
ಮುಂಬೈ: ಇಂದು (ಗುರುವಾರ) ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಬದುಕಿನಲ್ಲಿ ಮರೆಯಲಾಗದ ದಿನ. ಇಂದಿಗೆ ಸರಿಯಾಗಿ 29 ವರ್ಷದ ಹಿಂದೆ ಅವರು ಮೊಟ್ಟ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿ ಕ್ರಿಕೆಟ್ ಮೈದಾನಕ್ಕಿಳಿದಿದ್ದರು. ತಮ್ಮ ಜೀವನದಲ್ಲಿ ಮರೆಯಲಾಗದ ಈ ಸುದಿನವನ್ನು ಸಚಿನ್ ಟ್ವಿಟ್ಟರ್ ನಲ್ಲಿ ನೆನಪಿಸಿಕೊಂಡಿದ್ದಾರೆ.
“ಮಾಸ್ಟರ್ ಬ್ಲಾಸ್ಟರ್ ಸಚಿನ್ ಟ್ವಿಟ್ಟರ್ ನಲ್ಲಿ “ಪ್ರತಿ ವರ್ಷ ನಾನು ಈ ದಿನವನ್ನು ನಾನು ನನ್ನ ಜೀವನದ ಹಳೆ ನೆನಪನ್ನು ಸ್ಮರಿಸುವ ದಿನವಾಗಿಸಿಕೊಂಡಿದ್ದೇನೆ.ಮೊಟ್ಟ ಮೊದಲ ಬಾರಿಗೆ ನಾನು ಭಾರತವನ್ನು ಪ್ರತಿನಿಧಿಸಿದ ದಿನವಿದು.ದೇಶದ ಪರವಾಗಿ ಆಟವಾಡಿದ್ದಲ್ಲದೆ 24 ವರ್ಷ ಕಾಲ ನನ್ನ ಆಟದ ಮೂಲಕ ದೇಶವನ್ನು ಪ್ರತಿನಿಧಿಸಿದ್ದಕ್ಕೆ ನನಗೆ ಹೆಮ್ಮೆಯಿದೆ” ಎಂದಿದ್ದಾರೆ.
ಮುಂಬೈ ಮೂಲದ ಸಚಿನ್ ತೆಂಡೂಲ್ಕರ್ ನವೆಂಬರ್ 15, 1989 ರಂದು ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ನಡೆದಿದ್ದ ಟೆಸ್ಟ್ ಕ್ರಿಕೆಟ್ ಮೂಲಕ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು.ಸಚಿನ್ ತಮ್ಮ 16ನೇ ವಯಸ್ಸಿಗೆ ಕ್ರಿಕೆಟ್ ಅಂಗಳಕ್ಕಿಳಿದು ಅಂತರಾಷ್ಟ್ರೀಯ ಪಂದ್ಯವನ್ನು ಆಡಲು ಪ್ರಾರಂಭಿಸಿದ್ದರು. ಇನ್ನು ಪಾಕಿಸ್ತಾನದ ವೇಗದ ಬೌಲರ್ ವಕಾರ್ ಯೂನಿಸ್ ಸಹ 17ನೇ ಪ್ರಾಯದಲ್ಲಿ ಅದೇ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ತಂಡ ಸೇರಿದ್ದರು.
ತಮ್ಮ ಮೊದಲ ಪಂದ್ಯದಲ್ಲಿ ಸಚಿನ್ ಮೊದಲ ಇನ್ನಿಂಗ್ಸ್ ನಲ್ಲಿ 15 ರನ್ ಗಳಿಸಿದ್ದರು. ವಕಾರ್ ಬೌಲಿಂಗ್ ಗೆ ಬಲಿಯಾದ ಸಚಿನ್ ಗೆ ಎರಡನೇ ಇನ್ನಿಂಗ್ಸ್ ಆಡಲು ಅವಕಾಶ ದೊರಕಲಿಲ್ಲ.ಆ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿತ್ತು.
ಕಾಕತಾಳೀಯವೆಂಬಂತೆ 2013ರ ಇದೇ ದಿನ ಮ್ಮುಂಬೈನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಸಚಿನ್ ಪಾಲಿನ ಕಡೆಯ ಪಂದ್ಯವಾಗಿತ್ತು.ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 74 ರನ್ ಗಳಿಸಿದ್ದ ಸಚಿನ್ ಎನ್. ಡಿಯೋನರೈನ್ ಬೌಲಿಂಗ್ ನಲ್ಲಿ ಔಟಾಗಿದ್ದರು. ಭಾರತವು ಈ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 126 ರನ್ ಗಳಿಂದ ಜಯಿಸಿತ್ತು.
ಅವರ ಅತ್ಯುತ್ತಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಸಚಿನ್ 200 ಟೆಸ್ಟ್ ಗಳ ಮೂಲಕ 51 ಟೆಸ್ಟ್ ಶತಕಗಳೂ ಸೇರಿದಂತೆ 53.78 ರ ಸರಾಸರಿಯಲ್ಲಿ15921 ರನ್ ಗಳಿಸಿದ್ದರು.463ಏಕದಿನ ಪಂದ್ಯಗಳಲ್ಲಿ 44.83 ಸರಾಸರಿಯಲ್ಲಿ 18426 ರನ್ ಬಾರಿಸಿದ್ದರು.
Comments are closed.