ಕ್ರೀಡೆ

‘ಚಿನ್ನದ ಹುಡುಗಿ’ ಹಿಮಾ ದಾಸ್ ಬಗ್ಗೆ ‘ಸಿಲ್ಲಿ ಟ್ವೀಟ್’ ಮಾಡಿದ್ದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ; ಭಾರತೀಯರಿಂದ ಆಕ್ರೋಶ

Pinterest LinkedIn Tumblr

ನವದೆಹಲಿ: ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಡರ್ -20 ಕ್ರೀಡಾಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಅಸ್ಸಾಂ ಹುಡುಗಿ ಹಿಮಾ ದಾಸ್ ನ್ನು ಇಡೀ ಭಾರತವೇ ಇಂದು ಕೊಂಡಾಡುತ್ತಿದೆ.

ಈಕೆಯ ಕುರಿತು ಮೊನ್ನೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮಾಡಿದ್ದ ಒಂದು ಟ್ವೀಟ್ ನಿಂದ ಭಾರತೀಯರ ಸಿಟ್ಟು, ಆಕ್ರೋಶಕ್ಕೆ ಕಾರಣವಾಗಿ ಕೊನೆಗೆ ಕ್ಷಮೆ ಕೇಳಿದ್ದೂ ಆಯಿತು.

ಎರಡು ದಿನಗಳ ಹಿಂದೆ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲ ಸ್ಥಾನ ಗಳಿಸಿ ಅಂತಿಮ ಸುತ್ತು ಪ್ರವೇಶಿಸಿ ಚಿನ್ನದ ಪದಕ ಬೇಟೆಗೆ ಸಿದ್ಧರಾಗಿದ್ದ ಹಿಮಾ ದಾಸ್ ಗೆ ಅಭಿನಂದನೆ ಸಲ್ಲಿಸಿ ಪ್ರೋತ್ಸಾಹಿಸುವುದು ಬಿಟ್ಟು ಆಕೆಗೆ ಇಂಗ್ಲಿಷ್ ಮಾತನಾಡಲು ಅಷ್ಟು ಚೆನ್ನಾಗಿ ಬರುವುದಿಲ್ಲ ಎಂಬುದನ್ನು ಟ್ವೀಟ್ ನಲ್ಲಿ ಅಥ್ಲೆಟಿಕ್ಸ್ ಫೆಡರೇಶನ್ ಒತ್ತಿ ಹೇಳಿದಂತೆ ಕಂಡುಬಂದಿದ್ದು ಸುಳ್ಳಲ್ಲ.

ಹಿಮಾ ದಾಸ್ ಗೆ ಇಂಗ್ಲಿಷ್ ಸರಾಗವಾಗಿ ಮಾತನಾಡಲು ಬಾರದಿದ್ದರೂ ಕೂಡ ಉತ್ತಮ ಸಾಧನೆ ತೋರಿದ್ದಾಳೆ. ಆಕೆಗೆ ಬೆಸ್ಟ್ ವಿಶಸ್ ಎಂದು ಹೇಳಿ ಅಥ್ಲೆಟಿಕ್ಸ್ ಫೆಡರೇಶನ್ ಟ್ವೀಟ್ ಮಾಡಿದ ಕೆಲವೇ ಹೊತ್ತಿನಲ್ಲಿ ಅದಕ್ಕೆ ಟೀಕೆಗಳು ಸಾಕಷ್ಟು ವ್ಯಕ್ತವಾದವು. ಈ ಸಂದರ್ಭದಲ್ಲಿ ಇಂತಹ ಟ್ವೀಟ್ ಬೇಕಾಗಿರಲಿಲ್ಲ, ಆಕೆಯ ಸಾಧನೆಯನ್ನು ಮೆಚ್ಚಿ ಪ್ರೋತ್ಸಾಹಿಸುವುದು ಬಿಟ್ಟು ಅಪ್ರಸ್ತುತ ಮಾತುಗಳನ್ನು ಏಕೆ ಆಡಬೇಕು ಎಂದು ಜನರು ಟೀಕಿಸಿ ಟ್ವೀಟ್ ಮಾಡುತ್ತಿದ್ದರು.

ನಂತರ ಇದಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಕ್ಷಮೆ ಕೇಳಿದ್ದೂ ಆಯಿತು. ಹಿಮಾಳ ಇಂಗ್ಲಿಷ್ ಭಾಷೆಯನ್ನು ಕೆಣಕುವುದು ನಮ್ಮ ಉದ್ದೇಶವಾಗಿರಲಿಲ್ಲ. ನ್ಯೂನತೆ ನಡುವೆಯೂ ಅವರ ಉತ್ಸಾಹ, ಸ್ಫೂರ್ತಿ ಮೈದಾನದ ಒಳಗೆ ಮತ್ತು ಹೊರಗೆ ಕಡಿಮೆಯಾಗಿಲ್ಲ ಎಂದು ಹೇಳುವುದು ನಮ್ಮ ಉದ್ದೇಶವಾಗಿತ್ತು ಎಂದು ಟ್ವೀಟ್ ಮಾಡಿ ಸಮಜಾಯಿಷಿ ನೀಡಿತು.

Comments are closed.