ಕ್ರೀಡೆ

6 ಎಸೆತದಲ್ಲಿ ಆರು ಸಿಕ್ಸರ್, 12 ಎಸೆತದಲ್ಲಿ ಅರ್ಧಶತಕ ! ದಾಖಲೆ ಮಾಡಿದ್ದು ಯಾರು..?

Pinterest LinkedIn Tumblr

ಕಾಬುಲ್: ಆರು ಎಸೆತದಲ್ಲಿ 6 ಸಿಕ್ಸರ್, ಒಂದೇ ಓವರ್ ನಲ್ಲಿ ಹರಿದುಬಂದಿದ್ದು, ಬರೊಬ್ಬರಿ 37 ರನ್, ಕೇವಲ 12 ಎಸೆತದಲ್ಲಿ ಆರ್ಧಶತಕ… ಇದು ಚೊಚ್ಚಲ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ನಲ್ಲಿ ಕಂಡುಬಂದ ದಾಖಲೆ..

ಹೌದು.. ಆಫ್ಘಾನಿಸ್ತಾನ ಪ್ರೀಮಿಯರ್​​ ಲೀಗ್​ನಲ್ಲಿ ಉದಯೋನ್ಮುಖ ಕ್ರಿಕೆಟಿಗ ಹಜರತ್​ ಉಲ್ಲಾ ಝಾಜೈ ಆರು ಎಸೆತಗಳಿಗೆ ಆರು ಸಿಕ್ಸರ್​ ಸಿಡಿಸಿದ್ದಲ್ಲದೇ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ.

ಶಾರ್ಜಾ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ಬಾಲ್ಕ್​ ಲೆಜೆಂಡ್ಸ್​ ವಿರುದ್ಧದ ಕಾಬೂಲ್​ ಜವಾನ್​ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಝಾಜೈ ನಾಲ್ಕನೇ ಓವರ್​​ನಲ್ಲಿ ಈ ಸಾಧನೆ ಮಾಡಿದ್ದು, ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ವಿಶ್ವಕ್ಕೆ ಸಾರಿದ್ದಾರೆ. ಬಾಲ್ಕ್​ ಲೆಜೆಂಡ್ಸ್​ ತಂಡದ ಅಬ್ದುಲ್ಲಾ ಮಜಾರಿ ಬೌಲಿಂಗ್ ನಲ್ಲಿ ಆರು ಸಿಕ್ಸರ್​ ಬಾರಿಸಿ ಜಾಝೈ ಈ ಸಾಧನೆ ಮಾಡಿದ ಕೆಲವೇ ಕ್ರಿಕೆಟಿಗರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಬಾಲ್ಕ್​ ಲೆಜೆಂಡ್ಸ್​ ನೀಡಿದ 225 ರನ್​ಗಳ ಬೃಹತ್​ ಮೊತ್ತದ ಗುರಿ ಬೆನ್ನುಹತ್ತಿದ ಕಾಬೂಲ್​ಪರ ಝಾಜೈ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಎರಡನೇ ಓವರ್​ನಲ್ಲಿ 20 ರನ್​ ಸಿಡಿಸಿದ ಅವರು ನಾಲ್ಕನೇ ಓವರ್​ನಲ್ಲಿ 6 ಎಸೆತಗಳನ್ನು ಸಿಕ್ಸರ್ ​ಗಟ್ಟಿದರು. ಇದರ ಜೊತೆಗೆ ಒಂದು ವೈಡ್​ ಕೂಡ ಸೇರಿ ಒಟ್ಟಾರೆ ಒಂದು ಓವರ್ ನಲ್ಲಿ 37 ರನ್​ ದಾಖಲಾದವು.

ಈ ಹಿಂದೆ ಏಕದಿನ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್​, ಭಾರತದ ಯುವರಾಜ್​ ಸಿಂಗ್​ ಟಿ20 ವಿಶ್ವಕಪ್​ ನಲ್ಲಿ, ಗ್ಯಾರ್ ಫೀಲ್ಡ್​ ​ಸೋಬರ್ಸ್​ ಹಾಗೂ ರವಿಶಾಸ್ತ್ರಿ ಟೆಸ್ಟ್​ ಕ್ರಿಕೆಟ್​ನಲ್ಲಿ, ಅಲೆಕ್ಸ್​ ಹೇಲ್ಸ್​ ಹಾಗೂ ರಾಸ್​ ವೈಟ್ಲೆ ನಾಟ್​ವೆಸ್ಟ್​ ಟಿ20 ಕ್ರಿಕೆಟ್​ನಲ್ಲಿ, ಪೊಲಾರ್ಡ್​ ಬಿಗ್​ಬ್ಯಾಸ್​ ಅಭ್ಯಾಸ ಪಂದ್ಯದಲ್ಲಿ, ಶಾರ್ದೂಲ್​ ಟಾಕೂರ್ ​ಹಾಗೂ ರವೀಂದ್ರ ಜಡೇಜಾ ಕ್ಲಬ್​ ಮಟ್ಟದ ಕ್ರಿಕೆಟ್​ನಲ್ಲಿ 6 ಬಾಲಿಗೆ ಆರು ಸಿಕ್ಸರ್​ ಸಿಡಿಸಿದ ದಾಖಲೆ ಹೊಂದಿದ್ದರು.

ಜಾಝೈ 6 ಸಿಕ್ಸರ್ ಬಾರಿಸಿರುವ ವಿಡಿಯೋವನ್ನು ಆಫ್ಗಾನಿಸ್ತಾನ ಪ್ರೀಮಿಯರ್ ಲೀಗ್ ಆಯೋಜಕರು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

Comments are closed.