ಕ್ರೀಡೆ

ಫೀಫಾ ವಿಶ್ವಕಪ್ 2018 ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿದ ಕ್ರೊವೇಷಿಯಾ ಫೈನಲ್ ಗೆ ಲಗ್ಗೆ

Pinterest LinkedIn Tumblr

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕ್ರೊವೇಷಿಯಾ ತಂಡ 2-1 ಗೋಲುಗಳ ಅಂತರದಲ್ಲಿ ಮಣಿಸಿ, ಫೈನಲ್ ಗೇರಿದೆ.

ಪಂದ್ಯ ಆರಂಭದಲ್ಲೇ ಕ್ರೊವೇಷಿಯಾಗೆ ಆಘಾತ ನೀಡಿದ ಟ್ರಿಪ್ಪಿರ್ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಮುನ್ನಡೆ ತಂದು ಕೊಟ್ಟರು. ಪಂದ್ಯ ಆರಂಭವಾದ 5ನೇ ನಿಮಿಷದಲ್ಲೇ ಕ್ರೊವೇಷಿಯಾ ಮಾಡಿದ ಯಡವಟ್ಟನ್ನು ಸಮರ್ಥವಾಗಿ ಬಳಸಿಕೊಂಡ ಇಂಗ್ಲೆಂಡ್ ತಂಡ ಕೀರನ್ ಟ್ರಿಪ್ಪಿರ್ ಮೂಲಕ ಗೋಲು ಗಳಿಸಿತು. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಡೆಲೆ ಅಲಿ ಮತ್ತು ಕ್ರೊವೇಷಿಯಾ ತಂಡದ ಮೊಡ್ರಿಕ್ ನಡುವೆ ಚೆಂಡಿಗಾಗಿ ತೀವ್ರ ಗೊಂದಲ ಏರ್ಪಟ್ಟಿತು, ಈ ವೇಳೆ ಮೊಡ್ರಿಕ್ ಮಾಡಿದ ಯಡವಟ್ಟು ಇಂಗ್ಲೆಂಡ್ ತಂಡಕ್ಕೆ ಫ್ರೀಕಿಕ್ ಅವಕಾಶ ತಂದು ಕೊಟ್ಟಿತು.

ಇದನ್ನು ಸದುಪಯೋಗ ಪಡಿಸಿಕೊಂಡ ಕೀರನ್ ಟ್ರಿಪ್ಪರ್ ಗೋಲ್ ಪೋಸ್ಟ್ ಕಾರ್ನರ್ ನತ್ತ ಬಲವಾಗಿ ಬಾರಿಸಿದರು. ಇದನ್ನು ತಡೆಯುವಲ್ಲಿ ಕ್ರೊವೇಷಿಯಾ ಗೋಲ್ ಕೀಪರ್ ವಿಫಲವಾದರು. ಪರಿಣಾಮ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಮುನ್ನಡೆ ದೊರೆಯಿತು. ಇದು ಕೀರನ್ ಟ್ರಿಪ್ಪರ್ ಗೆ ಇದು ಅಂತಾರಾಷ್ಟ್ರೀಯ ಮಟ್ಟದ ಮೊದಲ ಗೋಲಾಗಿತ್ತು.

ಬಳಿಕ ಕ್ರೊವೇಷಿಯಾ ಮತ್ತು ಇಂಗ್ಲೆಂಡ್ ತಂಡಗಳು ಗೋಲಿಗಾಗಿ ಭಾರಿ ಹರಸಾಹಸ ಪಟ್ಟವು. ಆದರೆ ಪಂದ್ಯದ 68ನೇ ನಿಮಿಷದಲ್ಲಿ ಕ್ರೊವೇಷಿಯಾದ ಇವಾನ್ ಪೆರಿಸಿಕ್ ಗೋಲು ಭಾರಿಸುವ ಮೂಲಕ ಕ್ರೊವೇಷಿಯಾ ತಂಡ ಸಮಬಲ ಸಾಧಿಸುವಂತೆ ನೋಡಿಕೊಂಡರು.

ಪಂದ್ಯದ ಅವಧಿ ಮುಕ್ತಾಯದ ವೇಳೆಗೆ ಎರಡೂ ತಂಡಗಳು 1-1ಗೋಲುಗಳ ಸಮಬಲ ಸಾಧಿಸಿದ್ದರಿಂದ ಹೆಚ್ಚುವರಿ ಸಮಯಕ್ಕೆ ಪಂದ್ಯ ವಿಸ್ತರಿಸಲಾಯಿತು. ಹೆಚ್ಚುವರಿ ಸಮಯದಲ್ಲಿ ಕ್ರೊವೇಷಿಯಾದ ಮಾರಿಯೋ ಮ್ಯಾಂಡ್ಕುಕಿಕ್ ಗೋಲು ಭಾರಿಸುವ ಮೂಲಕ ಕ್ರೊವೇಷಿಯಾ ತಂಡ ಮೇಲುಗೈ ಸಾಧಿಸುವಂತೆ ನೋಡಿಕೊಂಡರು.

ಅಂತಿಮವಾಗಿ ಪಂದ್ಯದ ಅವಧಿ ಮುುಕ್ತಾಯದ ವೇಳೆಗೆ ಕ್ರೊವೇಷಿಯಾ ತಂಡ 2-1 ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಇದೇ ಮೊದಲ ಬಾರಿಗೆ ಫೈನಲ್ ಗೇರಿತು.

ಇನ್ನು ಇದೇ ಭಾನುವಾರ ಫೈನಲ್ ಪಂದ್ಯ ನಡೆಯಲಿದ್ದು, ಫೈನಲ್ ನಲ್ಲಿ ಕ್ರೊವೇಷಿಯಾ ತಂಡ ಫ್ರಾನ್ಸ್ ತಂಡವನ್ನು ಎದುರಿಸಲಿದೆ.

Comments are closed.