತ್ತಮ ಬ್ಯಾಟ್ಸ್​ಮನ್​ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ವೇಳೆ ಸ್ವಲ್ಪವೂ ಯೋಚಿಸದೇ ರಾಹುಲ್ ಹಾಗೂ ಪಾಂಡ್ಯ ಕೊಹ್ಲಿ ಹೆಸರನ್ನು ಸೂಚಿಸಿದರು. ಇದು ಕ್ರಿಕೆಟ್​ ದೇವರು ಸಚಿನ್​ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.​ ಹಲವಾರು ನೆಟ್ಟಿಗರು ಉಭಯ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದು, ಆಟದ ಬಗ್ಗೆ ಏನೂ ಗೊತ್ತಿಲ್ಲದೇ ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ.

ಎಲ್ಲ ಕಾಲದಲ್ಲಿಯೂ ಸಚಿನ್​ ಓರ್ವ ಶ್ರೇಷ್ಠ ಆಟಗಾರ ಎಂದು ಕ್ರಿಕೆಟ್​ ದಂತಕತೆಗಳಾದ ವಿವಿಯನ್​ ರಿಚರ್ಡ್ಸ್​, ಡಾನ್​ ಬ್ರಾಡ್​ಮನ್, ಸುನಿಲ್​ ಗವಾಸ್ಕರ್​, ಬ್ರೆಟ್​ ಲಿ, ವಾಸಿಂ ಅಕ್ರಮ್​ ಹಾಗೂ ಗಂಗೂಲಿ ಮುಂತಾದ ಆಟಗಾರರೇ ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.​ ಪ್ರತಿಯೊಬ್ಬ ನಿಜ ಆಟಗಾರನಿಗೆ ಗೊತ್ತು ಯಾರು ಉತ್ತಮ ಬ್ಯಾಟ್ಸಮನ್​ ಎಂದು ಟ್ವಿಟರ್​ ಬಳಕೆದಾರನೊಬ್ಬ ಅಸಮಾಧಾನ ಹೊರಹಾಕಿದ್ದರೆ, ಮತ್ತೊಬ್ಬ ಕೇವಲ ಟೀಂನಲ್ಲಿ ಉಳಿಯುವುದಕ್ಕೆ ಈ ರೀತಿಯ ಚೀಪ್​ ಗಿಮಿಕ್​ಗಳನ್ನು ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

Comments are closed.