ಮುಂಬೈ: ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೀಮ್ ಇಂಡಿಯಾ ಊಟದ ಮೆನುವಿನಿಂದ ಬೀಫ್ ತೆಗೆದು ಹಾಕುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಮನವಿ ಮಾಡಿದೆ.
ಇತ್ತೀಚಿಗೆ ಇಬ್ಬರು ಸದಸ್ಯರ ಪರಿಶೀಲನಾ ತಂಡ ಆಸಿಸ್ ಗೆ ಭೇಟಿ ನೀಡಿದಾಗ ಟೀಂ ಇಂಡಿಯಾ ಊಟದ ಮೆನುವಿನಲ್ಲಿ ಗೋಮಾಂಸ ಇರುವುದು ಪತ್ತೆಯಾಗಿದ್ದು, ಅದನ್ನು ಮೆನುವಿನಿಂದ ತೆಗೆದು ಹಾಕುವಂತೆ ಬಿಸಿಸಿಐ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಮನವಿ ಮಾಡಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.
ಇಂಗ್ಲೆಂಡ್ ಪ್ರವಾಸದ ವೇಳೆ ಟೀಂ ಇಂಡಿಯಾಗೆ ನೀಡಿರುವ ಊಟದ ಮೆನುವಿನಲ್ಲಿ ಗೋಮಾಂಸವನ್ನು ಪಟ್ಟಿ ಮಾಡಿರುವುದಕ್ಕೆ ನೇಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಭೋಜನ ವಿರಾಮಕ್ಕೆ ಇರುವ ಆಹಾರಗಳ ಪಟ್ಟಿಯನ್ನು ಬಿಸಿಸಿಐ ತನ್ನ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿತ್ತು. ಇದರಲ್ಲಿದ್ದ ಬ್ರೇಸ್ಡ್ ಬೀಫ್ ಪಾಸ್ತಾ ಆಹಾರವನ್ನು ಅಭಿಮಾನಿಗಳು ಪ್ರಶ್ನಿಸಿದ್ದರು.
ಈ ಬಾರಿ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಇದು ದೇಶದಲ್ಲಿ ಅತಿ ಹೆಚ್ಚು ಸೂಕ್ಷ್ಮತೆಯನ್ನು ಪಡೆದ ವಿಚಾರವಾಗಿರುವುದರಿಂದ ಆಸಿಸ್ ಪ್ರವಾಸದ ವೇಳೆ ಊಟದ ಮೆನುವಿನಿಂದ ಬೀಫ್ ಕೈಬಿಡುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಕೇಳಿಕೊಂಡಿದೆ.
ನವೆಂಬರ್ 21ರಿಂದ ಆರಂಭವಾಗಲಿರುವ ಆಸಿಸ್ ಪ್ರವಾಸದಲ್ಲಿ ಭಾರತ ಮೂರು ಏಕದಿನ, ನಾಲ್ಕು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
Comments are closed.