ಕ್ರೀಡೆ

ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸಿಸ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ; ಗೆಲುವಿನ ನಗೆ ಬೀರಿದ ಕೊಹ್ಲಿ ಪಡೆ

Pinterest LinkedIn Tumblr

ಮೆಲ್ಬೋರ್ನ್​​: ಇಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ 137 ರನ್​ಗಳ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಟೆಸ್ಟ್​​ ಇತಿಹಾಸದಲ್ಲಿ 150ನೇ ಜಯ ಸಾಧಿಸಿದ ದಾಖಲೆ ಮಾಡಿದೆ.

ಭಾರತ ನೀಡಿದ್ದ 399 ರನ್​ಗಳ ಗುರಿ ಬೆನ್ನತ್ತಿದ ಆಸೀಸ್ 261 ರನ್​​ಗೆ ಆಲೌಟ್ ಆಗಿ ಸೋಲೊಪ್ಪಿಗೊಂಡಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ 2-1 ರ ಮುನ್ನಡೆ ಸಾಧಿಸಿದೆ.

37 ವರ್ಷಗಳ ನಂತರ ಮೆಲ್ಬೋರ್ನ್​ ಅಂಗಳದಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಗೆಲುವಿಗೆ 399 ರನ್​ಗಳ ಸವಾಲಿನ ಮೊತ್ತ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾ ತಂಡ 89.3 ಓವರ್​ಗಳಲ್ಲಿ 261ರನ್​ಗಳಿಗೆ ಸರ್ವ ಪತನ ಕಂಡಿತು. ಈ ಮೂಲಕ ಆಸಿಸ್​ ವಿರುದ್ಧ ಭಾರತ 137 ರನ್​ಗಳ ಭಾರಿ ಅಂತರದ ಗೆಲುವು ದಾಖಲಿಸಿದೆ. ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಅಂತರದ ಮುನ್ನಡೆ ಸಾಧಿಸಿದೆ.

ಈ ಪಂದ್ಯಕ್ಕೂ ಮೊದಲು ಮೆಲ್ಬೋರ್ನ್​ನಲ್ಲಿ 12 ಪಂದ್ಯಗಳನ್ನ ಆಡಿದ್ದ, ಟೀಮ್ ಇಂಡಿಯಾ ಕೇವಲ 2 ಬಾರಿ ಮಾತ್ರ ಜಯ ಕಂಡಿತ್ತು. 1981 ರಲ್ಲಿ ಬಾರಿ ಭಾರತ ಇಲ್ಲಿ ಕೊನೆಯ ಬಾರಿ ಗೆಲುವಿನ ನಗೆ ಬೀರಿತ್ತು. ಅದಾದ ನಂತರ 7 ಟೆಸ್ಟ್​​ ಗಳನ್ನಾಡಿದ್ದರೂ ಮತ್ತೆ ಜಯ ಗಳಿಸಲು ಸಾಧ್ಯವಾಗಿರಲಿಲ್ಲ. ಆದ್ರೆ ಈ ಬಾರಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತಂಡ ಕಾಂಗರೂ ಪಡೆಯನ್ನು ಬಗ್ಗುಬಡಿದಿದೆ.

1981ರ ಬಳಿಕ 1985ರಲ್ಲಿ ಮತ್ತೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆದಿತ್ತು. ಅಂದು ಅಲನ್ ಬಾರ್ಡರ್ ಅವರ ಸಾಹಸದಿಂದಾಗಿ ಆಸಿಸ್ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಬಳಿಕ 1991ರಲ್ಲಿ ಮತ್ತೆ ಅಜರುದ್ದೀನ್ ನೇತೃತ್ವದ ಟೀಂ ಇಂಡಿಯಾ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಇದೇ ಎಂಸಿಜಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಿತ್ತು. ಅದು ನಾಯಕರಾಗಿ ಅಜರುದ್ದೀನ್ ಅವರಿಗೆ ಮೊದಲ ಪಂದ್ಯಕೂಡ ಆಗಿತ್ತು. ಆದರೆ ಅಂದು ಭಾರತ ತಂಡ ಕಳಪೆ ಪ್ರದರ್ಶನ ತೋರಿ ಆಸಿಸ್ ವಿರುದ್ಧ ವಿಕೆಟ್ ಗಳ ಹೀನಾಯ ಸೋಲು ಕಂಡಿತ್ತು.

ಮತ್ತೆ 1999ರಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಎದುರಿಸಿತ್ತು. ಅಂದು ಸಚಿನ್ ತೆಂಡೂಲ್ಕರ್ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ ತಂಡ ಸೋತಿತ್ತು.

2003ರಲ್ಲಿ ಮತ್ತೆ ಆಸಿಸ್ ಗೆ ಪಯಣ ಆರಂಭಿಸಿದ್ದ ಟೀಂ ಇಂಡಿಯಾ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡಕ್ಕೆ ಪ್ರಬಲ ಪೈಪೋಟಿ ನೀಡಿತ್ತು. ಅಂದು ಸೆಹ್ವಾಗ್ ಕಾಂಗರೂಗಳ ವಿರುದ್ಧ 195 ರನ್ ಬಾರಿಸಿ ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಸಿದ್ದರು. ಆದರೆ ಆಸಿಸ್ ನಾಯಕ ರಿಕ್ಕಿಪಾಂಟಿಂಗ್ ಅವರ ದ್ವಿಶತಕ ಸಾಧನೆಯಿಂದಾಗಿ ಅಂದಿನ ಪಂದ್ಯವೂ ಭಾರತದ ಕೈ ತಪ್ಪಿತು. ಆ ಪಂದ್ಯವನ್ನು ಭಾರತ ಸೋತಿತು.

ಇದಾದ ಬಳಿಕ 2007ರಲ್ಲಿ ಮತ್ತೆ ಆಸ್ಟ್ರೇಲಿಯಾ ಮತ್ತು ಭಾರತ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಮುಖಾಮುಖಿಯಾದವು. ಅಂದು ಖ್ಯಾತ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ಅವರು ಭಾರತದ ಸಾರಥ್ಯ ವಹಿಸಿದ್ದರು. ಅಂದಿನ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ತಂಡ ಹೀನಾಯ ಸೋಲು ಕಂಡಿತು. ಆ ಪಂದ್ಯದಲ್ಲಿ ಸಚಿನ್ ಗಳಿಸಿದ 62 ರನ್ ಗಳು ಮಾತ್ರ ಭಾರತದ ಮಾನ ಕಾಪಾಡಿತ್ತು. ಅದೇ ಪಂದ್ಯದಲ್ಲಿ ಜಹೀರ್ ಖಾನ್ 4 ವಿಕೆಟ್ ಪಡೆದು ಮಿಂಚಿದ್ದರು. ನಂತರ 2011ರಲ್ಲಿ ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಮತ್ತೆ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತ ತಂಡ ಈ ಸಲ ಖಂಡಿತಾ ಬಾಕ್ಸಿಂಗ್ ಡೇ ಪಂದ್ಯ ಗೆಲ್ಲುತ್ತದೆ ಎಂದು ಭಾವಿಸಲಾಗಿತ್ತು. ಅದಕ್ಕೆ ತಕ್ಕಂತೆ ಜಹೀರ್ ಖಾನ್, ಉಮೇಶ್ ಯಾದವ್, ಇಶಾಂತ್ ಶರ್ಮಾ ಕೂಡ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿನ ಬ್ಯಾಟಿಂಗ್ ವೈಫಲ್ಯದಿಂದಾಗಿ ಆ ಪಂದ್ಯವನ್ನು ಭಾರತ 122 ರನ್ ಗಳ ಅಂತರದಲ್ಲಿ ಸೋತಿತ್ತು.

2014ರಲ್ಲಿ ಮತ್ತೆ ಆಸಿಸ್ ತಂಡವನ್ನು ಭಾರತ ತಂಡ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಎದುರಿಸಿತ್ತು. ಅಂದು ಪ್ರಸ್ತುತ ಬಾಲ್ ಟ್ಯಾಂಪರಿಂಗ್ ಪ್ಪಕರಣದಲ್ಲಿ ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ ಆಸಿಸ್ ತಂಡದ ನಾಯಕರಾಗಿದ್ದರು. ಅಂದು ವಿರಾಟ್ ಕೊಹ್ಲಿ, ರಹಾನೆ ಶತಕ ಸಿಡಿಸಿದ್ದರೆ, ಆಸಿಸ್ ಪರ ನಾಯಕ ಸ್ಮಿತ್ ಕೂಡ ಶತಕ ಸಿಡಿಸಿದ್ದರು. ಕೇವಲ 1 ರನ್ ನಿಂದ ಶಾನ್ ಮಾರ್ಷ್ ಶತಕ ವಂಚಿತರಾಗಿದ್ದರು. ತೀರಾ ಜಿದ್ದಾಜಿದ್ದಿನಿಂದ ಕೂಡಿದ್ದ ಆ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು.

ಅಂದು ಅಂತಿಮ ದಿನ 384 ರನ್ ಗಳ ಗುರಿ ಬೆನ್ನು ಹತ್ತಿದ್ದ ಭಾರತ ತಂಡ ಕೇವಲ 142 ರನ್ ಗಳಿಗೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಧೋನಿ ಹಾಗೂ ಆರ್ ಅಶ್ವಿನ್ ಸಾಹಸದಿಂದಾಗಿ ಭಾರತ ಡ್ರಾ ಸಾಧಿಸಿತು.

ಇದೀಗ ಹಳೆಯ ಕಹಿ ನೆನಪುಗಳನ್ನು ಬದಿಗೊತ್ತಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ನಗೆ ಬೀರಿದೆ. ಆ ಮೂಲಕ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸಿಸ್ ಅಧಿಪತ್ಯ ಕೊನೆಗೂ ಅಂತ್ಯವಾಗಿದೆ.

Comments are closed.