
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗುವುದರೊಂದಿಗೆ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ.
ಮಳೆ, ಮಂದಬೆಳಕಿನ ಅಡಚಣೆಯ ನಡುವೆ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ತವರು ನೆಲದಲ್ಲಿಯೇ 31 ವರ್ಷಗಳ ಬಳಿಕ ಫಾಲೋ ಆನ್ ಹೇರಿದ್ದ ಭಾರತ ತಂಡ ಇದೀಗ ಆಸಿಸ್ ನೆಲದಲ್ಲಿ ಸರಣಿ ಜಯದ ಮೂಲಕ ಅಮೋಘ ಜಯ ಸಾಧಿಸಿದೆ. ಈ ಹಿಂದೆ ಅಡಿಲೇಡ್ ಮತ್ತು ಮೆಲ್ಬೋರ್ನ್ ಟೆಸ್ಟ್ ಪಂದ್ಯಗಳನ್ನು ಗೆದ್ದು ಸರಣಿ ಮೇಲೆ ಬಿಗಿ ಹಿಡಿತ ಸಾಧಿಸಿದ್ದ ಕೊಹ್ಲಿ ಪಡೆ ಅಂತಿಮ ಪಂದ್ಯದಲ್ಲಿ ಡ್ರಾ ಆಗುವುದರೊಂದಿಗೆ ಸರಣಿಯನ್ನು 2-1ರಲ್ಲಿ ತನ್ನ ಕೈ ವಶ ಮಾಡಿಕೊಂಡಿದೆ.
71 ವರ್ಷಗಳ ಕಾಯುವಿಕೆ ಇಂದು ಅಂತ್ಯ!
ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಕ್ರಿಕೆಟ್ ಸರಣಿಗಾಗಿ ಮೊದಲ ವಿದೇಶ ಪ್ರವಾಸ ಮಾಡಿದ್ದು ಆಸ್ಟ್ರೇಲಿಯಾಕ್ಕೆ. 1947-48ರಿಂದ ಆರಂಭವಾಗಿ 2014-15ರವರೆಗೆ 11 ಬಾರಿ ಪೂರ್ಣಪ್ರಮಾಣದ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ, 2 ಬಾರಿ ಸರಣಿ ಸಮಬಲ ಸಾಧಿಸಿದ್ದೇ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈಗ ತನ್ನ 12ನೇ ಪ್ರವಾಸದಲ್ಲಿ ಕೊನೆಗೂ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಸರಣಿ ಗೆಲುವಿನ ಇತಿಹಾಸ ಬರೆದಿದೆ. ಭಾರತದ 71 ವರ್ಷಗಳ ಕಾಯುವಿಕೆ ಸೋಮವಾರ ಅಂತ್ಯವಾಗಿದೆ.
31 ವರ್ಷಗಳ ಆಸೀಸ್ ಪ್ರಾಬಲ್ಯಕ್ಕೆ ಬ್ರೇಕ್!
ಟೆಸ್ಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಅದರದ್ದೇ ನೆಲದಲ್ಲಿ ಪ್ರವಾಸಿ ತಂಡವೊಂದು ಕೊನೇ ಬಾರಿ ಫಾಲೋ ಆನ್ ಹೇರಿದ್ದು 1988ರಲ್ಲಿ. 31 ವರ್ಷಗಳ ನಂತರ ಆ ಸಾಧನೆಯನ್ನು ಭಾರತ ತಂಡ ಮಾಡಿತು. ತವರಿನಲ್ಲಿ ಕಳೆದ ಸತತ 172 ಪಂದ್ಯಗಳಿಂದ ಯಾವುದೇ ಎದುರಾಳಿ ತಂಡದಿಂದ ಫಾಲೋ ಆನ್ ಎದುರಿಸದೆ ಪ್ರಾಬಲ್ಯ ಮೆರೆದಿದ್ದ ಆಸೀಸ್, ಸಿಡ್ನಿಯಲ್ಲಿ ಕೊನೆಗೂ ಫಾಲೋಆನ್ ಬಲೆಗೆ ಬಿತ್ತು. ಭಾನುವಾರ 6 ವಿಕೆಟ್ಗೆ 236 ರನ್ಗಳಿಂದ 4ನೇ ದಿನದಾಟ ಮುಂದುವರಿಸಿದ ಆಸೀಸ್, ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ಗೆ 5 ವಿಕೆಟ್ ಗೊಂಚಲು ಒಪ್ಪಿಸಿ 300 ರನ್ಗೆ ಮೊದಲ ಇನಿಂಗ್ಸ್ ಮುಗಿಸಿತು. ಇದರಿಂದ 322 ರನ್ಗಳ ಬೃಹತ್ ಮುನ್ನಡೆ ಪಡೆದ ವಿರಾಟ್ ಕೊಹ್ಲಿ ಪಡೆ, ಆಸೀಸ್ ತಂಡಕ್ಕೆ ಫಾಲೋ ಆನ್ ಹೇರಿ ಮತ್ತೆ ಬ್ಯಾಟಿಂಗ್ ಆಹ್ವಾನಿಸಿತು. ದ್ವಿತೀಯ ಸರದಿಯಲ್ಲಿ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದ್ದಾಗ ಮತ್ತೆ ಮೋಡ ಹಾಗೂ ಮಂದ ಬೆಳಕು ಅಡ್ಡಿಯಾಗಿದ್ದರಿಂದ ದಿನದಾಟ ಬೇಗನೆ ಸ್ಥಗಿತಗೊಂಡಿತ್ತು.
1988ರಲ್ಲಿ ಆಸೀಸ್ ಕೊನೇ ಬಾರಿ ಇಂಗ್ಲೆಂಡ್ ತಂಡದಿಂದ ಫಾಲೋ ಆನ್ ಎದುರಿಸಿತ್ತು. ಇನ್ನು ಭಾರತ ಕೂಡ ಆಸೀಸ್ ನೆಲದಲ್ಲಿ 33 ವರ್ಷಗಳ ಬಳಿಕ ಫಾಲೋ ಆನ್ ಹೇರಿತು. 1986ರಲ್ಲಿ ಸಿಡ್ನಿಯಲ್ಲೇ ದಿಗ್ಗಜ ಕಪಿಲ್ ದೇವ್ ಸಾರಥ್ಯದಲ್ಲಿ ಫಾಲೋ ಆನ್ ಹೇರಿತ್ತು. ಒಟ್ಟಾರೆ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡ ಆಸೀಸ್ಗೆ 4ನೇ ಬಾರಿ ಫಾಲೋ ಆನ್ ಹೇರಿತು. ಆಸೀಸ್ನಲ್ಲಿ 2 ಸಲ ಹಾಗೂ 1979-80ರಲ್ಲಿ ದೆಹಲಿ ಮತ್ತು ಮುಂಬೈಯಲ್ಲಿ ತಲಾ ಒಮ್ಮೆ ಫಾಲೋ ಆನ್ ಹೇರಿತ್ತು.
Comments are closed.